ಸಾದಿಕ್ ಖಾನ್ ಲಂಡನ್‌ನ ಪ್ರಥಮ ಮುಸ್ಲಿಮ್ ಮೇಯರ್

ಲಂಡನ್, ಮೇ 7: ಸಾದಿಕ್ ಖಾನ್ ಲಂಡನ್‌ನ ಪ್ರಥಮ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರನ್ನು ತೀವ್ರವಾದಿಗಳೊಂದಿಗೆ ಸಮೀಕರಿಸಿ ಕಳಂಕಿತಗೊಳಿಸುವ ಪ್ರಯತ್ನಗಳನ್ನು ಮತದಾರರು ತಿರಸ್ಕರಿಸಿದ್ದಾರೆ. ದಕ್ಷಿಣ ಲಂಡನ್‌ನ ಬಸ್ ಚಾಲಕರೋರ್ವರ ಮಗ ಚುನಾವಣೆಯಲ್ಲಿ ನಿರ್ಣಾಯಕ ವಿಜಯವನ್ನು ಸಂಪಾದಿಸಿದ್ದಾರೆ.
ತನ್ನ ವಿಜಯವನ್ನು ‘‘ಭೀತಿಯ ವಿರುದ್ಧ ಭರವಸೆಯ ವಿಜಯ ಮತ್ತು ವಿಭಜನೆಯ ವಿರುದ್ಧ ಏಕತೆಯ ವಿಜಯ’’ ಎಂಬುದಾಗಿ ನೂತನ ಮೇಯರ್ ಬಣ್ಣಿಸಿದ್ದಾರೆ. ಲೇಬರ್ ಪಕ್ಷದ ಅಭ್ಯರ್ಥಿ ಸಾದಿಕ್ 13 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದರು. ಅಂದರೆ ಚಲಾವಣೆಯಾದ ಮತಗಳ 57 ಶೇಕಡವನ್ನು ಅವರು ಗಳಿಸಿದರು. ಅವರ ಎದುರಾಳಿ ಕನ್ಸರ್ವೇಟಿವ್ ಪಕ್ಷದ ಝ್ಯಾಕ್ ಗೋಲ್ಡ್‌ಸ್ಮಿತ್ 43 ಶೇಕಡ ಮತಗಳಿಗೆ ತೃಪ್ತರಾದರು. ಈ ಬಾರಿ 45.6 ಶೇಕಡ ಮತದಾನವಾಗಿದ್ದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ತಮ ಮತದಾನವಾಗಿದೆ. 2012ರಲ್ಲಿ ಕೇವಲ 38 ಶೇಕಡ ಮತದಾನವಾಗಿತ್ತು. ಅರ್ಧ ಮತ ಎಣಿಕೆ ಆಗುತ್ತಿರುವ ಹೊತ್ತಿಗೆ ಸಾದಿಕ್‌ರ ವಿಜಯ ಖಚಿತವೆಂಬಂತೆ ಗೋಚರಿಸಿತ್ತು. ಮಧ್ಯರಾತ್ರಿಯ ಬಳಿಕ ಅಧಿಕೃತ ಘೋಷಣೆ ಹೊರಬಿತ್ತು.
ಕನ್ಸರ್ವೇಟಿವ್ ಪಕ್ಷದ ಮೇಯರ್ ಬೊರಿಸ್ ಜಾನ್ಸನ್‌ರ ಸ್ಥಾನದಲ್ಲಿ ಸಾದಿಕ್ ಬಂದಿದ್ದಾರೆ. ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ಕಾಳಗದಲ್ಲಿ ನಕಾರಾತ್ಮಕ ಅಂಶಗಳನ್ನು ತರಲಾಗಿತ್ತು. ಶ್ರೀಮಂತ ಪರಿಸರವಾದಿ ಗೋಲ್ಡ್‌ಸ್ಮಿತ್ ಸಾದಿಕ್‌ರನ್ನು ವಿಭಜನವಾದಿ ಎಂಬುದಾಗಿ ಕರೆದಿದ್ದರು ಹಾಗೂ ಅವರು ಇಸ್ಲಾಮಿಕ್ ತೀವ್ರವಾದಿಗಳೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬುದಾಗಿ ಆರೋಪಿಸಿದ್ದರು. ಈ ಆರೋಪವನ್ನು ಪ್ರಧಾನಿ ಡೇವಿಡ್ ಕ್ಯಾಮರೂನ್ ಮತ್ತು ಕನ್ಸರ್ವೇಟಿವ್ ಪಕ್ಷದ ಇತರ ಹಿರಿಯ ನಾಯಕರೂ ಪುನರುಚ್ಚರಿಸಿದ್ದಾರೆ.
ಅಧಿಕಾರ ಸ್ವೀಕಾರ
ದಾಖಲೆಯ ಅಂತರದಿಂದ ವಿಜಯಿಯಾಗಿರುವ ಸಾದಿಕ್ ಖಾನ್ ಶನಿವಾರ ಲಂಡನ್‌ನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಲಂಡನ್‌ನ ಸೌತ್‌ವಾರ್ಕ್ ಕತೀಡ್ರಲ್‌ನಲ್ಲಿ ನಡೆದ ಬಹುಧರ್ಮೀಯ ಸಮಾರಂಭವೊಂದರಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಹೋರಾಟದ ಬದುಕು
ಖಾನ್ ಅವರ ರಾಜಕೀಯ ಯಶೋಗಾಥೆ ಒಂದು ಜೀವಂತ ದಂತಕತೆಯಂತಿದೆ. 1970ರಲ್ಲಿ ಲಂಡನ್‌ನಲ್ಲಿ ಪಾಕಿಸ್ತಾನದ ದಂಪತಿಗೆ ಜನಿಸಿದ ಖಾನ್, ಹೆತ್ತವರ ಏಳು ಮಕ್ಕಳ ಪೈಕಿ ಐದನೆಯವರು. ಅವರಿಗೆ ಒಬ್ಬ ಸೋದರಿ ಇದ್ದಾರೆ. ಅವರ ತಂದೆ ಲಂಡನ್‌ನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡಿದವರು. ಅವರ ಒಬ್ಬ ಸೋದರ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರರಾಗಿ ಕೆಲಸ ಮಾಡಿರುವ ಅವರಿಗೆ ಬಹಳಷ್ಟು ಜೀವಬೆದರಿಕೆಗಳೂ ಇದ್ದವು. ಸಲಿಂಗಕಾಮಿಗಳ ಪರವಾದ ಹೋರಾಟ ಅವರಿಗೆ ಜೀವ ಬೆದರಿಕೆಗಳನ್ನೂ ಒಡ್ಡಿತ್ತು. ಪತ್ನಿ ಸಾದಿಯ್ಯಿ ಮತ್ತು ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದಾರೆ.







