ಹಿರಿಯ ದಫ್ ಉಸ್ತಾದ್, ಕುಂದಾಪುರ-ಕೋಡಿ ನಿವಾಸಿ ಕೆ.ಇ. ಮುಹಮ್ಮದ್ (63)ಹೃದಯಾಘಾತದಿಂದ ನಿಧನ

ಕುಂದಾಪುರ : ಹಿರಿಯ ದಫ್ ಉಸ್ತಾದ್, ಕುಂದಾಪುರ-ಕೋಡಿ ನಿವಾಸಿ ಕೆ.ಇ. ಮುಹಮ್ಮದ್ (63) ಅವರು ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.
ಭಾನುವಾರ ಮಧ್ಯಾಹ್ನ ಕೋಟ-ಕುಂದಾಪುರದಲ್ಲಿ ನಡೆದ ವಿವಾಹ ಕಾರ್ಯವೊಂದರಲ್ಲಿ ಇಲ್ಲಿನ ಕೋಟ ರಿಫಾಯಿಯ ದಫ್ ಸಮಿತಿಯ ವಿದ್ಯಾರ್ಥಿಗಳ ಜೊತೆ ಹಾಡುಗಾರರಾಗಿ ಭಾಗವಹಿಸಿದ್ದ ಇವರು ಮಧ್ಯಾಹ್ನದ ಬಳಿಕ ಹೊನ್ನಾವರದಲ್ಲಿ ಇನ್ನೊಂದು ಕಾರ್ಯಕ್ರಮಕ್ಕೆ ತೆರಳಲು ಅನುವಾಗುತ್ತಿದ್ದ ವೇಳೆ ಹಠಾತ್ ಹೃದಯ ಬೇನೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶನಿವಾರವಷ್ಟೆ ವಿದೇಶದಿಂದ ಊರಿಗೆ ಬಂದಿದ್ದ ತನ್ನೋರ್ವ ಪುತ್ರ ತಕ್ಷಣ ಮುಹಮ್ಮದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ.
ಹಿಂದಿನಿಂದಲೂ ದಫ್ ಕಲೆಯನ್ನು ಕರಗತ ಮಾಡಿಕೊಂಡು ಸಮುದಾಯದ ಮುಂದಿನ ಪೀಳಿಗೆಗೆ ದಫ್ ಕಲೆಯನ್ನು ಧಾರೆ ಎರೆಯುವ ಮೂಲಕ ಅದನ್ನೇ ತನ್ನ ವೃತ್ತಿ ಜೀವನವನ್ನಾಗಿ ನೆಚ್ಚಿಕೊಂಡಿದ್ದ ಮೃತ ಮುಹಮ್ಮದರು ಉಡುಪಿ ಜಿಲ್ಲೆಯಾದ್ಯಂತ ಹಲವು ದಫ್ ತಂಡಗಳ ಸೃಷ್ಟಿಗೆ ಕಾರಣಕರ್ತರಾಗಿದ್ದರು. ಸುಮಧುರ ಗಾಯಕರಾಗಿ ಹೆಸರುವಾಸಿಯಾಗಿದ್ದ ಇವರು ಹಲವು ದಫ್ ತಂಡಗಳಲ್ಲಿ ಹಾಡುಗಾರರಾಗಿ ಭಾಗವಹಿಸಿ ಜನಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಸರಳ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಮುಹಮ್ಮದರು ದಫ್ ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಉಸ್ತಾದ್ ಆಗಿ ಚಿರಪರಿಚಿತರಾಗಿದ್ದರು. ತಮ್ಮ ಅಮೋಘ ದಫ್ ಕಲೆಯ ಪ್ರಸ್ತುತತೆಗಾಗಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಇವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮೇ 15 ರಂದು ಮೂಡಬಿದ್ರೆಯಲ್ಲಿ ನಡೆಯುವ ಸಮಾರಂಭದಲ್ಲಿ ದಫ್ ಕಲೆಗಾಗಿ ಬ್ಯಾರಿ ಪುರಸ್ಕಾರಕ್ಕೂ ಆಯ್ಕೆಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ದಫ್ ಶಿಷ್ಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸಂತಾಪ
ಹಿರಿಯ ದಫ್ ಉಸ್ತಾದ್ ಕೆ.ಇ. ಮುಹಮ್ಮದ್ ಅವರ ಹಠಾತ್ ನಿಧನಕ್ಕೆ ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.







