ಅಖಂಡ ಭಾರತ ಭೂಪಟ ತೋರಿಸುವ ಆರೆಸ್ಸೆಸ್‌ಗೆ ಶಿಕ್ಷೆಯಾಗುವುದೇ?
ಹೊಸದಿಲ್ಲಿ, ಮೇ 7: ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದ ಬಿಜೆಪಿ ಸರಕಾರ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದೆ. ಹೈದರಾಬಾದ್ ಹಾಗೂ ದಿಲ್ಲಿಯ ವಿದ್ಯಾರ್ಥಿಗಳನ್ನು ಗುರಿಯಾಗಿಸುವುದರಿಂದ ಹಿಡಿದು ಇತ್ತೀಚಿಗಿನ ರಾಷ್ಟ್ರೀಯತೆ, ದೇಶದ್ರೋಹ ವಿವಾದ ಹಾಗೂ ಭಾರತ್ ಮಾತಾ ಕಿ ಜೈ ಘೋಷಣೆಯ ವಿವಾದಗಳು ಎಲ್ಲವನ್ನೂ ಸ್ಪಷ್ಟಪಡಿಸುತ್ತಿವೆ. ಇವುಗಳಿಗೆ ಹೊಸ ಸೇರ್ಪಡೆಯೆಂಬಂತೆ ಈಗ ಸರಕಾರವು ನಕ್ಷೆಯಲ್ಲಿ ಭಾರತದ ಭೂಪಟವನ್ನು ತಪ್ಪಾಗಿ ತೋರಿಸುವವರಿಗೆಏಳು ವರ್ಷಗಳ ಜೈಲು ಶಿಕ್ಷೆಯಲ್ಲದೆ ಒಂದು ಸಣ್ಣ ನಗರದ ವಾರ್ಷಿಕ ಆದಾಯಕ್ಕೆ ಸಮನಾದ ಮೊತ್ತ ಅಂದರೆ ರೂ. 100 ಕೋಟಿ ದಂಡ ವಿಧಿಸುವ ಕಾನೂನೊಂದನ್ನು ಜಾರಿಗೊಳಿಸುವ ಪ್ರಸ್ತಾಪ ಮುಂದಿಟ್ಟಿದೆ.
ನಿಜ ಹೇಳಬೇಕೆಂದರೆ, ದೇಶದ ಒಟ್ಟು ಭೂಮಿಗಿಂತ ಹೆಚ್ಚಿನಭೂಮಿ ಹೊಂದಿದೆಯೆಂದು ಸರಕಾರವೇ ವಾದಿಸುತ್ತಿದೆ. ಭಾರತದ ನಕ್ಷೆಯಲ್ಲಿ ಕಾಣುವ ಜಮ್ಮು ಕಾಶ್ಮೀರದ ವಿಚಾರ ಇರಲಿ-ವಾಸ್ತವವಾಗಿ ಅಷ್ಟು ಭೂಮಿ ಭಾರತ ಹೊಂದಿಲ್ಲ. ಪಶ್ಚಿಮ ಜಮ್ಮು ಕಾಶ್ಮೀರದ ಹೆಚ್ಚಿನ ಭಾಗಗಳು ಪಾಕಿಸ್ತಾನದ ಹಿಡಿತದಲ್ಲಿದ್ದರೆ ಈಶಾನ್ಯದ ಅಕ್ಸಾಯ್ ಚಿನ್ ಪ್ರಾಂತವು ಚೀನಾದ ಹಿಡಿತದಲ್ಲಿದೆ. ಈ ವಾಸ್ತವತೆಯ ಚಿತ್ರಣವನ್ನೇ ನಕ್ಷೆಯಲ್ಲಿ ತೋರಿಸಿದರೂ 1961ರ ಕಾಯ್ದೆಯಂತೆ ಸರಕಾರ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಹಾಗೂ ಆರು ತಿಂಗಳ ಜೈಲು ಶಿಕ್ಷೆಗೊಳಗಾಗಬಹುದು. ಆದರೆ ಮೋದಿ ಸರಕಾರ ಮನಸ್ಸು ಮಾಡಿದಲ್ಲಿ ಈ ಶಿಕ್ಷೆ ಏಳು ವರ್ಷಗಳ ತನಕವೂ ಹೋಗಬಹುದು.
ಇಲ್ಲಿ ಗಮನಿಸತಕ್ಕ ಅಂಶವೇನೆಂದರೆ ದೇಶದಲ್ಲಿರುವ ಶಕ್ತಿಶಾಲಿ ಸಂಘಟನೆಯೊಂದು ದೇಶದ ಗಡಿಯನ್ನು ತಪ್ಪಾಗಿ ತೋರಿಸುವುದು ತನ್ನ ಹಕ್ಕೆಂದೇತಿಳಿದಿದೆ. ಸಂಘ ಪರಿವಾರ ಅಖಂಡ ಭಾರತ ಪರಿಕಲ್ಪನೆಯಲ್ಲಿ ನಂಬಿಕೆಯಿಟ್ಟಿದ್ದು ಇದನ್ನು ಪರಿಗಣನೆಗೆ ತೆಗೆದುಕೊಂಡರೆ, ಅಖಂಡ ಭಾರತ ಈಗಿನ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನು ಒಳಗೊಂಡಿದೆ. ಕೆಲವೊಂದು ಇತರ ಆವೃತ್ತಿಗಳಲ್ಲಿ ಇವುಗಳ ಹೊರತಾಗಿ ಅಫ್ಘಾನಿಸ್ತಾನ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಟಿಬೆಟ್ ಕೂಡ ಸೇರಬಹುದು.
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಮ್ಮ ಗುರಿ ಅಖಂಡ ಭಾರತವೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.
ಹಾಗಾದರೆ ಈಗ ಪ್ರಸ್ತಾಪಿಸಲಾದ ಕಾನೂನು ಜಾರಿಗೆ ಬಂದರೆ ಏನಾಗಬಹುದು? ಅಖಂಡ ಭಾರತ ಪರಿಕಲ್ಪನೆಯಲ್ಲಿ ಕೂಡ ಭಾರತದ ಭೂಪಟ ತಪ್ಪಾಗಿದೆ. ಹೀಗಿರುವಾಗ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಶಿಕ್ಷೆಗೆ ಗುರಿಯಾಗುವರೇ ಅಥವಾ ತನ್ನ ಅಖಂಡ ಭಾರತ ಕನಸನ್ನು ಬಿಜೆಪಿ ತ್ಯಜಿಸಬೇಕಾಗಬಹುದೇ?







