ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡ ಕುಮಾರಸ್ವಾಮಿ .. ಪುತ್ರನ ಸಿನಿಮಾ ತಯಾರಿಯಲ್ಲಿ ಬ್ಯುಸಿ ... !
ಬೆಂಗಳೂರು, ಮೇ 8:

ಬೆಂಗಳೂರು, ಮೇ 8: ಕಾಂಗ್ರೆಸ್ ಮತ್ತು ಬಿಜೆಪಿ ಬರುವ ಜೂನ್‌ನಲ್ಲಿ ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತ್ತು ರಾಜ್ಯಸಭೆಯ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಬ್ಯುಸಿಯಾಗಿವೆ. ಆದರೆ ಜೆಡಿಎಸ್ ಪಾಳಯದಲ್ಲಿ ಅಂತಹ ಯಾವುದೇ ವಾತಾವರಣ ಕಾಣಿಸುತ್ತಿಲ್ಲ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡ ಅವರು ಪಕ್ಕದ ರಾಜ್ಯ ಕೇರಳದಲ್ಲಿ ಮೇ 16 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಮಾತ್ರ ರಾಜಕೀಯದಿಂದ ದೂರವಾಗಿದ್ದಾರೆ. ಅವರ ಗಮನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಬಹುನಿರೀಕ್ಷಿತ ಚೊಚ್ಚಲ ಸಿನಿಮಾ ’ಜಾಗ್ವಾರ್ ’ನ ಶೂಟಿಂಗ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಶೂಟಿಂಗ್ ಗೆ ಸೂಕ್ತ ಜಾಗವನ್ನು ಆಯ್ದುಕೊಳ್ಳಲು ಈಗಾಗಲೇ ಬಲ್ಗೇರಿಯಾಕ್ಕೆ ತೆರಳಿದ್ದಾರೆ. ವಿದೇಶದಲ್ಲಿ ಜಾಗ್ವಾರ್ ಚಿತ್ರದ ಶೂಟಿಂಗ್ ನಡೆಯಲಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಇನ್ನೂ ಎರಡು ತಿಂಗಳುಗಳ ಕಾಲ ಸಕ್ರೀಯ ರಾಜಕಾರಣದಿಂದ ದೂರವಾಗಲಿದ್ದಾರೆಂದು ಅವರ ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್‌ನ ಇಬ್ಬರು ವರಿಷ್ಠ ನಾಯಕರ ಅನುಪಸ್ಥಿತಿಯಲ್ಲಿ ಜೆಡಿಎಸ್ ನಾನಾ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ.
ಕುಮಾರಸ್ವಾಮಿ ಬಜೆಟ್ ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ಅಧಿವೇಶನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಇದರ ಪರಿಣಾಮವಾಗಿ ಉಭಯ ಸದನಗಳಲ್ಲೂ ಜೆಡಿಎಸ್ ನ ಧ್ವನಿ ಕೇಳಿಸಲಿಲ್ಲ. ಬಿಜೆಪಿಯ ಧುರೀಣರು ಆಡಳಿತಾರೂಢ ಕಾಂಗ್ರೆಸ್‌ನ್ನು ವಿವಿಧ ವಿಚಾರಗಳಲ್ಲಿ ತರಾಟೆಗೆ ತೆಗೆದುಕೊಂಡರೂ, ಜೆಡಿಎಸ್‌ನ ನಾಯಕರು ಮೂಕಪ್ರೇಕ್ಷರಾಗಿದ್ದರು.
ಜೆಡಿಎಸ್‌ನ ನಾಯಕರುಗಳಾದ ಎನ್.ಚೆಲುವನಾರಾಯಣ ಸ್ವಾಮಿ, ಸಿ.ಎನ್.ಬಾಲಕೃಷ್ಣ, ಝಮೀರ‍್ ಅಹ್ಮದ್ ಮತ್ತು ಇಕ್ಬಾಲ್ ಅನ್ಸಾರಿ ಅವರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಇವರ ಭಿನ್ನಮತವನ್ನು ನಿವಾರಿಸಲು ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ.ದೇವೇ ಗೌಡ ಹಲವು ಸಭೆಗಳನ್ನು ನಡೆಸಿದ್ದರೂ ಫಲಕಾರಿಯಾಗಿಲ್ಲ.
ಹದಿನೈದು ಕೋಟಿ ರೂ.ವೆಚ್ಚದ ಚಿತ್ರ ಜಾಗ್ವಾರ್‌ನ ಶೂಟಿಂಗ್ ಕಳೆದ ಜನವರಿಯಲ್ಲಿ ಆರಂಭಗೊಂಡ ಬಳಿಕ ಕುಮಾರಸ್ವಾಮಿ ಅವರು ಚಿತ್ರದ ನಿರ್ಮಾಣದಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಜಾಗ್ವಾರ‍್ ನ್ನು ಕನ್ನಡದಲ್ಲಿ ಹೊರ ತರುವ ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ಕುಮಾರಸ್ವಾಮಿ ತೆಲುಗಿನಲ್ಲೂ ಚಿತ್ರವನ್ನು ಹೊರತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಇದು ಅವರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.







