ಎಂಸಿಐಗೆ ಬೇಕಿದೆ ಜೀವರಕ್ಷಕ ಸರ್ಜರಿ!

ದೇಶದಲ್ಲಿ ಆರು ದಶಕಗಳಿಂದ ಜಾರಿಯಲ್ಲಿರುವ ವೈದ್ಯಕೀಯ ಮಂಡಳಿ ಕಾಯ್ದೆಯನ್ನು ಅನೂರ್ಜಿತಗೊಳಿಸಬೇಕು ಎಂದು ವೈದ್ಯರು ಹಾಗೂ ಸಾರ್ವಜನಿಕ ಹೋರಾಟಗಾರರ ಮೈತ್ರಿಕೂಟ ಆಗ್ರಹಿಸಿದೆ. ಹೀಗೆ ಮಾಡಿದಲ್ಲಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಪುನರ್ ಬದಲಾವಣೆ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಉತ್ತೇಜನ ನೀಡುವುದು ಸಾಧ್ಯ ಎನ್ನುವುದು ಅವರ ಅಭಿಮತ.
ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸಭೆೆಯಲ್ಲಿ ಈ ಬಗ್ಗೆ ಒಕ್ಕೊರಲ ನಿರ್ಣಯ ಅಂಗೀಕರಿಸಲಾಯಿತು. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಯ ಕಾರ್ಯನಿರ್ವಹಣೆ ಬಗ್ಗೆ ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯಲ್ಲಿ ಕಟು ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು. ಪ್ರಸ್ತುತ ವ್ಯವಸ್ಥೆಯಲ್ಲಿ ದೇಶದ ವೈದ್ಯಕೀಯ ಶಿಕ್ಷಣ, ಲೈಸನ್ಸಿಂಗ್ ಹಾಗೂ ವೈದ್ಯರ ಪ್ರಾಕ್ಟೀಸ್ ಮತ್ತಿತರ ಅಂಶಗಳನ್ನು ಎಂಸಿಐ ನಿಯಂತ್ರಿಸುತ್ತದೆ. ದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುವಲ್ಲಿ ಎಂಸಿಐ ವಿಫಲವಾಗಿದೆ ಎಂದು ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ. ಜತೆಗೆ ದೇಶದಲ್ಲಿ ವೈದ್ಯರ ಸಂಹಿತೆಯನ್ನು ಕಡ್ಡಾಯಗೊಳಿಸುವಲ್ಲಿ ಕೂಡಾ ಎಂಸಿಐ ವಿಫಲವಾಗಿದೆ ಎಂದು ಮಂಡಳಿ ಕಾರ್ಯವೈಖರಿಯನ್ನು ಕಟು ಶಬ್ದಗಳಲ್ಲಿ ಟೀಕಿಸಲಾಗಿದೆ. ಈ ಸಮಿತಿಯ ವರದಿಯನ್ನು ಸುಪ್ರೀಂಕೋರ್ಟ್ ಕೂಡಾ ದೃಢೀಕರಿಸಿದ್ದು, ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದಲ್ಲಿ ಮೂರು ಮಂದಿಯ ಸಮಿತಿಯನ್ನು ರಚಿಸಿ, ಕನಿಷ್ಠ ಒಂದು ವರ್ಷ ಕಾಲ ಎಂಸಿಐ ಕಾರ್ಯ ನಿರ್ವಹಣೆಯನ್ನು ಪರಾಮರ್ಶಿಸುವಂತೆ ನಿರ್ದೇಶನ ನೀಡಿದೆ.
ಈ ವೈದ್ಯರು ಹಾಗೂ ಚಳವಳಿಗಾರರ ಒಕ್ಕೂಟಕ್ಕೆ ಕೆಲ ಸಂಸದರ ಬೆಂಬಲವನ್ನೂ ಕ್ರೋಡೀಕರಿಸಲಾಗಿದೆ. ಪಕ್ಷೇತರ ರಾಜ್ಯಸಭಾ ಸದಸ್ಯ ಅಳಜಂಗಿ ವಿಶ್ವನಾಥ ಸ್ವಾಮಿ, ಸಂಯುಕ್ತ ಜನತಾದಳದ ಕೆ.ಸಿ.ತ್ಯಾಗಿ ಹಾಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಹುಸೈನ್ ದಳವಾಯಿ ಕೂಡಾ ಈ ಸಭೆಯಲ್ಲಿ ಭಾಗವಹಿಸಿ, ಈ ಒಕ್ಕೂಟದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸಂಸತ್ತಿನಲ್ಲಿ ಎಂಸಿಐ ವಿರುದ್ಧ ಧ್ವನಿ ಎತ್ತುವುದಾಗಿಯೂ ಈ ಸದಸ್ಯರು ಆಶ್ವಾಸನೆ ನೀಡಿದ್ದಾರೆ.
