ಭಯೋತ್ಪಾದಕರೆಂದು ಆರೋಪಿಸಿ ಬಂಧಿಸಿದ ನಾಲ್ವರ ಬಿಡುಗಡೆ !

ಹೊಸದಿಲ್ಲಿ ಮೇ 8: ಭಯೋತ್ಪಾದಕ ಸಂಬಂಧವಿದೆ ಎಂದಾರೋಪಿಸಿ ದಿಲ್ಲಿ ಪೊಲೀಸರು ಕಸ್ಟಡಿಗೆ ಪಡೆದಿದ್ದವರಲ್ಲಿ ನಾಲ್ವರನ್ನು ಬಿಟ್ಟು ಬಿಡಲಾಗಿದೆ.ದಿಲ್ಲಿಯಲ್ಲಿ ಸ್ಫೋಟ ನಡೆಸುವ ಸಿದ್ಧತೆ ಮಾಡಿದ್ದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ನ ಸದಸ್ಯರಿವರೆಂದು ಆರೋಪಿಸಿ ಮೇ ಮೂರರಂದು ಪೊಲೀಸರು ಬಂಧಿಸಿದ್ದರು. ನಾಲ್ಕು ದಿವಸ ಕಾಲ ಪ್ರಶ್ನಿಸಿದ ನಂತರ ಅವರನ್ನುಪೊಲೀಸರು ಬಿಡುಗಡೆಗೊಳಿಸಿದರೆಂದು ವರದಿಗಳು ತಿಳಿಸಿವೆ. ಇವರ ವಿರುದ್ಧ ಸಾಕ್ಷ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ದಿಲ್ಲಿ ಪೊಲೀಸ್ ಸ್ಪೆಶಲ್ ಸೆಲ್ ಮೂಲಗಳು ತಿಳಿಸಿವೆ.
ಈಗ ಬಿಡುಗಡೆಗೊಳಿಸಿರುವವರ ಸಹಿತ ಹದಿಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಮೂವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇನ್ನೂ ಆರು ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದಿಲ್ಲಿ ಲೋಧಿ ರಸ್ತೆಯ ಸ್ಪೆಶಲ್ ಸೆಲ್‌ನ ಕೇಂದ್ರ ಕಚೇರಿಯಲ್ಲಿ ಇವರನ್ನು ಪ್ರಶ್ನಿಸಲಾಗುತ್ತಿದೆ.
ಪಾಕಿಸ್ತಾನದಲ್ಲಿರುವವರ ಸಹಾಯದಿಂದ ದಿಲ್ಲಿಯ ವಿವಿಧ ಜಾಗಗಳಲ್ಲಿ ಸ್ಫೋಟ ನಡೆಸಲು ಇವರೆಲ್ಲ ಸಿದ್ಧತೆ ನಡೆಸುತ್ತಿದ್ದರು ಎಂದು ದಿಲ್ಲಿ ಪೊಲೀಸ್ ಈ ಮೊದಲು ತಿಳಿಸಿತ್ತು. ಇವರಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ಹೇಳಿದ್ದರು.
ಜಮ್ಮು-ಕಾಶ್ಮೀರ ಸರಕಾರದ ಶರಣಾಗತಿ ಯೋಜನೆ ಪ್ರಕಾರ ಶರಣಾಗತನಾಗಿ ಪಾಕಿಸ್ತಾನ ಕಾಶ್ಮೀರದಿಂದ ನೇಪಾಲದ ದಾರಿಯಾಗಿ ಭಾರತಕ್ಕೆ ಬಂದಿದ್ದ ಲಿಯಾಖತ್ ಎಂಬ ಕಾಶ್ಮೀರ ನಿವಾಸಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಹೋಳಿ ಆಚರಣೆ ವೇಳೆ ಉತ್ತರ ಭಾರತದಲ್ಲಿ ಸ್ಫೊಟ ನಡೆಸಲಿಕ್ಕಾಗಿ ಲಿಯಾಖತ್ ಬಂದಿದ್ದಾನೆಂದು ಪೊಲೀಸರು ತಿಳಿಸಿದ್ದರು. ಘಟನೆ ವಿವಾದಗೊಂಡಾಗ ಕೇಸನ್ನು ವಹಿಸಿಕೊಂಡ ಎನ್‌ಐಎ ದಿಲ್ಲಿ ಪೊಲೀಸರ ಕಥೆಯನ್ನು ನಿರಾಕರಿಸಿ ಲಿಯಾಖತ್‌ನನ್ನು ಬಿಡುಗಡೆಗೊಳಿಸಿತ್ತು. ಕೇಸುಗಳು ಕೋರ್ಟ್‌ನಲ್ಲಿ ಸೋತಾಗ ದಿಲ್ಲಿ ಪೊಲೀಸ್ ಲಜ್ಜಿಸಬೇಕಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜೈಶ್ ಸಂಬಂಧವನ್ನು ಆರೋಪಿಸಿ ಬಂಧಿಸಿದ್ದ ನಾಲ್ವರನ್ನು ಕೋರ್ಟ್ ಬಿಡುಗಡೆಗೊಳಿಸಿತು ಎನ್ನಲಾಗಿದೆ.
ಭಯೋತ್ಪಾದಕರ ಸಂಬಂಧವನ್ನು ಆರೋಪಿಸಿ ದಿಲ್ಲಿ ಪೊಲೀಸ್ ಸ್ಪೆಶಲ್ ಸೆಲ್ ಬಂಧಿಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ ಹಲವು ಕೇಸುಗಳಲ್ಲಿ ಕೋರ್ಟ್ ಆರೋಪಿಗಳನ್ನು ನಿರಪರಾಧಿಗಳೆಂದು ಹೇಳಿ ಈ ಮೋದಲು ಖುಲಾಸೆಗೊಳಿಸಿತ್ತು ಎಂದು ವರದಿಯಾಗಿದೆ.







