ಒಂದೇ ಫಾರ್ಮ್‌ನಲ್ಲಿ 20 ಸಾವಿರ ಕೋಳಿಗಳ ಸಾವು: ಸಚಿವ ಎ.ಮಂಜು
ಬೀದರ್‌ನಲ್ಲಿ ಹಕ್ಕಿ ಜ್ವರ (ಎಚ್5ಎನ್1) ಹಾವಳಿ

ಬೆಂಗಳೂರು, ಮೇ 8: ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೋಲ್ಕೇರಾ ಗ್ರಾಮದಲ್ಲಿರುವ ರಮೇಶ್‌ಗುಪ್ತ ಎಂಬವರ ಒಡೆತನದ ‘ಅರುಣೋದಯ ಕೋಳಿ ಸಾಕಣೆ ಕೇಂದ್ರ’ದಲ್ಲಿ ಕೋಳಿ ಶೀತ ಜ್ವರ(ಎಚ್5ಎನ್1)ದಿಂದಾಗಿ ಎ.25ರಿಂದ ಸುಮಾರು 20 ಸಾವಿರ ಕೋಳಿಗಳು ಸಾವನ್ನಪ್ಪಿದೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.
ರವಿವಾರ ವಿಧಾನಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಾವಿರಾರು ಕೋಳಿಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮೇ 5ರಂದು ಇಲಾಖೆಗೆ ವರದಿ ಬಂದಿದೆ. ಕೂಡಲೆ ಬೀದರ್‌ನ ಪ್ರಾಣಿ ರೋಗ ನಿರ್ಣಯ ಪ್ರಯೋಗಾಲಯ ಹಾಗೂ ಪಶು ಪಾಲನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೋಳಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಹೆಬ್ಬಾಳದಲ್ಲಿರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ತಲುಪಿಸಿದ್ದಾರೆ ಎಂದು ಮಂಜು ಹೇಳಿದರು.
ಕೋಳಿ ಸಾಕಣೆ ಕೇಂದ್ರ(ಫಾರಂ)ದ ಮಾಲಕರಿಗೆ ಯಾವುದೇ ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಹಾಗೂ ಅಗತ್ಯವಿರುವ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಮೇ 6ರಂದು ರೋಗವನ್ನು ಖಚಿತ ಪಡಿಸಿಕೊಳ್ಳಲು ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಅತಿಸುರಕ್ಷಾ ಪ್ರಾಣಿ ರೋಗಗಳ ಪ್ರಯೋಗಾಲಯಕ್ಕೂ ಮಾದರಿಗಳನ್ನು ಕಳುಹಿಸಲಾಗಿತ್ತು ಎಂದು ಅವರು ಹೇಳಿದರು.
ಭೋಪಾಲ್ ಪ್ರಯೋಗಾಲಯದಿಂದ ಮೇ 7ರಂದು ಸಂಜೆ ಬಂದಿರುವ ವರದಿಯು ಕೋಳಿಗಳು ಕೋಳಿ ಶೀತ ಜ್ವರ(ಎಚ್5ಎನ್1)ದಿಂದ ಸಾವನ್ನಪ್ಪಿರು ವುದಾಗಿ ಖಚಿತಪಡಿಸಿದೆ. ಆದುದರಿಂದ, ಅತಿಕಡಿಮೆ ಅವಧಿಯಲ್ಲಿ ಆ ಫಾರಂ ನಲ್ಲಿರುವ ಕೋಳಿಗಳನ್ನು ನಾಶಪಡಿಸಲು ಅಗತ್ಯವಿರುವ ತಂಡಗಳನ್ನು ರಚಿಸಲು ಹಾಗೂ ಎಲ್ಲ ಪರಿಕರಗಳ ವ್ಯವಸ್ಥೆಗಾಗಿ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಎಂದು ಮಂಜು ತಿಳಿಸಿದರು.
ಗುಜರಾತ್, ತೆಲಂಗಾಣ ಹಾಗೂ ತ್ರಿಪುರದಲ್ಲಿ ಈ ಹಿಂದೆ ಈ ರೀತಿಯ ಎಚ್5ಎನ್1 ರೋಗಹರಡಿತ್ತು. ಕಳೆದ ವರ್ಷ ಹೆಸರುಘಟ್ಟದಲ್ಲಿಯೂ ಈ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 19 ಸಾವಿರ ಕೋಳಿಗಳನ್ನು ನಾಶಪಡಿಸಲಾಗಿತ್ತು. ರಮೇಶ್‌ಗುಪ್ತ ಅವರ ಕೋಳಿ ಸಾಕಣೆ ಕೇಂದ್ರದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕೋಳಿಗಳನ್ನು, ಮೊಟ್ಟೆಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.
