ಮಧ್ಯವರ್ತಿಯನ್ನು ದುಬೈಯಲ್ಲಿ ಭೇಟಿಯಾಗಿದ್ದ ಕಾಂಗ್ರೆಸ್ ನಾಯಕ: ಬಿಜೆಪಿ ಸಂಸದ ತ್ಯಾಗಿ ಆರೋಪ
ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ
ಹೊಸದಿಲ್ಲಿ, ಮೇ 7: ಇಟಲಿಯ ತನಿಖೆದಾರರು 2013ರ ಫೆ.12ರಂದು ಫಿನ್‌ಮೆಕಾನಿಕಾದ ಆಗಿನ ಅಧ್ಯಕ್ಷ ಗಿಸೆವ್ ಓರ್ಸಿಯನ್ನು ಬಂಧಿಸಿದ ಬಳಿಕ ಯುಪಿಎ ಸರಕಾರ ಕಂಗಾಲಾಗಿತ್ತು. ಕೇವಲ ಮೂರೇ ತಾಸುಗಳಲ್ಲಿ ಅದು ಆಗಸ್ಟಾ ವೆಸ್ಟ್‌ಲ್ಯಾಂಡ್ ಕಡತಗಳನ್ನು ತನಿಖೆಗಾಗಿ ಸಿಬಿಐಗೆ ಕಳುಹಿಸಿತ್ತೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ. ಇಟಲಿಯು 2011ರಲ್ಲಿ ತನಿಖೆ ಆರಂಭಿಸಿದ್ದರೂ, ಕಾಂಗ್ರೆಸ್ ಸರಕಾರವು ಹೆಲಿಕಾಪ್ಟರ್ ಖರೀದಿ ವ್ಯವಹಾರವನ್ನು ಮುಂದುವರಿಸಿತ್ತು. ಮೂರು ಹೆಲಿಕಾಪ್ಟರ್‌ಗಳು ಪೂರೈಕೆಯಾಗಿದ್ದವು. ಯುಪಿಎ ಸರಕಾರದ ಕ್ರಮವು ಕಡ್ಡಾಯವಾಗಿ ಫಿನ್‌ಮೆಕಾನಿಕಾ ಅಧಿಕಾರಿಗಳ ಬಂಧನದಿಂದ ಪ್ರೇರಿತವಾದುದಗಿತ್ತು. ಅದು ಯಾವುದೇ ಪ್ರಗತಿಪರ ಕ್ರಮ ಕೈಗೊಳ್ಳಲಿಲ್ಲವೆಂದು ಅವರು ಹೇಳಿದರು. ಪಾರಿಕ್ಕರ್, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿಯವರ ಮೇಲೆ ಸಹಾನುಭೂತಿ ತೋರಿಸಲು ಯತ್ನಿಸಿ, ಅವರನ್ನು ‘ಬೇಚಾರಾ (ಬಡಪಾಯಿ)’ ಎಂದು ಕರೆದರು.
ಬಡಪಾಯಿ ಆ್ಯಂಟನಿ ಸಾಹೇಬರ ಕೈಗಳನ್ನು ಕಟ್ಟಿಹಾಕಲಾಗಿತ್ತು. ಪ್ರಕರಣದ ಸಂಬಂಧ ಇಟಲಿಯಲ್ಲಿ ಬಂಧನವೊಂದು ನಡೆದೊಡನೆಯೇ ಆ್ಯಂಟನಿ ಅಕ್ಷರಶಃ ಕಂಗಾಲಾಗಿದ್ದರು. ಏಕೆಂದರೆ, ಆ್ಯಂಟನಿ ತನ್ನ ವರ್ಚಸನ್ನು ರಕ್ಷಿಸ ಬಯಸಿದ್ದರು. ಎರಡು ಅಥವಾ ಮೂರು ತಾಸುಗಳೊಳಗೆ ಅವರು ಕಡತಗಳಿಗೆ ಚಲನೆ ನೀಡಿದರು. ದಾಖಲೆಗಳನ್ನು ಮುಕ್ತಗೊಳಿಸಿದರು ಹಾಗೂ ಸಿಬಿಐ ತನಿಖೆಗೆ ಆದೇಶಿಸಿದರೆಂದು ಅವರು ಹೇಳಿದರು.
ಆಗಸ್ಟಾ ವೆಸ್ಟ್‌ಲ್ಯಾಂಡ್ ರೂ.3,600 ಕೋಟಿಗಳ ವ್ಯವಹಾರವನ್ನು ಪಡೆಯಲು ಯುಪಿಎ ಸರಕಾರ ‘ಎಲ್ಲವನ್ನೂ ಮಾಡಿತ್ತೆಂದು’ ಪಾರಿಕ್ಕರ್ ಆರೋಪಿಸಿದರು.
