ಸೀಬರ್ಡ್ ನಿರಾಶ್ರಿತರಿಗೆ ಮರೀಚಿಕೆಯಾದ ಪರಿಹಾರ
ಅತ್ತ ಉದ್ಯೋಗವೂ ಇಲ್ಲ.. ಇತ್ತ ಪರಿಹಾರವೂ ಇಲ್ಲ
.jpg)
ಶ್ರೀನಿವಾಸ ಬಾಡಕರ್
ಕಾರವಾರ, ಮೇ 8: ಸೀಬರ್ಡ್ ಯೋಜನೆಗಾಗಿ ದೇಶದ ರಕ್ಷಣೆಗೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿದ ಕಡಲ ಮಕ್ಕಳು ಹಾಗೂ ರೈತರು ತಮ್ಮ ಪಾಲಿಗೆ ಬರಬೇಕಾದ ಹೆಚ್ಚುವರಿ ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಒಂದು ಕಡೆ ಮೀನು ಕ್ಷಾಮದಿಂದ ಉದ್ಯೋಗವಿಲ್ಲದೆ ಬದುಕಿಗಾಗಿ ನಿರಂತರ ಹೋರಾಟ, ಇನ್ನೊಂದು ಕಡೆ ರಕ್ಷಣಾ ಇಲಾಖೆಯಿಂದ ಬರಬೇಕಾದ ಹೆಚ್ಚುವರಿ ಪರಿಹಾರ ಮೀನುಗಾರರಿಗೆ ಗಗನ ಕುಸುಮವಾಗಿದ್ದು, ರಕ್ಷಣಾ ಇಲಾಖೆ ಮಾತ್ರ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಮ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಇನ್ನಷ್ಟು ಸಮಸ್ಯೆಯನ್ನು ಜಠಿಲಗೊಳಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಭೂ ಸುಗ್ರೀವಾಜ್ಞೆ ಮೂಲಕ 1989ರಲ್ಲಿ ಜಮೀನು ವಶಪಡಿಸಿಕೊಳ್ಳಲು ಹೊರಟ ಸರಕಾರ,ಇದುವರೆಗೆ ನಾಲ್ಕು ಸಾವಿರದ ಐನೂರು ನೂರಕ್ಕೂ ಹೆಚ್ಚಿನ ರೈತ ಹಾಗೂ ಮೀನುಗಾರರ ಕುಟುಂಬಗಳು ಮನೆ ಮಠ ಕಳೆದುಕೊಂಡು ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಅವರೆಲ್ಲರೂ ನಿರಾಶ್ರಿತರ ಕಾಲೊನಿಗಳಲ್ಲಿ ಬದುಕು ಕಟ್ಟಿಕೊಂಡು, ಈಗ ಕುಟುಂಬ ಬೆಳೆದು ಬೇರೆ ಬೇರೆಯಾಗಿ 12 ಸಾವಿರದಷ್ಟು ಕುಟುಂಬಗಳಾಗಿವೆ. ಕೆಲವು ಕುಟುಂಬದ ಹಿರಿಯ ಸದಸ್ಯರು ಹೆಚ್ಚುವರಿ ಪರಿಹಾರಕ್ಕಾಗಿ ಕಾದು ಕಾದು ತೀರಿಕೊಂಡಿದ್ದಾರೆ. ಅಲ್ಲದೇ ತಲೆತಲಾಂತರಗಳಿಂದ ಹಿರಿಯರು ವಾಸಿಸುವ ಮನೆಮಠಗಳನ್ನು ಬಿಟ್ಟು, ಸರಿಯಾಗಿ ಉದ್ಯೋಗವಿಲ್ಲದೇ ಎಷ್ಟೋ ಯುವಕರು ಮಾನಸಿಕವಾಗಿ ನೊಂದು ಹುಚ್ಚರಂತಾಗಿ ಅಲೆದಾಡುತ್ತಿರುವ ನಿದರ್ಶನಗಳಿವೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಹಲವು ಸರಕಾರಗಳು ಬದಲಾದವು. ಆದರೆ ಸೀಬರ್ಡ್ ನಿರಾಶ್ರಿತರು ಮಾತ್ರ ತಮ್ಮ ನ್ಯಾಯಯುತವಾದ ಬೇಡಿಕೆ ಇಡೇರಿಸಲು ಈಗಲೂ ಹೋರಾಟ ನಡೆಸುತ್ತಿದ್ದಾರೆ.
