ಪಾಕ್ ಮಾನವಹಕ್ಕು ಕಾರ್ಯಕರ್ತ ಖುರ್ರಂ ಝಕಿ ಕಗ್ಗೊಲೆ

ಕರಾಚಿ,ಮೇ 8: ಪಾಕಿಸ್ತಾನದ ಪ್ರಮುಖ ಮಾನವಹಕ್ಕು ಕಾರ್ಯಕರ್ತ ಖುರ್ರಂ ಝಕಿ ಅವರನ್ನು ತನ್ನ ಸ್ನೇಹಿತನೊಂದಿಗೆ ರೆಸ್ಟಾರಂಟ್‌ವೊಂದರಲ್ಲಿ ಊಟ ಮಾಡುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ‘ತಕ್‌ಫಿರಿ ದೇವಬಂದಿ ಉಗ್ರರು’ ಈ ಕೃತ್ಯವನ್ನೆಸಗಿದ್ದಾರೆ ಎಂದು ಅವರ ಎನ್‌ಜಿಒ ದೂರಿದೆ.
ಝಕಿ(40) ತನ್ನ ಪತ್ರಕರ್ತ ಸ್ನೇಹಿತ ರಾವ್ ಖಾಲಿದ್ ಜೊತೆಗಿದ್ದಾಗ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಬ್ಬರು ಅವರತ್ತ ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಖಾಲಿದ್ ಮತ್ತು ಸಮೀಪದಲ್ಲಿದ್ದ ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಂತಕರು 9ಎಂಎಂ ಪಿಸ್ತೂಲನ್ನು ಬಳಸಿದ್ದು, ಘಟನಾ ಸ್ಥಳದಲ್ಲಿ 10 ಗುಂಡುಗಳ ಕವಚಗಳು ಪತ್ತೆಯಾಗಿವೆ.
ಮಾಜಿ ಪತ್ರಕರ್ತನಾಗಿದ್ದು ಮಾನವ ಹಕ್ಕು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಝಕಿ‘ಲೆಟ್ ಅಸ್ ಬಿಲ್ಡ್ ಪಾಕಿಸ್ತಾನ್(ಎಲ್‌ಯುಬಿಪಿ)’ನ ವೆಬ್‌ಸೈಟ್ ಮತ್ತು ಫೇಸ್‌ಬುಕ್ ಪೇಜ್‌ನ ಸಂಪಾದಕರಾಗಿದ್ದರು. ಉದಾರ ಧಾರ್ಮಿಕ ಅಭಿಪ್ರಾಯಗಳ ಪ್ರಸಾರದಲ್ಲಿ ಈ ವೆಬ್‌ಸೈಟ್ ತೊಡಗಿಕೊಂಡಿದೆ ಎನ್ನಲಾಗಿದೆ.
ಝಕಿ ಹತ್ಯೆಗೆ ಎಲ್‌ಯುಬಿಪಿಯ ಮುಖ್ಯ ಸಂಪಾದಕ ಅಲಿ ಅಬ್ಬಾಸ್ ತಾಜ್ ಅವರು ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಝಕಿ ದೇವಬಂದಿ ಉಗ್ರರಿಂದ ಹತ್ಯೆಯಾಗಿರುವ ಎಲ್‌ಯುಬಿಪಿಯ ಸಂಪಾದಕೀಯ ತಂಡದ ಎರಡನೇ ಸದಸ್ಯರಾಗಿದ್ದಾರೆ.
ಕಳೆದೊಂದು ವರ್ಷದಿಂದಲೂ ಝಕಿ ನಿಷೇಧಿತ ಸಿಪ್ಹಾ-ಎ-ಸಹಬಾ ಪಾಕಿಸ್ತಾನ್‌ದೊಂದಿಗೆ ಸೇರಿಕೊಂಡು ಜಮಾತ್-ಎ-ಇಸ್ಲಾಮಿ ಪಾಕಿಸ್ತಾನದ ದೇವಬಂದಿ ಮತಾಂಧ ಶಮಸುದ್ದೀನ್ ಅಮ್ಜದ್ ನಡೆಸುತ್ತಿರುವ ವ್ಯವಸ್ಥಿತ ದ್ವೇಷ ಅಭಿಯಾನದ ಗುರಿಯಾಗಿದ್ದರು ಎಂದು ತಾಜ್ ತಿಳಿಸಿದರು.
ಝಕಿಯವರ ವೆಬ್‌ಸೈಟ್ ಲುಬ್‌ಪಾಕ್ ಡಾಟ್ ಕಾಮ್ ಅನ್ನು ಪ್ರಸಕ್ತ ಪಾಕಿಸ್ತಾನವು ತಡೆಹಿಡಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶಿಯಾ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುತ್ತಿದ್ದುದಕ್ಕಾಗಿ ಇನ್ನೋರ್ವ ಮಾನವ ಹಕ್ಕು ಕಾರ್ಯಕರ್ತ ಜಿಬ್ರಾನ್ ನಾಸಿರ್ ಜೊತೆ ಲಾಲ್ ಮಸ್ಜಿದ್‌ನ ವೌಲಾನಾ ಅಬ್ದುಲ್ ಅಝೀಝ್ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಝಕಿ ಹಿಂದೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇನ್ನೋರ್ವ ಮಾನವಹಕ್ಕು ಕಾರ್ಯಕರ್ತ ಸಬೀನ್ ಮಹಮೂದ್ ಅವರನ್ನೂ ಈ ಹಿಂದೆ ಕರಾಚಿಯಲ್ಲಿ ಹತ್ಯೆ ಮಾಡಲಾಗಿತ್ತು.







