ದೇಶದ ಸ್ವಾತಂತ್ರಕ್ಕೆ ಉರ್ದು ಸಾಹಿತ್ಯದ ಕೊಡುಗೆ ಅಪಾರ: ಅಫ್ಝಲ್ ಹನೀಫ್
ಚಿಂತನ- ಮಂಥನ ಕಾರ್ಯಕ್ರಮ

ಸೊರಬ, ಮೇ 8: ದೇಶದ ಸ್ವಾತಂತ್ರ ಉರ್ದು ಾಹಿತ್ಯದ ಕೊಡುಗೆ ಅಪಾರವಾಗಿತ್ತು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ ಎಂದು ಉರ್ದು ಸಾಹಿತ್ಯ ಚಿಂತಕ ಅಫ್ಝಲ್ ಹನೀಫ್ ಹೇಳಿದ್ದಾರೆ.
ಪಟ್ಟಣದ ಮುರುಘಾಮಠದ ಆವರಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ, ಸಮರ್ಪಣ ಸಂಸ್ಥೆ, ಅಜೇಯ ಬಳಗ ಹಾಗೂ ವೀರಶೈವ ಯುವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉರ್ದು ಸಾಹಿತ್ಯದಲ್ಲಿ ಸಾಮಾಜಿಕ ಸಾಮರಸ್ಯತೆ ಎಂಬ ವಿಷಯಾಧಾರಿತ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
. ಉರ್ದು ಭಾಷೆ ಕೇವಲ ಮುಸ್ಲಿಂ ಭಾಷೆ ಯಾಗಿರದೆ, ಸರ್ವ ಜನಾಂಗದವರು ಬಳಸಿ, ಬೆಳೆಸಿರುವ ನಿದರ್ಶನಗಳು ಸಾಕಷ್ಟಿದೆ. ಯಾವುದೇ ಭಾಷೆಗಳು ಧರ್ಮ, ಜನಾಂಗಕ್ಕೆ ಸೀಮಿತವಾದುದಲ್ಲ, ಎಲ್ಲ ಭಾಷೆಗಳು ಪರಸ್ಪರ ಸಹೋದರತೆ ಮತ್ತು ಪ್ರೀತಿ ವಿಶ್ವಾಸಗಳ ಸಂದೇಶವನ್ನು ಸಾರಿವೆ ಹೊರತು ಶತ್ರುತ್ವವನ್ನು ಬೆಳೆಸಲಿಲ್ಲ ಎಂದರು.
ಭಾಷೆಗಳು ಬ್ರಾತೃತ್ವ ಬೆಳೆಸುವ ನಿಟ್ಟಿನಲ್ಲಿ ಮನಸ್ಸನ್ನು ವಿಕಾಸಗೊಳಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಮಾತೃ ಭಾಷೆಯನ್ನು ಪೋಷಿಸುವ ಮೂಲಕ ಇತರ ಭಾಷೆಗಳನ್ನು ಗೌರವಿಸಿ ಅರಿತುಕೊಳ್ಳುವ ಇಂತಹ ಕಾರ್ಯಕ್ರಮ ಎಲ್ಲಡೆ ನಡೆದರೆ ಅಸಹಿಷ್ಣುತೆ ಎಂಬ ಅಪಸ್ವರ ತನ್ನಿಂದ ತಾನೆ ದೂರವಾಗುವುದು ಎಂದು ನುಡಿದರು.
ಉರ್ದು ಭಾಷೆಯನ್ನು ಬೆಳೆಸಿದವರಲ್ಲಿ ಉರ್ದು ಮಾತೃ ಭಾಷೆಯವರಿಗಿಂತ ಇತರರೇ ಅಧಿಕವಾಗಿದ್ದಾರೆ. ಉರ್ದು ಭಾಷೆಗೆ ದೊರೆತ ನಾಲ್ಕು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಇಬ್ಬರು ಮುಸ್ಲಿಮೇತರರಾಗಿದ್ದಾರೆ. ಭಾಷೆಗಳನ್ನು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತಗೊಳಿಸುವ ಕೆಲಸಗಳಾಗಬಾರದು ಎಂದು ಕರೆ ನೀಡಿದರು. ಅಖಿಲ ಭಾರತ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಕಸಾಪ ತಾಲೂಕು ಅಧ್ಯಕ್ಷ ಹಾಲೇಶ್ ನವುಲೆ, ಮಾಜಿ ಅಧ್ಯಕ್ಷ ಶಿವಾನಂದ ಪಾಣಿ, ಅಜೇಯ ಬಳಗದ ಅನ್ಸಾರ್ ಅಹ್ಮದ್, ರಾಘುಬಾಪಟ್, ಸಮರ್ಪಣ ಸಂಸ್ಥೆಯ ಕೆ.ಪಿ. ರಾಜೇಶ್, ವೀರಶೈವ ಯುವ ವೇದಿಕೆಯ ಶಂಭುಲಿಂಗ, ವೀರೇಂದ್ರಗೌಡ, ಉಪನ್ಯಾಸಕ ರಮೇಶ್, ಪ್ರಮುಖರಾದ ಬಂದಿಗೆ ಬಸವರಾಜ್ ಶೇಟ್, ಗೌರಮ್ಮ ಭಂಡಾರಿ ಮತ್ತಿತರರಿದ್ದರು.