ಈ ನಡುವೆ ನಿರಾಶ್ರಿತರಲ್ಲಿ ಸುಶಿಕ್ಷಿತ ಯುವಕರಿಗೆ ನೌಕರಿ ನೀಡುವ ಸರಕಾರದ ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರಗಳು ನಿರಾಶ್ರಿತರ ಬಾಳಿನೊಂದಿಗೆ ಚೆಲ್ಲಾಟವಾಡುತ್ತಿವೆ ಎಂಬ ಆರೋಪ ನಿರಾಶ್ರಿತರಿಂದ ಕೇಳಿ ಬರುತ್ತಿವೆ. ಭರವಸೆ ಮರೆತ ಮನೋಹರ್ ಪರಿಕ್ಕರ್
ಕಳೆದ ವರ್ಷ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿದಾಗ, ಸೀಬರ್ಡ್ ನೌಕಾನೆಲೆ ಯೋಜನೆಯ ಸಂತ್ರಸ್ಥರ ಪುನರ್ವಸತಿ ಸಭೆಯಲ್ಲಿ ಭಾಗವಹಿಸಿದ್ದರು. ಸೀಬರ್ಡ್ ನಿರಾಶ್ರಿತರ ಪೂರ್ಣ ಪರಿಹಾರವನ್ನು ಪ್ರತಿಯೊಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾದ ಬಳಿಕ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಕೆಲವು ಪ್ರಕರಣಗಳಿಗೆ ಸಚಿವರ ಮಾತಿನಂತೆ ಆ ಸಂದರ್ಭದಲ್ಲಿ 40 ಕೋಟಿ ರೂ. ಬಿಡುಗಡೆಯಾದರೂ, ಈ ವರೆಗೂ ನಿರಾಶ್ರಿತರ ಖಾತೆಗೆ ಜಮಾ ಆಗಿಲ್ಲ. ಇನ್ನಾದರೂ ಕೇಂದ್ರ ರಕ್ಷಣಾ ಇಲಾಖೆ ಎಚ್ಚೆತ್ತು ಎಚ್ಚೆತ್ತುಕೊಂಡು ದೇಶಕ್ಕಾಗಿ ಮನೆಮಠಗಳನ್ನು ತ್ಯಾಗ ಮಾಡಿದ ನಿರಾಶ್ರಿತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕಾಗಿದೆ.
ನೆರವಾದ 28/ಅ ಕಾಯ್ದೆ
ಭೂ ಸ್ವಾಧೀನ ಕಾಯ್ದೆ 28/ಅ ದ ಅಡಿಯಲ್ಲಿ ಈಗಾಗಲೇ 1,420 ಪ್ರಕರಣಗಳಲ್ಲಿ 620 ಪ್ರಕರಣಗಳು ಬಾಕಿ ಇವೆ. ಭೂ ಸ್ವಾಧೀನ ಸಂದರ್ಭದಲ್ಲಿ ಕೈತಪ್ಪಿಹೋದ ನಿರಾಶ್ರಿತರನ್ನು ಪುನಃ ಸೇರಿಸಲು 28/ಅ ಕಾಯ್ದೆ ೆರವಾಯಿತು. ಕಾಯ್ದೆಯನ್ವಯ ದಾಖಲಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಾಗ ಉಲ್ಲೇಖಿತ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗದಿದ್ದರೂ, ಎಲ್ಲ ಪ್ರಕರಣಗಳು ಒಂದೇ ಉದ್ದೇಶಕ್ಕೆ ಮತ್ತು ಒಂದೇ ಸೂಚನೆಯಡಿ ವಶಪಡಿಸಿಕೊಂಡಿದ್ದಾಗಿದೆ. ಈ ಹಿಂದೆ ಸುಪ್ರೀಮ್ ಕೋರ್ಟ್ ಇತ್ಯರ್ಥಗೊಳಿಸಿರುವುದನ್ನು ಮಾದರಿಯನ್ನಾಗಿ ತೆಗೆದುಕೊಂಡು, ಎಲ್ಲಾ 28/ಅ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸೀಬರ್ಡ್ ೌಕಾನೆಲೆ ಯೋಜನೆಯ ಸಂತ್ರಸ್ತರ ಪುನರ್ವಸತಿ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.
ನಿರಾಶ್ರಿತರಿಗೆ ಮುಳುವಾದರೇ ಜಿಲ್ಲಾ ಪಿಪಿ: ಅಲ್ಲದೇ ಸೀಬರ್ಡ್ ನಿರಾಶ್ರಿತರ ಎಲ್ಲ ಪ್ರಕರಣ ಗಳೂ ಒಂದೇ ಅಸೂಚನೆ ಮತ್ತು ಒಂದೇ ಉದ್ದೇ ಶಕ್ಕೆ ಭೂಸ್ವಾೀನ ಪಡಿಸಿರುವ ಸಂಬಂಸಿದ್ದರಿಂದ ಇಷ್ಟರಲ್ಲಿಯೇ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಿಕೊಂಡು ಮುಂದೆ ಮೇಲ್ಮನವಿ ಹೋಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಸರಕಾರಿ ಅಭಿಯೋಜಕರು ಜಿಲ್ಲಾಡಳಿತಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಆದ್ದರಿಂದ ರಕ್ಷಣಾ ಇಲಾಖೆಯನ್ನು ಪ್ರತಿನಿಸುವ ಜಿಲ್ಲಾ ಸರಕಾರಿ ಅಭಿಯೋಜಕರ ಪತ್ರವನ್ನು ಡಿಇಒ ರವರು ಗೌರವಿಸಿ, ಇನ್ನು ಮುಂದೆ ಯಾವ ಪ್ರಕರಣಗಳಿಗೂ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ಹೇಳಲಾಗುತ್ತಿದೆ.
