ಬ್ರಾಹ್ಮಣರ ಮಾಂಸಾಹಾರ ಸೇವನೆಯೂ... ಅಂಬೇಡ್ಕರರ ವಿಚಾರಗಳೂ...

ಭಾಗ-2
ಅಂದಹಾಗೆ ತೈತ್ತೇರಿಯ ಬ್ರಾಹ್ಮಣ ಹೇಳುವ ಮತ್ತೊಂದು ಬಲಿ ‘ಪಂಚ ಸರದಿಯ ಸೇವ’ ಎಂಬುದು. ಇದರ ಮುಖ್ಯ ಅಂಶವೆಂದರೆ ಹದಿನೇಳು ಐದು ವರ್ಷದೊಳಗಿನ ಡುಬ್ಬಗಳಿಲ್ಲದ, ಕುಳ್ಳಗಿನ ಹೋರಿಗಳು ಮತ್ತು ಅಷ್ಟೇ ಸಂಖ್ಯೆಯ ಮೂರು ವರ್ಷದೊಳಗಿನ ಕುಳ್ಳಗಿನ ಕರುಗಳನ್ನು ಬಲಿಕೊಡಬೇಕು ಎಂಬುದು. ಇನ್ನು ಅಪಸ್ತಂಭ ಧರ್ಮಸೂತ್ರದ ಶ್ಲೋಕಗಳು (14, 15, 29) ಹೇಳುವುದೆಂದರೆ ‘‘ಹಸು ಮತ್ತು ಗೂಳಿ ಪವಿತ್ರವಾದವುಗಳಾಗಿವೆ. ಆ ಕಾರಣದಿಂದ ಅವುಗಳನ್ನು ತಿನ್ನಬೇಕು’’. ಈ ಸಂದರ್ಭದಲ್ಲಿ ಗೃಹ್ಯಸೂತ್ರದಲ್ಲಿ ಕಂಡುಬರುವ ‘ಮಧುಪರ್ಕ’ ಎಂಬುವುದರ ವಿವರಣೆಯನ್ನು ಅಂಬೇಡ್ಕರರು ಕೊಡುತ್ತಾರೆ. ಆ ವಿವರಣೆಯಂತೆ, ‘‘ಆರ್ಯರಲ್ಲಿ ಪ್ರಮುಖ ಅತಿಥಿಗಳನ್ನು ಸ್ವೀಕರಿಸುವ ಒಂದು ಶಿಷ್ಟಾಚಾರ’’ ರೂಢಿಯಲ್ಲಿತ್ತು. ಆ ಶಿಷ್ಟಾಚಾರ ನಂತರ ಒಂದು ಪದ್ಧತಿಯಾಗಿ ಪರಿವರ್ತನೆಯಾಯಿತು.
ತದನಂತರ ಅದು ಒಂದು ಆಚರಣೆಯೂ ಆಯಿತು. ಈ ಅಚರಣೆಯ ಮುಖ್ಯ ಅಂಶವೆಂದರೆ ಮಧುಪರ್ಕದ ಅರ್ಪಣೆ. ಮಧುಪರ್ಕದ ಈ ಸಂಪೂರ್ಣ ವಿವರಣೆ ಅನೇಕ ಗೃಹ್ಯಸೂತ್ರಗಳಲ್ಲಿ ದಾಖಲಾಗಿದೆ. ಬಹುತೇಕ ಗೃಹ್ಯ ಸೂತ್ರಗಳ ಆಧಾರದ ಮೇಲೆ ಹೇಳುವುದಾದರೆ ಮಧುಪರ್ಕವನ್ನು ಸ್ವೀಕರಿಸುವ ಹಕ್ಕನ್ನು ಹೊಂದಿರುವ ಆರು ಜನರು ಕಾಣಸಿಗುತ್ತಾರೆ. ಅವರು ಯಾರ್ಯಾರೆಂದರೆ 1.ಋತ್ವಿಜ ಅಥವಾ ಬಲಿಯನ್ನು ನಡೆಸಲು ಕರೆಯಲ್ಪಡುವ ಬ್ರಾಹ್ಮಣ. 2.ಆಚಾರ್ಯ, ಅಂದರೆ ಗುರು. 3. ಮದುಮಗ. 4.ರಾಜ. 5.ಆಗತಾನೆ ಗುರುಕುಲದಲ್ಲಿ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬಂದಿರುವ ಸ್ನಾತಕ. 6.ಆತಿಥ್ಯ ನೀಡುವವರಿಗೆ ಯಾರು ಪ್ರಿಯವಾಗಿರುತ್ತಾನೋ ಆತ. ಅಂದಹಾಗೆ ಈ ಆರು ಜನರಲ್ಲಿ ರಾಜ, ಋತ್ವಿಜ ಮತ್ತು ಆಚಾರ್ಯರನ್ನು ಹೊರತುಪಡಿಸಿ ಉಳಿದ ಮೂವರಿಗೆ (ಮದುಮಗ, ಸ್ನಾತಕ, ಅತಿಥಿ) ವರ್ಷಕ್ಕೆ ಒಮ್ಮೆ ಮಾತ್ರ ಮಧುಪರ್ಕ ನೀಡಲಾಗುತ್ತಿತ್ತು. ಆದರೆ ರಾಜ, ಋತ್ವಿಜ ಮತ್ತು ಆಚಾರ್ಯರಿಗೆ ಅವರು ಯಾವಾಗ ಆಗಮಿಸಿದರೂ ಅವರಿಗೆ ಮಧುಪರ್ಕ ಅರ್ಪಿಸಲಾಗುತ್ತಿತ್ತು.
ಈ ‘ಮಧುಪರ್ಕ’ದಲ್ಲಿ ಏನೇನಿರುತ್ತಿತ್ತು? ಮಾಧವ ಗೃಹ್ಯ ಸೂತ್ರ (ಅಧ್ಯಾಯ 1, ಶ್ಲೋಕ 9.22) ಹೇಳುತ್ತದೆ, ‘ವೇದದ ಆಜ್ಞೆಯಂತೆ ಮಾಂಸರಹಿತವಾಗಿ ಮಧುಪರ್ಕ ತಯಾರಿಸುವುದು ಸಲ್ಲದು’’ ಮತ್ತು ಆ ಗೃಹ್ಯಸೂತ್ರ ಶಿಫಾರಸು ಮಾಡುವುದೇನೆಂದರೆ ಒಂದು ವೇಳೆ ಹಸು ತಪ್ಪಿಸಿಕೊಂಡು ಹೋಗಿದ್ದರೆ ಆಗ ಆಡಿನ ಮಾಂಸ ಅಥವಾ ಪಾಯಸ (ಹಾಲಿನ ಜೊತೆ ಅಕ್ಕಿ ಬೇಯಿಸಿದ) ನೀಡಬೇಕು. ಇನ್ನು ಹಿರಣ್ಯ ಗೃಹ್ಯ ಸೂತ್ರ ಹೇಳುತ್ತದೆ ಮಧುಪರ್ಕದಲ್ಲಿ ಬೇರೇ ಮಾಂಸವನ್ನು ಸಹ ನೀಡಬಹದು. ಹಾಗೆಯೇ ಬೌದ್ಧಾಯನ ಗೃಹ್ಯ ಸೂತ್ರ ಹೇಳುತ್ತದೆ ಒಂದು ವೇಳೆ ಹಸು ಹೊರಗಡೆ ಹೋಗಿದ್ದರೆ ಆಡು ಅಥವಾ ಟಗರಿನ ಮಾಂಸವನ್ನು ಅರ್ಪಿಸಬಹುದು. ಅದೂ ಇಲ್ಲ ಅಂದರೆ ಮಾಂಸರಹಿತವಾಗಿ ಮಧುಪರ್ಕ ಸಾಧ್ಯವೇ ಇಲ್ಲದಿರುವುದರಿಂದ ಜಿಂಕೆ ಇತ್ಯಾದಿ ಕಾಡುಪ್ರಾಣಿಗಳ ಮಾಂಸವನ್ನಾದರೂ ಅರ್ಪಿಸಬೇಕು. ಈ ಸಮಯದಲ್ಲಿ ಅಕಸ್ಮಾತ್ ಯಾರಿಗಾದರೂ ಮಾಂಸ ಅರ್ಪಿಸುವುದು ಸಾಧ್ಯವೇ ಇಲ್ಲ ಎಂದಾಗ ಧಾನ್ಯವನ್ನು ಬಡಿಸಬಹದು. ಒಟ್ಟಾರೆ ಸ್ಪಷ್ಟ ಅದೆಂದರೆ ಮಧುಪರ್ಕದ ಅತ್ಯಗತ್ಯ ಘಟಕ ಮಾಂಸ ಅದರಲ್ಲೂ ಹಸುವಿನ ಮಾಂಸ ಎಂಬುದು. (ಸಂ.7, ಪು.326)
ಈ ಸಮಯದಲ್ಲಿ ಅತಿಥಿಗಾಗಿ ಹಸುವನ್ನು ಕೊಲ್ಲುವುದು ಅದೆಷ್ಟು ಮಟ್ಟಕ್ಕೆ ಬೆಳೆದಿತ್ತು? ಹೇಗೆಂದರೆ ಆಗಮಿಸುತ್ತಿದ್ದ ಅತಿಥಿಯನ್ನು ಗೋಘ್ನ ಎನ್ನಲಾಗುತ್ತಿತ್ತು. ಅಂದರೆ ಹಸುವನ್ನು ಕೊಲ್ಲುವವ ಎಂದರ್ಥ! ಈ ನಿಟ್ಟಿನಲ್ಲಿ ಹಸುವಿನ ಈ ಯಥೇಚ್ಛ ಹತ್ಯೆಯನ್ನು ತಪ್ಪಿಸಲು ಅಶ್ವಲ್ಯಾಯನ ಗೃಹ್ಯ ಸೂತ್ರ ನೀಡಿದ್ದ ಒಂದು ಸಲಹೆ ಎಂದರೆ ಮನೆಗೆ ಅತಿಥಿ ಬಂದಾಗ ಶಿಷ್ಟಾಚಾರವನ್ನು ಉಲ್ಲಂಘಿಸಲು ಹಸುವನ್ನು ತಪ್ಪಿಸಿಕೊಳ್ಳುವಂತೆ ಮಾಡಬೇಕು ಎಂದು! ಇಲ್ಲಿ ಅಂಬೇಡ್ಕರರು ಅಪಸ್ತಂಭ ಗೃಹ್ಯ ಸೂತ್ರದ ಸತ್ತ ವ್ಯಕ್ತಿಯ ಶವಸಂಸ್ಕಾರಕ್ಕೆ ಪ್ರಾಣಿಗಳನ್ನು ಬಲಿಕೊಟ್ಟು ಆ ಪ್ರಾಣಿಯ ವಿವಿಧ ಅಂಗಗಳನ್ನು ಆ ವ್ಯಕ್ತಿಯ ವಿವಿಧ ಅಂಗಗಳ ಮೇಲೆ ಇಡುವುದನ್ನು ಉಲ್ಲೇಖಿಸುತ್ತಾರೆ. ಈ ಪ್ರಕಾರ, ಉದಾಹರಣೆಗೆ ಸತ್ತ ವ್ಯಕ್ತಿಯ ಹೃದಯದ ಮೇಲೆ ಪ್ರಾಣಿಯ ಹೃದಯ ಇಡುವುದು, ಸತ್ತ ವ್ಯಕ್ತಿಯ ಕೈಗಳ ಮೇಲೆ ಪ್ರಾಣಿಗಳ ಕಿಡ್ನಿಗಳನ್ನು ಇಡುವುದು, ಹೀಗೆ... ಅಂದರೆ ಸತ್ತ ಆ ವ್ಯಕ್ತಿಯು ಸತ್ತ ಆ ಪ್ರಾಣಿಯ ಪ್ರಾಣ ಮತ್ತು ವಿವಿಧ ಅಂಗಗಳ ಮೂಲಕ ಮತ್ತೆ ಮರು ಹುಟ್ಟಲಿ ಎಂದು ಹೀಗೆ ಇಡಲಾಗುತ್ತಿತ್ತು. ಆ ನಂತರವಷ್ಟೆ ಅದನ್ನು ಸುಡಲಾಗುತ್ತಿತ್ತು! (ಸಂ.7, ಪು.327)