ಸಿಬಿಐ ಪ್ರಕರಣವನ್ನು ಅಡಿಗೆ ಹಾಕಿ ಕುಳಿತಿತ್ತು. 2014ರ ಜನವರಿಯವರೆಗೆ ಅದು ಏನನ್ನೂ ಮಾಡಿಲಿಲ್ಲ. ಸಿಬಿಐ ಹಾಗೂ ಜಾರಿನಿರ್ದೇನಾಲಯ (ಇ.ಡಿ) ಸರಿಯಾಗಿ ಕೆಲಸ ಮಾಡುವಂತೆ ತಾನೀಗ ಖಚಿತಪಡಿಸಲಿದ್ದೇನೆಂದು ಅವರು ತಿಳಿಸಿದರು.
ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಇತ್ತೀಚೆಗೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಧ್ಯವರ್ತಿ ಕ್ರಿಶ್ಚನ್ ಮೈಕಲ್‌ನನ್ನು ದುಬೈಯಲ್ಲಿ ಭೇಟಿಯಾಗಿದ್ದರೆಂದು ಈ ಮೊದಲು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದರು. ಆಗಸ್ಟಾ ವೆಸ್ಟ್‌ಲ್ಯಾಂಡ್ ವ್ಯವಹಾರದ ಕುರಿತಾದ ಇಟಲಿ ನ್ಯಾಯಾಲಯದ ತೀರ್ಪಿನಲ್ಲಿ ಸೋನಿಯಾ ಗಾಂಧಿಯವರ ಹೆಸರು 4ಬಾರಿ ಉಲ್ಲೇಖವಾಗಿದೆ ಎನ್ನುವ ಮೂಲಕ ಅವರು ಕಾಂಗ್ರೆಸ್ ಅಧ್ಯಕ್ಷೆಯ ಮೇಲೆ ತೀವ್ರ ದಾಳಿ ನಡೆಸಿದ್ದರು.
ಇದೇ ವೇಳೆ, ಶುಕ್ರವಾರ ಇ.ಡಿ. ನಡೆಸಿದ ವಿಚಾರಣೆಯ ವೇಳೆ ಐಎಎಫ್‌ನ ಮಾಜಿ ದಂಡನಾಯಕ ಎಸ್.ಪಿ.ತ್ಯಾಗಿ, ಯಾವನೇ ಮಧ್ಯವರ್ತಿಯೊಂದಿಗೆ ಕಾನೂನು ಬಾಹಿರ ವ್ಯವಹಾರವನ್ನು ತಾನು ನಡೆಸಿಲ್ಲವೆಂದು ಪ್ರತಿಪಾದಿಸಿದ್ದರು. ಇನ್ನೊಂದೆಡೆ, ಅವರ ಸೋದರ ಸಂಬಂಧಿ ಸಂಜೀವ ತ್ಯಾಗಿ, ತಾನು ಐರೋಪ್ಯ ಮಧ್ಯವರ್ತಿಗಳಾದ ಕಾರ್ಲೊ ಗೆರೊಸಾ ಹಾಗೂ ಗೀಡೊ ಹಶ್ಕ್‌ರೊಂದಿಗೆ ಹಣಕಾಸು ವ್ಯವಹಾರ ನಡೆಸಿದ್ದೇನೆಂದು ಸಿಬಿಐಯ ಮುಂದೆ ಹೇಳಿದ್ದಾರೆ. ಸಂಜೀವ ತ್ಯಾಗಿ ಹಾಗೂ ಇನ್ನೊಬ್ಬ ಆರೋಪಿ ಗೌತಂ ಖೇತಾನ್, ಶುಕ್ರವಾರದ ವಿಚಾರಣೆಯ ವೇಳೆ ಅನೇಕ ವಿಷಯಗಳ ಬಗ್ಗೆ ನುಣುಚಿಕೊಂಡರು ಹಾಗೂ ಮಾಹಿತಿಯನ್ನು ಅಡಗಿಸಲು ಯತ್ನಿಸಿದರೆಂದು ಸಿಬಿಐ ಮೂಲಗಳು ತಿಳಿಸಿವೆ.
ಎಸ್.ಪಿ. ತ್ಯಾಗಿಯವರೊಂದಿಗೆ ಆಸ್ತಿ ವ್ಯವಹಾರ ನಡೆಸಿರುವುದನ್ನು ಸಂಜೀವ್ ಒಪ್ಪಿಕೊಂಡಿದ್ದಾರೆ.







