ಕಾರನ್ನು ಓವರ್ಟೇಕ್ ಮಾಡಿದ ತಪ್ಪಿಗೆ ಗುಂಡಿಟ್ಟು ಯುವಕನ ಕೊಲೆ

ಗಯಾ, ಮೇ 8: ಬಿಹಾರದ ಎಂಎಲ್ಸಿ ಪುತ್ರನ ಕಾರನ್ನು ಓವರ್ಟೇಕ್ ಮಾಡಿದ ತಪ್ಪಿಗೆ 19ರ ಹರೆಯದ ಯುವಕನನ್ನು ಗುಂಡಿಟ್ಟು ಕೊಲೆ ಮಾಡಿದ ಘಟನೆ ಬಿಹಾರದ ಗಯಾ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಉದ್ಯಮಿಯ ಮಗ ಆದಿತ್ಯ ಸಚಿದೇವ್ ಎಂಎಲ್ಸಿ ಮಗ ಹಾರಿಸಿದ ಗುಂಡಿಗೆ ಬಲಿಯಾದ ಯುವಕ.
ಶನಿವಾರ ರಾತ್ರಿ ಸಚಿದೇವ್ ಅವರು ತನ್ನ ಸ್ನೇಹಿತರೊಂದಿಗೆ ರೇಂಜ್ ರೋವೆರ್ ಕಾರ್‌ನಲ್ಲಿ ತೆರಳುತ್ತಿದ್ದರು. ಅವರಿಗಿಂತ ಮುಂದಿದ್ದ ಬಿಹಾರದ ಜೆಡಿ(ಯು)ಎಂಎಲ್‌ಸಿ ಮನೋರಮಾ ದೇವಿ ಅವರಿಗೆ ಸೇರಿದ ಕಾರ‍್ ಸುವ್‌ನ್ನು ಓವರ‍್ಟೇಕ್ ಮಾಡಿದರೆನ್ನಲಾಗಿದೆ. ಈ ಕಾರ್ ನಲ್ಲಿ ಮನೋರಮಾ ಪುತ್ರ ರಾಕಿ ಇದ್ದರು. ತನ್ನ ಕಾರನ್ನು
ಓವರ್ಟೇಕ್ ಮಾಡಿದ ಕಾರಣಕ್ಕಾಗಿ ಕೋಪಗೊಂಡ ಮನೋರಮಾ ದೇವಿ ಪುತ್ರ ರಾಕಿ ಗುಂಡು ಹಾರಿಸಿದ ಪರಿಣಾಮವಾಗಿ ಸಚಿದೇವ್ ಗಂಭೀರ ಗಾಯಗೊಂಡು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೋರಮಾ ದೇವಿ ಪತಿ ಬಿಂದಿ ಯಾದವ್ ಬಿಹಾರದ ಓರ್ವ ಕುಖ್ಯಾತ ವ್ಯಕ್ತಿ. ಸಚಿದೇವ್‌ಗೆ ಗುಂಡು ಹಾರಿಸಿದ ಆತನ ಪುತ್ರ ರಾಕಿ ಪರಾರಿಯಾಗಿದ್ದಾನೆ. ಅವನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಿಂದಿ ಯಾದವ್ ಮತ್ತು ಆತನ ಅಂಗರಕ್ಷಕ ರಾಜೇಶ್ ಕುಮಾರ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.