ಮುಂದುವರಿದು ಅಂಬೇಡ್ಕರರು ಹೇಳುವುದೇನೆಂದರೆ ‘‘ಅದೇ ಅಪಸ್ತಂಭ ಧರ್ಮಸೂತ್ರ ಮತ್ತು ಶತಪಥ ಬ್ರಾಹ್ಮಣಗಳಲ್ಲಿ ಹಸುವಿನ ಈ ಹತ್ಯೆಯ ವಿರುದ್ಧ ಎಚ್ಚರಿಕೆಯ ಸಂದೇಶಗಳನ್ನೂ ನೀಡಲಾಗಿದೆ. ಹೀಗೆ ನೀಡಲಾದ ಸಂದೇಶ ಹಸುವನ್ನು ಯಥೇಚ್ಛವಾಗಿ ಕೊಲ್ಲುವುದು ಮತ್ತು ಅದನ್ನು ಯಥೇಚ್ಛವಾಗಿ ತಿನ್ನುವುದರ ವಿರುದ್ಧ ನೀಡಲಾದ ಎಚ್ಚರಿಕೆಯೇ ಹೊರತು ಹಸುವನ್ನು ಕೊಲ್ಲುವುದರ ವಿರುದ್ಧದ ನಿಷೇಧವಲ್ಲ. ನಿಜ ಹೇಳಬೇಕೆಂದರೆ ಹೀಗೆ ನೀಡಲಾದ ಎಚ್ಚರಿಕೆಯೇ ಹಸುವನ್ನು ಕೊಲ್ಲುವುದು ಮತ್ತು ತಿನ್ನುವುದು ಅದೆಷ್ಟು ಸಾಮಾನ್ಯ ಅಭ್ಯಾಸವಾಗಿತ್ತು ಎಂಬುದನ್ನು ಸಾಧಿಸಿ ತೋರಿಸುತ್ತದೆ’’ ಎಂದು. ಈ ಸಂದರ್ಭದಲ್ಲಿ ಅಂಬೇಡ್ಕರರು ಶತಪಥ ಬ್ರಾಹ್ಮಣದಲ್ಲಿ ಬರುವ ಆರ್ಯರ ಶ್ರೇಷ್ಠ ಋಷಿಯಾದ ಯಾಜ್ಞವಲ್ಕ್ಯನ ಪ್ರಸಂಗವನ್ನು ದಾಖಲಿಸುತ್ತಾರೆ. ನಿಜ ಹೇಳಬೇಕೆಂದರೆ ಶತಪಥ ಬ್ರಾಹ್ಮಣದಲ್ಲಿ ಹಸುವಿನ ಹತ್ಯೆಯ ವಿರುದ್ಧ ನೀಡಲಾದ ಎಚ್ಚರಿಕೆ ಅದು ಋಷಿ ಯಾಜ್ಞವಲ್ಕ್ಯನಿಗೆ ನೀಡಿದ ಎಚ್ಚರಿಕೆಯಾಗಿತ್ತು! ಅಂದಹಾಗೆ ಇದಕ್ಕೆ ಯಾಜ್ಞವಲ್ಕ್ಯರು ನೀಡಿದ ಪ್ರತಿಕ್ರಿಯೆ? ಎಚ್ಚರಿಕೆಯನ್ನು ಸಾವಧಾನವಾಗಿ ಕೇಳಿದ ಯಾಜ್ಞವಲ್ಕ್ಯರು ಹೇಳಿದ್ದೆಂದರೆ ‘‘ನನಗೋಸ್ಕರ ಒಂದನ್ನು ಕತ್ತರಿಸಿ.