ಹಣ ಮಾಡುವ ದಂಧೆ
ಒಬ್ಬ ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು 2 ರಿಂದ ನಾಲ್ಕು ಕೋಟಿ ರೂ. ಪಾವತಿಸಬೇಕು ಎಂದಾದರೆ, ಆತ ವೃತ್ತಿಗೆ ಸೇರಿದ ಬಳಿಕ ರೋಗಿಗಳಿಂದ ಅದನ್ನು ವಸೂಲಿ ಮಾಡಲೇಬೇಕಾಗುತ್ತದೆ ಎಂದು ಪುಣೆ ಮೂಲದ ಸಪೋರ್ಟ್ ಫಾರ್ ಅಡ್ವೊಕೆಸಿ ಆ್ಯಂಡ್ ಟ್ರೈನಿಂಗ್ ಆಫ್ ಹೆಲ್ತ್ ಇನಿಶಿಯೇಟಿವ್ಸ್ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥ ಡಾ.ಅಭಯ ಶುಕ್ಲಾ ಹೇಳುತ್ತಾರೆ. ಇದರಿಂದ ಭ್ರಷ್ಟಾಚಾರ ಕಡ್ಡಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಜನಸಾಮಾನ್ಯರ ಕೈಗೆಟಕುವಂತಿರಬೇಕು. ಆಗ ಮಾತ್ರ ಆರೋಗ್ಯ ಸೇವೆ ಕೂಡಾ ಜನಸಾಮಾನ್ಯರ ಕೈಗೆಟಕುತ್ತದೆ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
ನನ್ನ ಅನುಭವಕ್ಕೆ ಬಂದಂತೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಪ್ಪುಹಣ ವ್ಯಾಪಕವಾಗಿ ಚಲಾವಣೆಯಾಗುತ್ತಿದೆ ಎಂದು ಪಂಜಾಬ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಜಿ.ಎಸ್.ಗ್ರೇವಾಲ್ ಹೇಳುತ್ತಾರೆ. ಗ್ರೇವಾಲ್ ಖಾಸಗಿ ವೈದ್ಯಕೀಯ ಕಾಲೇಜುಗಳ ಹಣ ಮಾಡುವ ದಂಧೆಯನ್ನು ಬಯಲಿಗೆಳೆದ ಖ್ಯಾತಿ ಇವರದ್ದು. ವೈದ್ಯಕೀಯ ಕಾಲೇಜುಗಳು ವಾಸ್ತವವಾಗಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ತೋರಿಕೆಗೆ ಉಪನ್ಯಾಸಕರ ಹೆಸರನ್ನು ನಮೂದಿಸಿ ಬೋಧನಾ ಲೈಸನ್ಸ್ ಗಳನ್ನು ಪಡೆಯುತ್ತವೆ ಎನ್ನುವುದನ್ನು ಅವರು ದಾಖಲೆ ಸಮೇತ ಬಹಿರಂಗಪಡಿಸಿದ್ದರು.
ಸಾರ್ವಜನಿಕ ಪಾರದರ್ಶಕತೆ ದೃಷ್ಟಿಯಿಂದ ವೈದ್ಯರು ಸದಸ್ಯರಾಗುವ ಮುನ್ನ ಹಾಗೂ ಆ ಬಳಿಕ ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಬೇಕು ಎನ್ನುವುದು ದಿಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಡಾ.ರಿತು ಪ್ರಿಯಾ ಮೆನನ್ ಅವರ ಆಗ್ರಹ.
ಭಾರತೀಯ ವೈದ್ಯಕೀಯ ಮಂಡಳಿಯನ್ನು ಬ್ರಿಟನ್‌ನ ಜನರಲ್ ಮೆಡಿಕಲ್ ಕೌನ್ಸಿಲ್ ಮಾದರಿಯಲ್ಲಿ ಪುನರ್ ರಚಿಸಬೇಕು ಎಂದು ಈ ಮೈತ್ರಿಕೂಟ ಆಗ್ರಹಿಸಿದೆ. ಜತೆಗೆ ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯ ಅನ್ವಯ ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯರನ್ನು ಸರಕಾರವೇ ನೇಮಿಸಬೇಕೇ ವಿನಃ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಬಾರದು. ಬ್ರಿಟನ್‌ನಲ್ಲಿ ಜಾರಿಯಲ್ಲಿರುವಂತೆ ಸರಕಾರವೇ ಸೂಕ್ತವಾದವರನ್ನು ನೇಮಿಸಬೇಕು ಎನ್ನುವುದು ಮೈತ್ರಿಕೂಟದ ಅಭಿಪ್ರಾಯ. ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ಕೇವಲ ವೈದ್ಯರು ಮಾತ್ರವಲ್ಲದೇ, ನಾಗರಿಕ ಸಮಾಜದ ಪ್ರತಿನಿಧಿಗಳು ಕೂಡಾ ಇರಬೇಕು ಎನ್ನುವುದು ಶುಕ್ಲಾ ಅವರ ವಾದ. ಭಾರತೀಯ ವೈದ್ಯಕೀಯ ಮಂಡಳಿ ಪ್ರಮುಖವಾಗಿ ಮೂರು ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಅವುಗಳೆಂದರೆ ವೈದ್ಯಕೀಯ ಶಿಕ್ಷಣದ ನಿಯಂತ್ರಣ, ಲೈಸನ್ಸಿಂಗ್ ಹಾಗೂ ಪ್ರಾಕ್ಟೀಸ್. ಈ ಕಾರ್ಯಗಳನ್ನು ಮಾಡಲು ಪ್ರತ್ಯೇಕ ಸಂಸ್ಥೆ ಅಗತ್ಯ ಎಂದು ಮೈತ್ರಿಕೂಟ ಪ್ರತಿಪಾದಿಸಿದೆ.
ಕಾರ್ಯಯೋಜನೆ
ಈ ಮೈತ್ರಿಕೂಟದ ಮುಂದಿನ ಕಾರ್ಯಯೋಜನೆಯೆಂದರೆ, ಈ ಸಾಮಾಜಿಕ ಹಿನ್ನೆಲೆಯ ಅಭಿಪ್ರಾಯಗಳನ್ನು ಹಾಗೂ ಇಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ನಿಯೋಗದಲ್ಲಿ ತೆರಳಿ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ಹೊಸ ಕರಡು ನಿಯಮಾವಳಿಯನ್ನು ಕೂಡಾ ಸರಕಾರಕ್ಕೆ ಸಲ್ಲಿಸುವುದು ಈ ಮೈತ್ರಿಕೂಟದ ಉದ್ದೇಶ. ಆರೋಗ್ಯ ಸಚಿವಾಲಯದ ಜತೆ ನೀತಿ ಆಯೋಗ ಹಾಗೂ ಪ್ರಧಾನಿ ಕಚೇರಿಗೂ ಈ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಎಂಸಿಐನಲ್ಲಿ ತರಲು ಉದ್ದೇಶಿಸಿರುವ ಸುಧಾರಣೆಗಳ ಜಾರಿ ನಿಟ್ಟಿನಲ್ಲಿ ಸಂಸದೀಯ ಸ್ಥಾಯಿ ಸಮಿತಿ ಹೊಸ ಅವಕಾಶದ ಬಾಗಿಲು ತೆರೆದಿದೆ ಎಂದು ಈ ವೈದ್ಯರು ಅಭಿಪ್ರಾಯಪಡುತ್ತಾರೆ.
ಭಾರತೀಯ ವೈದ್ಯಕೀಯ ಮಂಡಳಿಯನ್ನು ಅನೂರ್ಜಿತ ಗೊಳಿಸುವ ಕ್ರಮವನ್ನು ಹೆಚ್ಚು ಜಾಣ್ಮೆಯಿಂದ ಮಾಡಬೇಕಿದ್ದು, ಇದಕ್ಕೆ ಎಲ್ಲ ಪಕ್ಷಗಳ ಸದಸ್ಯರ ಬೆಂಬಲ ಕ್ರೋಡೀಕರಿಸುವುದು ಅಗತ್ಯ. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಜತೆ ನಿಕಟ ನಂಟು ಹೊಂದಿರುವ ಸಂಸದರ ಬೆಂಬಲ ಪಡೆಯುವುದು ಸವಾಲಿನ ಕೆಲಸ ಎಂದು ವೈದ್ಯರು ಹೇಳುತ್ತಾರೆ. ಇತ್ತೀಚಿನ ಅಂದಾಜಿನ ಪ್ರಕಾರ 88 ಮಂದಿ ಸಂಸದರು ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ನೇರ ಸಂಪರ್ಕ ಹೊಂದಿದ್ದಾರೆ ಎಂದು ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಕೇಶವ ದೇಸಿರಾಜು ಹೇಳುತ್ತಾರೆ. ಇವರೆಲ್ಲರೂ ಇಂತಹ ಯಾವುದೇ ಸುಧಾರಣೆ ತರುವ ಉದ್ದೇಶ ಮಸೂದೆಯನ್ನು ವಿರೋಧಿಸಲು ತುದಿಗಾಲಲ್ಲಿ ನಿಂತಿರುತ್ತಾರೆ ಎನ್ನುವುದು ಅವರ ಆತಂಕ.
ಇದೀಗ ಹುಟ್ಟಿಕೊಂಡಿರುವ ವೈದ್ಯರು- ಚಳವಳಿಗಾರರ ಮೈತ್ರಿಕೂಟ ಹೆಚ್ಚು ಮಂದಿ ಕಾರ್ಯನಿರತ ವೈದ್ಯರನ್ನು ತಲು ಪಬೇಕು. ಇಂಥ ಸಭೆಗಳಿಗೆ ಬರುತ್ತಿರುವುದು ಕೆಲವೇ ಪರಿಚಿತ ಮುಖಗಳು ಎಂದು ಅವರು ಹೇಳುತ್ತಾರೆ. ವೈದ್ಯ ಸಮುದಾಯ ಈ ವಿಷಯದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹೆಚ್ಚಿನ ಸಂಖ್ಯೆಯ ಮಂದಿ ಈ ನಿಟ್ಟಿನಲ್ಲಿ ಧ್ವನಿ ಎತ್ತುವಂತಾಗಬೇಕು.







