ವಿಮಾ ಕಂಪನಿಯನ್ನು ವಂಚಿಸಲು ತಮ್ಮದೇ ಅಂಗಡಿಯಲ್ಲಿ ಲೂಟಿ ಮಾಡಿಸಿದ್ದ ಚಿನ್ನಾಭರಣ ವ್ಯಾಪಾರಿಗಳು

ಚಂಡಿಗಡ,ಮೇ 8: ಕಳೆದ ವಾರ 14 ಕೋ.ರೂ.ವೌಲ್ಯದ ಚಿನ್ನಾಭರಣಗಳ ಲೂಟಿ ನಡೆದಿದ್ದ ಇಲ್ಲಿಯ ಚಿನ್ನಾಭರಣಗಳ ಅಂಗಡಿಯ ಮಾಲಕರ ವಿರುದ್ಧವೇ ಪೊಲೀಸರೀಗ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದೊಂದು ಯೋಜಿತ ದರೋಡೆಯಾಗಿದ್ದು, 10 ಕೋ.ರೂ.ವಿಮೆಹಣವನ್ನು ವಂಚಿಸುವುದು ಅವರ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸೆಕ್ಟರ್ 17ರ ಮಾರುಕಟ್ಟೆ ಪ್ರದೇಶದಲ್ಲಿರುವ ಈ ಅಂಗಡಿಯ ಮಾಲಕರಾದ ವಿನೋದ ಮತ್ತು ರಜನೀಶ ವರ್ಮಾ ಸೋದರರು ಇಡೀ ಲೂಟಿ ನಾಟಕವನ್ನು ರೂಪಿಸಿದ್ದರು, ಅವರ ಸಂಬಂಧಿಗಳೇ ದರೋಡೆಯನ್ನು ನಡೆಸಿದ್ದರು ಮತ್ತು ಅವರಲ್ಲೋರ್ವ ಸಾಕ್ಷವನ್ನು ನಾಶ ಮಾಡಲು ಸಿಸಿಟಿವಿ ಕ್ಯಾಮರಾದ ಮೆಮರಿ ಕಾರ್ಡ್‌ನ್ನು ಬಚ್ಚಿಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಹಾಡುಹಗಲೇ ಈ ಲೂಟಿ ನಡೆದಿತ್ತು. ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಆಗಮಿಸಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಸೆಕ್ಯೂರಿಟಿ ಗಾರ್ಡ್ ಮತ್ತು ಆರು ನೌಕರರನ್ನು ಪಿಸ್ತೂಲು ತೋರಿಸಿ ಜೀವ ಬೆದರಿಕೆಯೊಡ್ಡಿ ಕೋಣೆಯಲ್ಲಿ ಕೂಡಿ ಹಾಕಿ ಚಿನ್ನಾಭರಣಗಳು ಮತ್ತು ನಗದು ಹಣದೊಂದಿಗೆ ಪರಾರಿಯಾಗಿದ್ದರು.
ಈ ಮೂವರೂ ಶನಿವಾರ ಬಂದು ಉಂಗುರವೊಂದನ್ನು ಖರೀದಿಸಿ ಅಂಗಡಿಯನ್ನು ಪರಿಶೀಲಿಸಿ ಹೋಗಿದ್ದರು ಮತ್ತು ರವಿವಾರ ಬಂದು ಲೂಟಿಯನ್ನು ಮಾಡಿದ್ದಾರೆ ಎಂದು ರಜನೀಶ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಆದರೆ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವರ್ಮಾ ಸೋದರರು ಆಸ್ಪತ್ರೆಗೆ ದಾಖಲಾಗಿದ್ದು, ಇದು ಪೊಲೀಸರು ಅವರ ಬಗ್ಗೆಯೇ ಶಂಕೆಗೊಳ್ಳಲು ಕಾರಣವಾಗಿತ್ತು.
ಪ್ರಸಕ್ತ ಪಂಚಕುಲಾದ ಆಸ್ಪತ್ರೆಯಲ್ಲಿರುವ ವಿನೋದ್,ಲೂಟಿಕೋರರನ್ನು ಬಂಧಿಸಲು ಸಾಧ್ಯವಾಗದ ಪೊಲೀಸರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿ ಮಾಫಿ ಸಾಕ್ಷಿದಾರನಾಗುವಂತೆ ಮಳಿಗೆಯ ಮ್ಯಾನೇಜರ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರ ಸೋದರ ಕೂಡ ವಿಷಮಿಶ್ರಿತ ಆಹಾರ ಸೇವನೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.







