ಪೊಲೀಸರ ರೈಫಲ್‌ಗಳನ್ನು ಕಿತ್ತುಕೊಂಡು ಪರಾರಿಯಾದ ಶಂಕಿತ ಭಯೋತ್ಪಾದಕರು

ಶ್ರೀನಗರ,ಮೇ 8: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿನ ಪೊಲೀಸ್ ಚೌಕಿಯೊಂದರ ಮೇಲೆ ದಾಳಿ ನಡೆಸಿದ ಶಂಕಿತ ಭಯೋತ್ಪಾದಕರು ಕರ್ತವ್ಯನಿರತ ಪೊಲೀಸರ ಬಳಿಯಿದ್ದ ನಾಲ್ಕು ರೈಫಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಕುಲ್ಗಾಮ್‌ನ ಅಡಿಜಾನ್ ಪ್ರದೇಶದಲ್ಲಿಯ ಅಲ್ಪಸಂಖ್ಯಾತ ಸಮುದಾಯದ ಜನರ ರಕ್ಷಣೆಗಾಗಿ ಈ ಪೊಲೀಸ್ ಚೌಕಿಯನ್ನು ನಿಯೋಜಿಸಲಾಗಿದೆ. ರವಿವಾರ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಅಲ್ಲಿಗೆ ನುಗ್ಗಿದ ಶಂಕಿತ ಭಯೋತ್ಪಾದಕರು ಎರಡು ಎಸ್‌ಎಲ್‌ಆರ್ ಮತ್ತು ಎರಡು ಇನ್ಸಾಸ್ ರೈಫಲ್‌ಗಳನ್ನು ದೋಚಿದ್ದಾರೆ. ಅವರನ್ನು ಪತ್ತೆ ಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಘಟನೆಯ ಕುರಿತು ತನಿಖೆಯನ್ನೂ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
Next Story





