ಕುಟುಂಬ ಪರಿಧಿಯೊಳಗೆ ಬದುಕುವುದು ಒಂದು ಕಾವ್ಯ: ಸುಬ್ರಾಯ ಚೊಕ್ಕಾಡಿ

ಮಂಗಳೂರು, ಮೇ 8: ಕುಟುಂಬದ ಪರಿಧಿಯೊಳಗೆ ಬದುಕುವುದು ಕೂಡ ಒಂದು ಕಾವ್ಯದ ಹಾಗೆ ಎಂದು ನಾನು ಭಾವಿಸಿದ್ದೇನೆ ಎಂದು ಕವಿ ಸುಬ್ರಾಯ ಚೊಕ್ಕಾಡಿ ಹೇಳಿದ್ದಾರೆ.
ನಗರದ ರಂಗಸಂಗಾತಿ ಆಶ್ರಯದಲ್ಲಿ ಕವಿ, ಸಾಹಿತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಚೊಕ್ಕಾಡಿ ಅವರಿಗೆ ರವಿವಾರ ನಗರದ ಕೆನರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಲಾಂತರದಲ್ಲಿ ಆಯಾ ಕಾಲದಲ್ಲಿ ಏನೇನು ಕಂಡಿದೆಯೋ ಅದನ್ನು ಬರೆದಿದ್ದೇನೆ. ಅದು ಕಾವ್ಯವೋ, ಅಲ್ಲವೋ ಅಂತ ಯೋಚಿಸಲಿಲ್ಲ. ಅದರ ಜತೆ ಜತೆಗೆ ಪದ್ಯಗಳನ್ನೂ ಬರೆದೆ. ಈ ರೀತಿ ಬರೆಯುವವರನ್ನು ಕ್ಯಾಸೆಟ್ ಕವಿಗಳು ಎಂದು ತಮಾಷೆ ಮಾಡಿದರು. ಅದೃಷ್ಟವೋ, ದುರಾದೃಷ್ಟವೋ ಯಾವುದನ್ನು ಶ್ರೇಷ್ಠ ಎನ್ನುತಿತಿದ್ದರೋ ಅಂತಹ ಗಂಭೀರ ಕವನಗಳು ಜನರನ್ನು ತಲುಪಲೇ ಇಲ್ಲ ಎಂದರು.
ಬಾಲ್ಯದಲ್ಲಿ ಬಡತನದ ಅವಮಾನಗಳನ್ನು ಅನುಭವಿಸಿದ್ದೇನೆ. ಆ ಶೂನ್ಯವನ್ನು ಹೊಡೆದೋಡಿಸಲು ಪುಸ್ತಕಗಳನ್ನು ಓದುತ್ತಿದ್ದೆ. ಹಾಗಾಗಿ ನನ್ನ ಸಾಹಿತ್ಯದಲ್ಲಿ ಹಲವಾರು ಮಗ್ಗಲುಗಳಿವೆ. ಶೈಕ್ಷಣಿಕವಾಗಿ ನಾನು ಬರೆದಿರುವುದು ಸರಿಯೋ ತಪ್ಪೋ ಎಂದೂ ಯೋಚಿಸಲಿಲ್ಲ. ನಾನೊಬ್ಬ ಸಣ್ಣ ಕವಿ ಎಂದು ಹೇಳಿದರು.
ನನ್ನ ಊರಿಗೆ ನನ್ನಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ಊರಿಗೆ ಹೆಸರು ತಂದುಕೊಟ್ಟೆ. ಇದಕ್ಕಾಗಿ ನಾನು ಏನೂ ಖರ್ಚು ಮಾಡಲಿಲ್ಲ. ನಾಲ್ಕು ಪದ್ಯಗಳನ್ನು ಬರೆದೆ ಅಷ್ಟೇ ಎಂದು ಚೊಕ್ಕಾಡಿ ಹೇಳಿದರು.
ಯಾವುದೇ ಪಂಥಕ್ಕೆ ಸೇರದೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ನಮ್ಮೊಂದಿಗಿರುವ ಬುದ್ಧನಂತೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವ ಹೇಳಿದರು.
ಸಾಹಿತ್ಯ ಕೃಷಿಯಲ್ಲಿ ಯಾವುದೇ ಮೇರು ಕವಿಗಳನ್ನು ಅನುಕರಣೆ ಮಾಡದೆ ತನ್ನದೇ ಹಾದಿ ಕಂಡುಕೊಂಡಿರುವ ಅವರು ಅನೇಕ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಗೌರವ ತಂದುಕೊಟ್ಟಿದ್ದಾರೆ ಎಂದರು.
ಪತ್ರಕರ್ತ ಗಿರೀಶ್ ರಾವ್ ಜೋಗಿ, ಇಂಟೆಲ್ ಟೆಕ್ನಾಲಜಿ ದಕ್ಷಿಣ ಏಷ್ಯಾದ ಕಾರ್ಪೊರೇಟ್ ವಿಭಾಗದ ಮಾರುಕಟ್ಟೆ ಮುಖ್ಯಸ್ಥ ಎಸ್.ಆರ್. ವಿಜಯಶಂಕರ್, ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಮತ್ತಿತರರು ಉಪಸ್ಥಿತರಿದ್ದರು. ಕರ್ಣಾಟಕ ಬ್ಯಾಂಕ್‌ನ ಪಿಆರ್‌ಒ ಶ್ರೀನಿವಾಸ ದೇಶಪಾಂಡೆ ಸ್ವಾಗತಿಸಿದರು. ರಂಗ ಸಂಗಾತಿಯ ಸಂಚಾಲಕ ಗೋಪಾಲ ವಂದಿಸಿದರು.







