ಪ್ರಾಣಾಯಾಮದಿಂದ ತ್ರಿದೋಷ ನಿಯಂತ್ರಣ: ದಿವಾಕರ ಭಟ್

ಚಿಕ್ಕಮಗಳೂರು, ಮೇ 8: ಉಸಿರಾಟದಿಂದ ಶರೀರದಲ್ಲಿನ ತ್ರಿದೋಷಗಳಾದ ಕಫ, ವಾತ, ಪಿತ್ತ ನಿಯಂತ್ರಣಕ್ಕೆ ತರುವುದೇ ಪ್ರಾಣಯಾಮ ಎಂದು ಯೋಗ ಗುರು ದಿವಾಕರ ಭಟ್‌ಅಭಿಪ್ರಾಯಿಸಿದರು.
ಅವರು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಭಾರತ ಸ್ವಾಭಿಮಾನ ಸಂಯುಕ್ತಾಶ್ರಯದಲ್ಲಿ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿರುವ ಬೇಸಿಗೆ ಪ್ರಾಣಾಯಾಮ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪ್ರಾಣಾಯಾಮ ಪಾರ್ಶ್ವ ಪರಿಣಾಮವಿಲ್ಲದ ಜಗತ್ತಿನ ಏಕೈಕ ಮನಸ್ಸು ಮತ್ತು ಆರೋಗ್ಯ ಚಿಕಿತ್ಸಾ ಪದ್ಧತಿ. ಯಾವುದೇ ವಯೋಮಾನದ, ಎಲ್ಲ ಗುಣಧರ್ಮದ, ಜಾತಿ ಪಂಥ-ವರ್ಣ-ಲಿಂಗದವರೂ, ಯಾವುದೇ ಸ್ಥಿತಿಯಲ್ಲೂ ಪ್ರಾಣಾಯಾಮ ಮಾಡಬಹುದು. ಅತ್ಯಂತ ವೈಜ್ಞಾನಿಕ ತಂತ್ರಜ್ಞಾನವಿದೆ. ಬದುಕಬೇಕೆನ್ನುವ ಎಲ್ಲ ಮನುಷ್ಯರೂ ಮಾಡುವ ಕ್ರಿಯೆ ಇದೇ ಎಂದು ಹೇಳಿದರು.
ಪ್ರಾಣದ ಸರಿಯಾದ ರಚನೆ ಮತ್ತು ಉಪಯೋಗ ಅಭ್ಯಾಸ ಮಾಡುವುದೇ ಪ್ರಾಣಾಯಾಮ. ಪ್ರಾಣದ ಶಕ್ತಿ ಇರುವುದೇ ಆಮ್ಲಜನಕವನ್ನು ಸೇವಿಸುವುದರಿಂದ. ಉಸಿರಾಟ ಕ್ರಿಯೆ ಜೀವಂತಿಕೆಯ ಲಕ್ಷಣ. ಪ್ರಾಣವಾಯು ಬದುಕಿನ ಸಂಕೇತ. ಉಸಿರು, ಶರೀರ ಮತ್ತು ಮನಸ್ಸು ಒಟ್ಟಾಗಿ ಕೆಲಸಮಾಡುವುದೇ ಯೋಗ ಎಂದರು. ಹಸಿರು ಗಿಡಕ್ಕೆ ನೀರೆರೆಯುವ ಮೂಲಕ ಶಿಬಿರ ಉದ್ಘಾಟಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಯೋಗ ಮತ್ತು ದೈಹಿಕ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಮಾತನಾಡಿ, ಪ್ರಾಣಾಯಾಮ ಮತ್ತು ಯೋಗದಿಂದ ಉತ್ತಮ ಜೀವನ ಸಾಧ್ಯ. ಯೋಗವನ್ನು ಹಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಉಚಿತವಾಗಿ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಸ್ವಾಸ್ಥ ಕಾಪಾಡುವ ಕಾರ್ಯಕ್ರಮ ಮಾದರಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವರ್ತಕ ನಾಗೇಶ್ ಮಾತನಾಡಿ, ಯೋಗ ಜೀವನ ಧ್ಯೇಯವಾಗಬೇಕು. ನಿಸ್ವಾರ್ಥ ಸೇವೆ ನಿರಂತರವಾಗಿದ್ದರೆ ಬದುಕು ಹಸನಾಗುತ್ತದೆ ಎಂದರು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ಉಪನಿರ್ದೇಶಕ ಬಿ.ಪಿ.ಶಿವಮೂರ್ತಿ ಉಪಸ್ಥಿತರಿದ್ದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗ ಶಾಸ್ತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಸುಮಿತ್ರಾ ಶಾಸ್ತ್ರಿ ವಂದಿಸಿದರು. ಪ್ರೇಮಾ ಪ್ರಾರ್ಥಿಸಿದರು.







