' ಟೆರರಿಸ್ಟ್ ಕೋಡ್ ' ಆದ ಗಣಿತದ ಸೂತ್ರ !
ಖ್ಯಾತ ಆರ್ಥಿಕ ತಜ್ಞನನ್ನು ವಿಮಾನದಿಂದ ಕೆಳಗಿಳಿಸಿ ವಿಚಾರಣೆ

ನ್ಯೂಯಾರ್ಕ್ , ಮೇ 8 : ಭಯೋತ್ಪಾದನೆಯ ಭೂತ ಸೃಷ್ಟಿಸಿರುವ ಭಯ ಹಾಗು ಭ್ರಮೆಗಳಿಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ದುಬಾರಿ ಬೆಲೆ ತೆರುತ್ತಿರುವ ಪ್ರಕರಣ ಈಗ ಹೆಚ್ಚು ಕಡಿಮೆ ಪ್ರತಿದಿನ ವರದಿಯಾಗುತ್ತಿವೆ. ಅದರ ತಾಜಾ ಉದಾಹರಣೆಯೊಂದು ಇಲ್ಲಿದೆ. ಫಿಲಾಡೆಲ್ಫಿಯದಿಂದ ಸಿರಾಕ್ಯುಸ್ ಗೆ ಹೋಗುವ ಅಮೇರಿಕನ್ ಏರ್ ಲೈನ್ಸ್ ವಿಮಾನದ ಓರ್ವ ಪ್ರಯಾಣಿಕೆ ನೀಡಿದ ದೂರಿನಿಂದ ವಿಮಾನ ಹೊರಡುವುದು ಎರಡು ಗಂಟೆ ತಡವಾಗಿದೆ. ತನಗೆ ಈ ವಿಮಾನದಲ್ಲಿ ಪ್ರಯಾಣಿಸಲು ಆರೋಗ್ಯ ಸರಿಯಿಲ್ಲ ಎಂದ ಮಹಿಳೆಯನ್ನು ಮೊದಲು ಕೆಳಗಿಳಿಸಿದ ಸಿಬ್ಬಂದಿ ಸ್ವಲ್ಪ ಹೊತ್ತಿನ ಬಳಿಕ ಆಕೆಯ ಪಕ್ಕ ಕೂತಿದ್ದ 40 ವರ್ಷ ವಯಸ್ಸಿನ ವ್ಯಕ್ತಿಯೋಬ್ಬನನ್ನೂ ಕೆಳಗಿಳಿಸಿದರು. ತಕ್ಷಣ ಆತನ ವಿಚಾರಣೆ ನಡೆಸಲಾಯಿತು. ಕಾರಣ - ಆ ಮಹಿಳೆಗೆ ಈ ವ್ಯಕ್ತಿ ಭಯೋತ್ಪಾದಕ ಇರಬಹುದು ಎಂದು ಸಂಶಯ ಬಂದಿದೆ ಅಷ್ಟೇ. ಅದಕ್ಕೆ ಕಾರಣ - ಆತ ಯಾರೊಂದಿಗೂ ಮಾತನಾಡದೆ ನೋಟ್ ಪ್ಯಾಡ್ ಒಂದರಲ್ಲಿ ಏನೋ ಬರೆಯುತ್ತಿದ್ದ. ಅದು ಏನು ಎಂದು ಆಕೆಗೆ ಅರ್ಥವಾಗಲಿಲ್ಲ. ಅಷ್ಟೇ !
ಅ ' ನಿಗೂಢ ವ್ಯಕ್ತಿ' ಪ್ರತಿಷ್ಠಿತ ಐವಿ ಲೀಗ್ ಆರ್ಥಿಕ ತಜ್ಞ , ವಿಶ್ವ ವಿಖ್ಯಾತ ವಿವಿಗಳಾದ ಪೆನ್ಸಿಲ್ವೇನಿಯ, ಪ್ರಿನ್ಸ್ಟನ್ ಹಾಗು ಸ್ಟಾನ್ ಫೋರ್ಡ್ ಗಳಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ , 40 ವರ್ಷದೊಳಗಿನ ಶ್ರೇಷ್ಠ ಇಟಾಲಿಯನ್ ಆರ್ಥಿಕ ತಜ್ಞ ಪ್ರಶಸ್ತಿಗೆ ಪಾತ್ರವಾಗಿರುವ ಗೀಡೋ ಮೆಂಝಿಯೊ ! ಒಂಟಾರಿಯೋದ ಕ್ವೀನ್ಸ್ ವಿವಿಯಲ್ಲಿ ಉಪನ್ಯಾಸ ನೀಡಲು ಅವರು ಪ್ರಯಾಣಿಸುತ್ತಿದ್ದರು.
ವಿಮಾನದ ತಮ್ಮ ಸೀಟಿನಲ್ಲಿ ಅಸೀನರಾದ ಗೀಡೋ ತಮ್ಮ ಪಾಡಿಗೆ ನೋಟ್ ಪ್ಯಾಡ್ ಒಂದರಲ್ಲಿ ಗಣಿತದ ಸೂತ್ರವೊಂದನ್ನು ಬಿಡಿಸುವುದರಲ್ಲಿ ತಲ್ಲೀನರಾಗಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಮಹಿಳೆಗೆ ಇದು ಏನೆಂದು ಅರ್ಥವಾಗಿಲ್ಲ. ಅದಕ್ಕೆ ಆಕೆಯೇ ಅರ್ಥ ಕಲ್ಪಿಸಿಕೊಂಡಿದ್ದಾಳೆ. ಅದೇನೆಂದರೆ , ಈತ ಈ ವಿಮಾನವನ್ನು ಸ್ಪೋಟಿಸಲು ತಯಾರಿ ನಡೆಸುತ್ತಿದ್ದಾನೆ ಎಂದು !
ನೇರವಾಗಿ ಹಾಗೆ ಆರೋಪಿಸಲು ಧೈರ್ಯ ಸಾಲದೆ ತನಗೆ ಆರೋಗ್ಯ ಸರಿಯಿಲ್ಲ , ನನ್ನನ್ನು ಕೆಳಗಿಳಿಸಿ ಎಂದು ವಿಮಾನ ಸಿಬ್ಬಂದಿಗೆ ಚೀಟಿ ಬರೆದು ಕೊಟ್ಟಿದ್ದಾಳೆ. ಕೆಳಗಿಳಿಸಿದ ಮೇಲೆ ತನ್ನ 'ಅನಾರೋಗ್ಯದ ' ನಿಜ ಕಾರಣ ಬಾಯಿ ಬಿಟ್ಟಿದ್ದಾಳೆ.
ವಿಚಾರಣೆಯಲ್ಲಿ ಸತ್ಯ ತಿಳಿದ ಪೊಲೀಸರು ಹಾಗು ವಿಮಾನ ಸಿಬ್ಬಂದಿ ಎರಡು ಗಂಟೆಗಳ ಬಳಿಕ ವಿಮಾನ ಹಾರಾಟಕ್ಕೆ ಎಸ್ ಎಂದಿದ್ದಾರೆ. ಕೊನೆಗೂ ಆ ಮಹಿಳೆ ಬೇರೆ ವಿಮಾನದಲ್ಲೇ ಪ್ರಯಾಣಿಸಿದ್ದಾಳೆ.







