ಅಡೆತಡೆಗಳ ವಿರುದ್ಧ ಓಡುತ್ತಿರುವ ಫೆಲೆಸ್ತೀನ್ ಯುವ ಪ್ರತಿಭೆ ಇನಸ್ ನೌಫಲ್
ಗಾಝಾದ ಪ್ರಪ್ರಥಮ ಹಾಗೂ ಏಕೈಕ ಸ್ಪರ್ಧಾತ್ಮಕ ಮಹಿಳಾ ಓಟಗಾತಿ

ತಮ್ಮ ಹೊಳೆಯುವ ಹಸಿರು ಶೂಗಳ ಲೇಸ್ ಕಟ್ಟುತ್ತಾ ಇನಸ್ ನೌಫಲ್ ನಿತ್ಯದ ಓಟದ ಅಭ್ಯಾಸಕ್ಕೆ ಸಿದ್ಧವಾಗುತ್ತಾರೆ. ಗಾಝದ ಮೊದಲ ಮತ್ತು ಏಕೈಕ ಸ್ಪರ್ಧಾತ್ಮಕ ಮಹಿಳಾ ಓಟಗಾತಿ ಇವರು. 15 ವರ್ಷದ ನೌಫಲ್ ರಸ್ತೆಗಳಲ್ಲಿ ಓಡುವಾಗ ತಲೆ ಕೆಳಗೆ ಮಾಡಿರುತ್ತಾರೆ.

ಓಟ ನನ್ನ ಜೀವನ. ನಿದ್ದೆ ಮಾಡುವ ಮೊದಲು ಮರುದಿನದ ಓಟದ ಬಗ್ಗೆಯೇ ಯೋಚಿಸುತ್ತೇನೆ ಎನ್ನುತ್ತಾರೆ ನೌಫಲ್. ನೌಫಲ್ ಕಳೆದ ವರ್ಷ ಓಟ ಆರಂಭಿಸಿದ್ದರು. ಸ್ಥಳೀಯ ತರಬೇತುದಾರ ಸಮಿ ನಟೀಲ್ ಅಲ್ ಬಲದ್ ಆಕೆಗೆ ಸಲಹೆ ನೀಡುತ್ತಾರೆ. ನೌಫಲ್ ತಂದೆ ಮಹಮೌದ್ ಮಗಳ ಹಿಂದೆಯೇ ಕಾರಿನಲ್ಲಿ ಸುಸ್ತಾಗದೆ ಹೋಗುತ್ತಾರೆ. ಅಧಿಕಾರಿಗಳು ಅಥವಾ ಸಮುದಾಯದಿಂದ ಮಗಳಿಗೆ ತೊಂದರೆಯಾದರೆ ತಕ್ಷಣವೇ ಮಧ್ಯಪ್ರವೇಶಿಸುತ್ತಾರೆ. ಕೆಲವರು ಯುವತಿಯರು ಓಡುವುದನ್ನು ವಿರೋಧಿಸಿ ಕೆಟ್ಟ ಮಾತು ಆಡುತ್ತಾರೆ. ಅದು ನನಗೆ ಬೇಸರ ತರಿಸುತ್ತದೆ. ಆದರೆ ಅದನ್ನು ನಾನು ಇನಸ್ ಮುಂದೆ ಬರಲು ಬಿಡುವುದಿಲ್ಲ. ಆಕೆಯ ಕನಸನ್ನು ಆಕೆಯಿಂದ ಕಿತ್ತುಕೊಳ್ಳಲು ನಾನು ಬಯಸುವುದಿಲ್ಲ ಎನ್ನುತ್ತಾರೆ ಮಹಮೌದ್. ಮಹಿಳೆ ಮತ್ತು ಯುವತಿಯರ ಬಗ್ಗೆ ಸಮಾಜದ ಅಭಿಪ್ರಾಯವನ್ನು ಆಕೆ ಬದಲಿಸಬೇಕು ಎನ್ನುವುದು ಅವರ ಆಶಯ.

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ಯಾಲೆಸ್ತೀನಿಗಾಗಿ ಪದಕ ಗೆಲ್ಲುವ ಕನಸು ನೌಫಲ್ ಇಟ್ಟುಕೊಂಡಿದ್ದಾರೆ. ಆದರೆ ವೃತ್ತಿಪರ ಅಥ್ಲೀಟುಗಳ ಅಭ್ಯಾಸಕ್ಕೆ ಗಾಝಾದಲ್ಲಿ ಹೆಚ್ಚು ಸೌಲಭ್ಯಗಳಿಲ್ಲ. ದಶಕದ ಒಳಗೆ ಇಸ್ರೇಲ್ ಜೊತೆಗಿನ ಮೂರು ಯುದ್ಧ ಸಣ್ಣ ಕರಾವಳಿ ಪಟ್ಟಣದಲ್ಲಿ ಬಹಳ ನಷ್ಟ ತಂದಿದೆ. ಹೀಗಾಗಿ ಕ್ರೀಡೆ ಮತ್ತು ಮನೋರಂಜನಾ ಚಟುವಟಿಕೆಗಳಿಗೆ ಕಡಿಮೆ ಅವಕಾಶವಿದೆ.

ಕಳೆದ ತಿಂಗಳು ನೌಫಲ್ ಮತ್ತೊಂದು ಹಿಂಜರಿತ ಕಂಡರು. ಗಾಝಾದ ಇತರ ಡಜನ್ ಓಟಗಾರರು ಮತ್ತು ಆಕೆಗೆ ಪ್ಯಾಲೆಸ್ತೀನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಬೆತೆಲ್ಹೆಮ್ ಹೋಗಲು ಇಸ್ರೇಲ್ ಪರವಾನಗಿ ಕೊಡಲಿಲ್ಲ. ಈ ಸ್ಪರ್ಧೆಯು ಪ್ಯಾಲೆಸ್ತೀನಿಯರ ಚಲನವಲನದ ಮೇಲೆ ಇಸ್ರೇಲ್ ಹೇರಿರುವ ನಿಯಂತ್ರಣಗಳ ಮೇಲೆ ಜಗತ್ತಿನ ಬೆಳಕು ಚೆಲ್ಲುವ ಉದ್ದೇಶ ಹೊಂದಿತ್ತು.




ಕೃಪೆ:www.aljazeera.com







