ಭದ್ರಾವತಿಯ ‘ಸ್ಟೀಲ್‌ಟೌನ್’ ನಾಗರಿಕರ ನಿದ್ದೆಗೆಡಿಸಿದ ಚಿರತೆ
ಶಿವಮೊಗ್ಗ, ಮೇ 8: ಜಿಲ್ಲೆಯ ಭದ್ರಾವತಿ ಪಟ್ಟಣದ ನಾಗರಿಕರು ಕಳೆದ ಹಲವು ದಿನಗಳಿಂದ ‘ಚಿರತೆ’ ಕಾರಣದಿಂದ ನಿದ್ದೆಗೆಟ್ಟು ಆತಂಕಿತರಾಗಿದ್ದಾರೆ. ಮತ್ತೊಂದೆಡೆ ಚಿರತೆ ಪತ್ತೆಗೆ ಅರಣ್ಯ ಇಲಾಖೆಯು ಹಗಲಿರುಳು ಶೋಧ ನಡೆಸುತ್ತಿದೆ. ಆದರೆ ಅದರ ಸುಳಿವು ಮಾತ್ರ ಪತ್ತೆಯಾಗಿಲ್ಲ. ಮತ್ತೊಂದೆಡೆ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಚಿರತೆಯ ಭಾವಚಿತ್ರ ಶರವೇಗದಲ್ಲಿ ಹರಿದಾಡುತ್ತಿದ್ದು, ಇದು ನಾಗರಿಕರಲ್ಲಿ ದಿಗಿಲು ಹುಟ್ಟಿಸಿದೆ.
<
<
ಒಂದು ತಿಂಗಳ ಹಿಂದೆ ಪಟ್ಟಣದ ವಿಐಎಸ್‌ಎಲ್ ಕಾರ್ಖಾನೆಯ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದ ಮಾಹಿತಿಗಳು ಬಂದಿದ್ದವು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯು ಚಿರತೆ ಸೆರೆಗೆ ಕಾರ್ಯೋನ್ಮುಖವಾಗಿತ್ತು. ಆದರೆ ಚಿರತೆ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮತ್ತೊಂದೆಡೆ ಕಾರ್ಖಾನೆ ಆವರಣದಲ್ಲಿದ್ದ ನಾಯಿಗಳು ನಿಗೂಢವಾಗಿ ಏಕಾಏಕಿ ಕಣ್ಮರೆಯಾಗಲಾರಂಭಿಸಿದ್ದು, ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿತ್ತು. ಇದರಿಂದ ಕಾರ್ಖಾನೆ ಆವರಣದಲ್ಲಿ ಚಿರತೆಯಿದೆಯೇ? ಇಲ್ಲವೇ? ಎಂಬುದರ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದಂತಾಗಿದೆ. ಸಿಸಿ ಕಾಮರಾ ಅಳವಡಿಕೆ: ಈ ನಡುವೆ ಅರಣ್ಯ ಇಲಾಖೆಯು ಕಾರ್ಖಾನೆಯ ಆವರಣದಲ್ಲಿ 10 ಸಿಸಿ ಟಿವಿ ಕ್ಯಾಮರಾ, ಐದು ಬೋನು ಗಳನ್ನಿಟ್ಟಿದೆ. ಹಲವು ದಿನಗಳ ಕಾಲ ಅಧಿಕಾರಿ, ಸಿಬ್ಬಂದಿ ಹಗಲು-ರಾತ್ರಿಯ ಪರಿವೆಯೇ ಇಲ್ಲದೆ ಚಿರತೆಗಾಗಿ ಶೋಧ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೂ ಚಿರತೆಯ ಇರುವಿಕೆಯ ಯಾವುದೇ ಸ್ಪಷ್ಟ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಮತ್ತೊಂದೆಡೆ ಚಿರತೆಯ ಮುಖಚರ್ಯೆಯಿರುವ ಪ್ರಾಣಿಯೊಂದು ಕಾರ್ಖಾನೆಯ ಆವರಣದಲ್ಲಿ ಬೀಡುಬಿಟ್ಟಿದೆ ಎಂಬುದು ಕೆಲ ನಾಗರಿಕರ ಆತಂಕವಾಗಿದೆ. ಯಾವುದೇ ಕಾರಣಕ್ಕೂ ಇಷ್ಟು ದಿನಗಳ ಕಾಲ ಕಾಡು ಪ್ರಾಣಿಯೊಂದು ಒಂದೇ ಸ್ಥಳದಲ್ಲಿ ಬೀಡುಬಿಡುವುದಿಲ್ಲ. ಒಂದು ವೇಳೆ ಕಾರ್ಖಾನೆಯ ಆವರಣದಲ್ಲಿ ಚಿರತೆಯಿದ್ದಿದ್ದರೆ ಗಮನಕ್ಕೆ ಬರಬೇಕಾಗಿತ್ತು. ಸಿಸಿ ಕ್ಯಾಮರಾಗಳಲ್ಲಿಯಾದರೂ ಸೆರೆಯಾಗಬೇಕಾಗಿತ್ತು. ಆದರೆ ಇಲ್ಲಯವರೆಗೂ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವನ್ಯಜೀವಿ ತಜ್ಞರ ತಂಡ ಕರೆಯಿಸಿ, ಕಾರ್ಖಾನೆ ಆವರಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೋರ್ವರು ಹೇಳುತ್ತಾರೆ. ಗುರುತು ಪತ್ತೆ?: ಈ ನಡುವೆ ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಚಿರತೆಯ ಓಡಾಟದ ಗುರುತು ಪತ್ತೆಯಾಗಿದೆ ಎಂದು ಮೂಲಗಳು ಹೇಳುತ್ತಿದ್ದು, ಇದು ಇಲ್ಲಿಯವರೆಗೂ ಅಧಿಕೃತವಾಗಿಲ್ಲ. ಒಟ್ಟಾರೆ ಭದ್ರಾವತಿ ಪಟ್ಟಣದ ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಚಿರತೆ ಬೀಡು ಬಿಟ್ಟಿದೆ ಎಂಬ ವಿಷಯವು ಸ್ಥಳೀಯನಾಗರಿಕರು ಹಾಗೂ ಕಾರ್ಮಿಕರ ನಿದ್ದೆಗೆಡುವಂತೆ ಮಾಡಿರುವುದಂತೂ ಸತ್ಯವಾಗಿದೆ.
‘ರಾಣಾ’ ಆಗಮನ: ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಚಿರತೆ ಇದೆಯೋ? ಇಲ್ಲವೋ? ಎಂಬುದರ ಸ್ಪಷ್ಟ ಮಾಹಿತಿ ಅರಿಯಲು ಅರಣ್ಯ ಇಲಾಖೆಯು ಎಲ್ಲ ರೀತಿಯ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದ್ದು, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ‘ರಾಣಾ’ ಎಂಬ ಶ್ವಾನವನ್ನು ತರಿಸಿ ಅದರ ಮೂಲಕ ಪತ್ತೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಚಿರತೆ ಹೆಜ್ಜೆ ಗುರುತಿನ ಆಧಾರ, ಅದರ ಓಡಾಟದ ಹಾದಿ ಸಿಕ್ಕಲ್ಲಿ ಹಾಗೂ ಅದು ಬೀಡುಬಿಟ್ಟಿದ್ದರೆ ವಾಸನೆಯ ಮೂಲಕ ‘ರಾಣಾ’ ಶ್ವಾನವು ಪತ್ತೆ ಹಚ್ಚುವ ತರಬೇತಿಯನ್ನು ಪಡೆದಿದೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ‘ರಾಣಾ’ನನ್ನು ವಿಐಎಸ್‌ಎಲ್‌ಗೆ ಕರೆತರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.