ಪರಿಹಾರ ಕಷ್ಟವಲ್ಲ: ರಕ್ಷಣಾ ಇಲಾಖೆ ಮನಸ್ಸು ಮಾಡಿದರೆ ಹೈ ಕೋರ್ಟ್ ತೀರ್ಪಿಗೆ ಬದ್ಧರಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸದೇ ಸೀಬರ್ಡ್ ಸಮಸ್ಯೆ ಬಗೆಹರಿಸುವುದು ಕಷ್ಟಕರವೇನಲ್ಲ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಜಿಲ್ಲಾ ಹಾಗೂ ರಾಜ್ಯ ಹೈಕೋರ್ಟ್ 11,500 ರೂ. ಹೆಚ್ಚುವರಿ ಪರಿಹಾರ ನೀಡಲು ಆದೇಶ ಹೊರಡಿಸಿದ್ದರೂ ರಕ್ಷಣಾ ಇಲಾಖೆಯ ಡಿಇಒ ಸುಪ್ರೀಮ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿಸದ ಪರಿಣಾಮ ಸಮಸ್ಯೆ ಬಗೆಹರಿಯದೇ ಇನ್ನಷ್ಟು ಜಟಿಲವಾಗುವಂತಾಗಿದೆ ಎಂಬ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಎಲ್ಲ ಪ್ರಕರಣಗಳಿಗೆ ಸೂಕ್ತವಾದ ಪರಿಹಾರ ಸಿಗಬೇಕಾದರೆ, ಸೀಬರ್ಡ್ ನ ಡಿಇಒ ಅಕಾರಿಗಳಿಂದ ಮೇಲ್ಮನವಿ ಸಲ್ಲಿಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಡಿಇಒ ಅಧಿಕಾರಿಗಳು ಬೇಕಂತಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ನಿರಾಶ್ರಿತರನ್ನು ಸತಾಯಿಸುತ್ತಿದ್ದಾರೆ. ಆದ್ದರಿಂದ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳಿಗೆ ಕೂಡಲೇ ಪರಿಹಾರ ವಿತರಿಸುವ ಕ್ರಮ ಕೈಗೊಳ್ಳುವಂತೆ ಮನವೊಲಿಸಲು ಸದ್ಯದಲ್ಲಿಯೇ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡುತ್ತೇನೆ.
<ಸತೀಶ್ ಸೈಲ್
ಶಾಸಕರು, ಕಾರವಾರ-ಅಂಕೋಲಾ ಕ್ಷೇತ್ರ,
ಕೇವಲ ಒಂದೆರಡು ಗುಂಟೆ ಜಮೀನು ಹೊಂದಿರುವ ಮೀನುಗಾರರು ಈ ಯೋಜನೆಯಿಂದ ಹಾನಿ ಅನುಭವಿಸಿದ್ದಾರೆ. ಗುಂಟೆಗೆ ಕೇವಲ 6 ಸಾವಿರ ರೂ. ಪಡೆದು ಮನೆ, ಮಠ ಬಿಟ್ಟು ಬಂದು ನಿರಾಶ್ರಿತರ ಕಾಲೊನಿಯಲ್ಲಿ ಅತಂತ್ರರಾಗಿ ಬದುಕುತ್ತಿದ್ದಾರೆ. ಹೆಚ್ಚುವರಿ 11,500 ರೂ. ಪರಿಹಾರನೂ ಸಿಗುತ್ತಿಲ್ಲ. ಅಲ್ಲದೆ ಸೀಬರ್ಡ್ ನಿರಾಶ್ರಿತರಿಗೆ ನೌಕಾನೆಲೆಯಲ್ಲಿ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕೇರಳ, ತಮಿಳುನಾಡು ನೌಕರರು ತುಂಬಿ ತುಳುಕುತ್ತಿದ್ದಾರೆ. ಸ್ಥಳೀಯರನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ.
<
ಪ್ರಶಾಂತ್ ಕೊಡಾರಕರ, ಅಧ್ಯಕ್ಷರು, ಕಾರವಾರ ನೌಕಾನೆಲೆ ನಿರಾಶ್ರಿತ ಗುತ್ತಿಗೆದಾರ ಮತ್ತು ಕಾರ್ಮಿಕರ ಸಂಘ, ಅರ್ಗಾ,