ಅದೂ ಎಳೆಗರುವಾಗಿದ್ದರೆ ಮಾತ್ರ ತಿನ್ನುತ್ತೇನೆ’’ ಎಂದು! ಒಟ್ಟಾರೆ ಅಂಬೇಡ್ಕರರ ಇವಿಷ್ಟು ವಿವಿಧ ಧರ್ಮಸೂತ್ರಗಳ, ಬ್ರಾಹ್ಮಣಗಳ, ಋಗ್ವೇದದ ಆಧಾರದ ಬರಹಗಳ ಸಾರ ಬ್ರಾಹ್ಮಣರು ಆರ್ಯರ ಇತಿಹಾಸದ ಕಾಲದಲ್ಲಿ ಯಥೇಚ್ಛವಾಗಿ ಯಜ್ಞ-ಯಾಗ ಮತ್ತು ಶಿಷ್ಟಾಚಾರದ ಹೆಸರಿನಲ್ಲಿ ಮಾಂಸಾಹಾರ ಮಾಡುತ್ತಿದ್ದರು. ಅದರಲ್ಲೂ ಹಸುವಿನ ಮಾಂಸ ಸೇವಿಸುತ್ತಿದ್ದರು ಎಂಬುದು. ಹಾಗಿದ್ದರೆ ಅವರು ಏಕೆ ಮಾಂಸಾಹಾರ ತೊರೆದರು? ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ. ಅಂಬೇಡ್ಕರರು ಅದಕ್ಕೂ ಕೂಡ ತಮ್ಮ ಆ ಕೃತಿಯ ಮಂದಿನ ಅಧ್ಯಾಯಗಳಲ್ಲಿ ಉತ್ತರ ನೀಡುತ್ತಾರೆ. ಅಂಬೇಡ್ಕರರ ಬರಹಗಳ ಈ ಹಿನ್ನೆಲೆಯಲ್ಲಿ ಸದ್ಯ ಶಿವಮೊಗ್ಗದ ಮತ್ತೂರಿನಲ್ಲಿ ಸಂಕೇತಿಗಳು ನಡೆಸಿರುವ ಸೋಮಯಾಗದಲ್ಲಿ ಆಡುಗಳನ್ನು ಬಲಿಕೊಟ್ಟಿರುವುದು, ಸೋಮರಸ ಸೇವಿಸಿರುವುದನ್ನು ಉಲ್ಲೇಖಿಸುವುದಾದರೆ ಈಗ ನಡೆದಿರುವ ಈ ಆಚರಣೆ ಅದು ಸಂಪೂರ್ಣ ಋಗ್ವೇದ ಮತ್ತು ಧರ್ಮಸೂತ್ರಗಳ ಪ್ರಕಾರವೇ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಅಂದಹಾಗೆ ಮತ್ತೆ ಹೇಳುವುದಾದರೆ ಅಂಬೇಡ್ಕರರು ಇದನ್ನು ದಾಖಲಿಸಿರುವುದು ಯಾರಿಗೋ ಅಪಮಾನಮಾಡಬೇಕು, ಅಪಚಾರ ಎಸಗಬೇಕು ಎಂದಲ್ಲ. ಬದಲಿಗೆ ತನ್ನ ಸಮುದಾಯವಾದ ಅಸ್ಪಶ್ಯ ಸಮುದಾಯದ ಇತಿಹಾಸ ಹುಡುಕುತ್ತಾ ‘ಸತ್ತ ಹಸುಗಳನ್ನು ತಿನ್ನುತ್ತಿದ್ದ ನನ್ನ ಜನ ಅಸ್ಪಶ್ಯರಾದದ್ದು ಹೇಗೆ? ಇತಿಹಾಸದಲ್ಲಿ ಇನ್ಯಾರೂ ಹಸುಗಳನ್ನು ತಿಂದಿಲ್ಲವೇ? ತಿಂದಿದ್ದರೆ ಹಾಗೆ ಹಸುವಿನ ಮಾಂಸ ತಿನ್ನುವುದನ್ನು ಅವರು ಏಕೆ ಬಿಟ್ಟರು? ತನ್ನ ಜನರು ಏಕೆ ಬಿಡಲಿಲ್ಲ? ಆ ಕಾರಣಕ್ಕೆ ಅವರು ಹೇಗೆ ಅಸ್ಪಶ್ಯರಾಗು ವಂತಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಈ ಸಂಬಂಧ ವಿವಿಧ ಶಾಸ್ತ್ರ-ಪುರಾಣಗಳು, ಶೃತಿ-ಸ್ಮತಿಗಳನ್ನು ಅಂಬೇಡ್ಕರರು ಜಾಲಾಡಿದ್ದಾರೆ. ಹಾಗೆ ಜಾಲಾಡುತ್ತಲೇ ತನ್ನ ಸಮುದಾಯದ ಸಂಸ್ಕೃತಿ ಮತ್ತು ಇತಿಹಾಸವನ್ನು ಬೇರೆ ಸಮುದಾಯಗಳ ಸಂಸ್ಕೃತಿ ಮತ್ತು ಇತಿಹಾಸದೊಡನೆ ಹೋಲಿಸುತ್ತಾ ಹಾದಿಯಲ್ಲಿ ಅಂಬೇಡ್ಕರರು ಬ್ರಾಹ್ಮಣರ ಮಾಂಸಾಹಾರವನ್ನು ಕೂಡ ದಾಖಲಿಸಿದ್ದಾರಷ್ಟೆ.
ಈ ನಿಟ್ಟಿನಲ್ಲಿ ಅಂಬೇಡ್ಕರರ ಇಂತಹ ವಸ್ತುನಿಷ್ಠ ಅಧ್ಯಯನಶೀಲತೆ, ದೂರದೃಷ್ಟಿ, ಗತವನ್ನು ದಾಖಲಿಸಿ ಭವಿಷ್ಯಕ್ಕೆ ಪೂರಕವಾಗಿ ವರ್ತಮಾನವನ್ನು ಕಟ್ಟುವಲ್ಲಿನ ಅವರ ವಿಚಾರ, ಈ ಸಂಬಂಧದ ಅವರ ಸಾಹಿತ್ಯ ವರ್ತಮಾನದ ನಮ್ಮ ಅನೇಕ ವಿಚಾರಗಳಿಗೆ ಖಂಡಿತ ದೀವಿಗೆಯಾಗುತ್ತದೆ. ಹಾಗೆಯೇ ಶಿವಮೊಗ್ಗದಲ್ಲಿ ನಡೆದಿರುವ ಬ್ರಾಹ್ಮಣರ ಮಾಂಸಾಹಾರ ಸೇವನೆಯನ್ನು ಪ್ರಸ್ತಾಪಿಸುವುದಾದರೆ ಅಕ್ಷರಶಃ ಈ ಘಟನೆ ಜಾತಿರಹಿತ ವ್ಯವಸ್ಥೆಗೆ ಅಡಿಗಲ್ಲಾಗುತ್ತದೆ. ಯಾಕೆಂದರೆ ಮುಂದೊಂದು ದಿನ ಎಲ್ಲರೂ ಆಹಾರದಲ್ಲಿ ಯಾವುದೇ ಭೇದ ಭಿನ್ನ ಮಾಡದೆ ಮಾಂಸಾಹಾರ ಸಸ್ಯಾಹಾರ ಎಂದು ತಾರತಮ್ಯ ಮಾಡದೆ ಎಲ್ಲವನ್ನೂ ಸೇವಿಸಿದರೆ? ಜಾತಿವ್ಯವಸ್ಥೆ ನಿಂತಿರುವ ಅಡಿಪಾಯ ಖಂಡಿತ ಕುಸಿಯುತ್ತದೆ. ಈ ಹಿನ್ನೆಲೆ ಯಲ್ಲಿ ಅಂಬೇಡ್ಕರರ ಬರಹಗಳ ಆಶಯ ಕೂಡ ಇದೇ ಆಗಿದೆ ಎಂಬುದೂ ಕೂಡ ನಾವು ಅತ್ಯಗತ್ಯ ಅರಿಯಬೇಕಾದ ವಾಸ್ತವ.