ದಿಲ್ಲಿಯಿಂದ ಸೋಮವಾರ ವಿಶೇಷ ತಂಡ ರಾಜ್ಯಕ್ಕೆ ಬರುತ್ತಿದೆ. ಸೋಂಕುಪೀಡಿತ ಕೋಳಿಗಳು ಹಾಗೂ ಮೊಟ್ಟೆಗಳನ್ನು ನಾಶಪಡಿಸುವ ಸಂಬಂಧ ನಮ್ಮ ಅಧಿಕಾರಿಗಳು ಸಿಬ್ಬಂದಿಗಳಿಗೆ ತರಬೇತಿ ನೀಡಲಿದ್ದಾರೆ. ತಲಾ 5 ಜನರನ್ನು ಒಳಗೊಂಡ 10 ತಂಡಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ರಮೇಶ್‌ಗುಪ್ತ ಅವರ ಫಾರಂನಲ್ಲಿ ರುವ ಎಲ್ಲ 1.50 ಲಕ್ಷ ಕೋಳಿಗಳನ್ನು ನಾಶಪಡಿಸಲಾಗುವುದು ಎಂದು ಮಂಜು ತಿಳಿಸಿದರು.
= ಕಾಯಿಲೆ ಹರಡಲು ಕಾರಣ
ರೋಗಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವನೆ, ಕೋಳಿಗಳ ಹಿಕ್ಕೆಗಳು, ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಕಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ ಎಂದು ಅವರು ಹೇಳಿದರು.
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು. ಅಡುಗೆಗಾಗಿ ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜು ನಾಶಕದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು.
ಅಲ್ಲದೆ, ಆ ಕೋಳಿ ಸಾಕಣೆ ಕೇಂದ್ರದ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿಗಳ ಮಾದರಿಯನ್ನು ಸತತ ಮೂರು ತಿಂಗಳ ಕಾಲ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗುವುದು. ಮೂರು ತಿಂಗಳ ನಂತರ ಯಾವುದೇ ಸೋಂಕು ಕಾಣಿಸದಿದ್ದರೆ ಪರೀಕ್ಷೆಯನ್ನು ಕೈಬಿಡಲಾಗುವುದು ಎಂದು ಅವರು ಹೇಳಿದರು.
ಹಕ್ಕಿಜ್ವರದ ಸೋಂಕಿನಿಂದ ಜನರನ್ನು ರಕ್ಷಿಸಲು ಪ್ರತಿ ಕುಟುಂಬಕ್ಕೂ ಉಚಿತವಾಗಿ ಟ್ಯಾಮಿಫ್ಲೂ ಮಾತ್ರೆಗಳನು ವಿತರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ವಿಮಲಾ ಪಾಟೀಲ್ ತಿಳಿಸಿದರು.
= ಎಚ್5ಎನ್1 ರೋಗದ ಲಕ್ಷಣಗಳು
ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಎಚ್5ಎನ್1 ವೈರಸ್‌ನಿಂದ ಹರಡುವ ರೋಗ. ಇದು ಟಿರ್ಕಿ ಕೋಳಿ, ಗಿನಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಎಚ್1ಎನ್1 ಜ್ವರದ ಲಕ್ಷಣಗಳಂತೆಯೆ ಇರುತ್ತವೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ, ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು. ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.
ಮುನ್ನೆಚ್ಚರಿಕೆ ಕ್ರಮಗಳು: ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತು ಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸುಬೇಕು. ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಸೋಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗಳನ್ನು ಸೋಪಿನಿಂದ ತೊಳೆಯಬೇಕು.
ಹಕ್ಕಿ ಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಹಕ್ಕಿ ಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿ ಕೊಳ್ಳಬೇಕು ಮತ್ತು ಮುಂದಿನ ನಾಲ್ಕು ದಿನಗಳವರೆಗೆ ತಮ್ಮ ದೇಹದ ಉಷ್ಣಾಂಶದಲ್ಲಾ ಗುವ ಬದಲಾವಣೆಗಳನ್ನು ಗಮನಿಸಬೇಕು. ಒಂದು ವೇಳೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.







