ಶಿರ್ಲಾಲಿನಲ್ಲಿ ಬೈಕ್‌ಗಳ ಮುಖಾಮುಖಿ ಢಿಕ್ಕಿ : ಸಹೋದರರ ಸಹಿತ ಮೂವರು ಮೃತ್ಯು, ಇನ್ನಿಬ್ಬರಿಗೆ ಗಾಯ

ಕಾರ್ಕಳ, ಮೇ 8: ಬೈಕ್‌ಗಳೆರಡರ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ವಿದ್ಯಾರ್ಥಿ ಸಹೋದರರಿಬ್ಬರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರ್ಲಾಲು ಗ್ರಾಮದ ಪಡಿಬೆಟ್ಟು ಶಾಲೆ ಬಳಿ ರವಿವಾರ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ನಾರಾವಿ ಸಮೀಪದ ಕುತ್ಲೂರು ಕೋಟದಡ್ಕ ನಿವಾಸಿಗಳಾದ ಮಲೆಕುಡಿಯ ಸಮುದಾಯಕ್ಕೆ ಸೇರಿದ ಸಹೋದರರಾದ ಸಂತೋಷ್(18) ಮತ್ತು ದಿನೇಶ್(23) ಹಾಗೂ ಅಂಡಾರು ಗ್ರಾಮದ ರಾಮಗುಡ್ಡೆ ನಿವಾಸಿ ಪ್ರವೀಣ್ ಮೂಲ್ಯ (26) ಮೃತಪಟ್ಟವರಾಗಿದ್ದಾರೆ. ಪ್ರವೀಣ್ ಮೂಲ್ಯರೊಂದಿಗೆ ಬೈಕ್‌ನಲ್ಲಿ ಹಿಂಬದಿ ಸವಾರರರಾಗಿದ್ದ ಸುಂದರ(50) ಎಂಬವರು ಗಂಭೀರ ಗಾಯಗೊಂಡಿದ್ದರೆ, ವಿಘ್ನೇಶ್(11) ಎಂಬಾತನಿಗೆ ಕಾಲಿಗೂ ಗಾಯವಾಗಿದೆ. ದಿನೇಶ್ ಮತ್ತು ಸಂತೋಷ್ ಕುತ್ಲೂರಿನಿಂದ ಕಬ್ಬಿನಾಲೆ ಮೇಲ್ಮಠ ಮಹಾಲಿಂಗೇಶ್ವರ ದೇವಳದಲ್ಲಿಂದು ನಡೆದ ವಿವಾಹ ಸಮಾರಂಭಕ್ಕೆ ಬೈಕ್‌ನಲ್ಲಿ ತೆರಳಿ ಹಿಂದಿರುಗುತ್ತಿದ್ದ ವೇಳೇ ಈ ದುರಂತ ಸಂಭವಿಸಿದೆ. ಈ ವೇಳೆ ಕೆರ್ವಾಸೆಯಿಂದ ಪ್ರವೀಣ್ ಮೂಲ್ಯ ತನ್ನ ಬೈಕ್‌ನಲ್ಲಿ ಸುಂದರ ಮತ್ತು ವ್ನಿೇಶ್‌ರನ್ನು ಕುಳ್ಳಿರಿಸಿಕೊಂಡು ಅಂಡಾರು ಕಡೆಗೆ ತೆರಳುತ್ತಿದ್ದರು. ಈ ಎರಡು ಬೈಕ್‌ಗಳು ಪಡಿಬೆಟ್ಟು ಶಾಲೆ ಬಳಿ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ಗಾಯಾಳುಗಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆ ಸಮಾರಂಭಕ್ಕಾಗಿಯೇ ಊರಿಗೆ ಆಗಮಿಸಿದ್ದ ಸಹೋದರರು
ಕುತ್ಲೂರು ಕೋಟದಡ್ಕ ನಿವಾಸಿಗಳಾಗಿರುವ ದಿನೇಶ್ ಮತ್ತು ಸಂತೋಷ್ ಈ ಸಹೋದರರ ಪೈಕಿ ದಿನೇಶ್ ಮಂಗಳೂರಿನ ಕಾಲೇಜೊಂದರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಸಂತೋಷ್ ವಿಟ್ಲದಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದರು. ಮದುವೆ ಸಮಾರಂಭದಲ್ಲಿ ಭಾಗವಹಿಸಲೆಂದೇ ಅವರಿಬ್ಬರು ಶನಿವಾರ ಮನೆಗೆ ಆಗಮಿಸಿದ್ದರು. ಮನೆಮಂದಿ ಬಸ್ಸಿನಲ್ಲಿ ತೆರಳಿದ್ದರೆ, ಇವರಿಬ್ಬರು ಬೈಕ್‌ನಲ್ಲಿ ತೆರಳಿದ್ದರು. ಮೇಸ್ತ್ರಿ ಕೆಲಸಗಾರನಾಗಿರುವ ಪ್ರವೀಣ್ ಮೂಲ್ಯ ಶಿರ್ಲಾಲಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಮನೆಯೊಂದರ ಕೆಲಸಗಾರರಿಗೆ ಊಟ ತರಲೆಂದು ತನ್ನ ಪಲ್ಸರ್ ಬೈಕ್‌ನಲ್ಲಿ ಕೆರ್ವಾಸೆಗೆ ಹೋಗಿ ಹಿಂದುರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.







