ಉತ್ತರಾಖಂಡ 9 ಶಾಸಕರ ಅನರ್ಹತೆ: ನಾಳೆ ಹೈಕೋರ್ಟ್ ತೀರ್ಪು

ನೈನಿತಾಲ್,ಮೇ 7: ಒಂಬತ್ತು ಬಂಡುಕೋರ ಕಾಂಗ್ರೆಸ್ ಶಾಸಕರ ಅನರ್ಹತೆ ಕುರಿತು ತನ್ನ ತೀರ್ಪನ್ನು ಶನಿವಾರ ಉತ್ತರಾಖಂಡ ಉಚ್ಚ ನ್ಯಾಯಾಲಯವು ಮೇ 9ಕ್ಕೆ ಕಾಯ್ದಿರಿಸಿದೆ. ಇದರೊಂದಿಗೆ ಮೇ 10ರಂದು ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಕೋರಲಿರುವ ಹಿನ್ನೆಲೆಯಲ್ಲಿ ಈ ಶಾಸಕರ ಗತಿ ಏನಾಗಲಿದೆಯೋ ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ವಾದವಿವಾದಗಳನ್ನು ಆಲಿಸಿದ ಬಳಿಕ ನ್ಯಾ.ಯು.ಸಿ.ಧ್ಯಾನಿ ಅವರು, ವಿಚಾರಣೆ ಪೂರ್ಣಗೊಂಡಿದೆ. ಮೇ 9ರಂದು ಬೆಳಗ್ಗೆ 10:15ಕ್ಕೆ ತೀರ್ಪನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮತದಾನದ ಸಂದರ್ಭ ಬಂಡುಕೋರ ಶಾಸಕರ ಅನರ್ಹತೆ ಮುಂದುವರಿದಿದ್ದರೆ ಅವರು ಮತದಾನದಲ್ಲಿ ಭಾಗವಹಿಸುವಂತಿಲ್ಲ ಎಂದು ಸದನದಲ್ಲಿ ಬಲಾಬಲ ಪರೀಕ್ಷೆಗೆ ಆದೇಶಿಸುತ್ತ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತ್ತು.
70 ಸದಸ್ಯಬಲದ ವಿಧಾನಸಭೆಯಲ್ಲಿ ಪ್ರಸ್ತುತ ಬಿಜೆಪಿ 28,ಕಾಂಗ್ರೆಸ್ 27ಮತ್ತು ಬಿಎಸ್‌ಪಿ ಇಬ್ಬರು ಶಾಸಕರನ್ನು ಹೊಂದಿದ್ದರೆ,ಮೂವರು ಪಕ್ಷೇತರರು ಮತ್ತು ಓರ್ವ ಉತ್ತರಾಖಂಡ ಕ್ರಾಂತಿದಳ ಶಾಸಕರಿದ್ದಾರೆ. ಒಂಬತ್ತು ಬಂಡುಕೋರ ಕಾಂಗ್ರೆಸ್ ಸದಸ್ಯರು ಅನರ್ಹಗೊಂಡಿದ್ದಾರೆ. ಬಿಜೆಪಿಯೂ ಓರ್ವ ಬಂಡುಕೋರ ಶಾಸಕನನ್ನು ಹೊಂದಿದೆ.







