ಜಿಶಾ ಪ್ರಕರಣದಲ್ಲಿ ಮೋದಿಯ ಮೊಸಳೆ ಕಣ್ಣೀರು !: ಕೇರಳ ಗೃಹ ಸಚಿವ ಚೆನ್ನಿತ್ತಲ

ತಿರುವನಂತಪುರಂ, ಮೇ 8: ಪೆರುಂಬಾವೂರಿನ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಸುರಿಸುತ್ತಿರುವುದು ಮೊಸಳೆ ಕಣ್ಣೀರು ಎಂದು ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿರುವುದಾಗಿ ವರದಿಯಾಗಿದೆ. ಚುನಾವಣೆಯನ್ನು ಗಮನದಲ್ಲಿಟ್ಟು ಪ್ರಧಾನಮಂತ್ರಿ ಮತ್ತೊಮ್ಮೆ ಘಟನೆಯನ್ನು ರಾಜಕೀಕರಣಗೊಳಿಸಲು ಯತ್ನಿಸಿದ್ದಾರೆ. ಆ ಮೂಲಕ ಎರಡು ವೋಟು ಹೆಚ್ಚು ಸಿಕ್ಕೀತೆ ಎಂಬುದು ಅವರ ಉದ್ದೇಶವಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಚೆನ್ನಿತ್ತಲ ಬರೆದಿರುವುದಾಗಿ ವರದಿಗಳು ತಿಳಿಸಿವೆ.
ಕೇರಳದ ಭವಿಷ್ಯಕ್ಕೆ ಆತಂಕ ಇದೆ ಎಂದು ಹೇಳುತ್ತಿರುವ ಪ್ರಧಾನಿ ಸಂಘ ಪರಿವಾರದ ಆಡಳಿತದಲ್ಲಿ ಭಾರತದ ಜನರ ಭವಿಷ್ಯದ ಕುರಿತು ಆತಂಕ ಪಡಬೇಕಾಗಿದೆ. ಕೇರಳದಲ್ಲಿ ಬಿಜೆಪಿಯ ಪ್ರಚಾರಕ್ಕೆ ಕಾರ್ಪೊರೇಟ್ ಶಕ್ತಿಗಳು ನೇತೃತ್ವವನ್ನು ವಹಿಸಿಕೊಂಡಿವೆ.ರಾಜ್ಯದಲ್ಲಿ ತಾವರೆ ಅರಳುವುದಿಲ್ಲ ಎಂದು ಖಚಿತವಿದ್ದೂ ಮೋದಿಯ ಅನುಗ್ರಹಕ್ಕೆ ಹಾತೊರೆಯುವವರು ಈ ರೀತಿ ಕೊನೆಯ ದಾಳವನ್ನೂ ಪ್ರಯೋಗಿಸಿ ನೋಡುತ್ತಿದ್ದಾರೆ. ಕೋಮುವಾದ ಬಿತ್ತುವ ಸಂಘಪರಿವಾರ ಶಕ್ತಿಗಳ ದಾಳದ ಕುರಿತು ಎಚ್ಚರಿಕೆ ವಹಿಸಬೇಕೆಂದು ಚೆನ್ನಿತ್ತಲ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.







