ಚುಟುಕು ಸುದ್ದಿಗಳು
ಬಸ್ -ಬೈಕ್ ಢಿಕ್ಕಿ: ಮಹಿಳೆ ಮೃತ್ಯು
ಮಣಿಪಾಲ, ಮೇ 8: ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ರವಿವಾರ ಮಧ್ಯಾಹ್ನ ಬೈಕ್‌ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕುಕ್ಕೆಹಳ್ಳಿಯ ಶಕುಂತಳಾ ಆಚಾರ್ಯ(45) ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯ ಬೈಕ್‌ನಲ್ಲಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಿಂದ ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಟೈಗರ್ ಸರ್ಕಲ್ ಕಡೆಗೆ ಬರುವಾಗ ಉಡುಪಿಯಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಶಕುಂತಳಾ ಆಚಾರ್ಯ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು
ಕುಂದಾಪುರ, ಮೇ 8: ಗೋಪಾಡಿ ಗ್ರಾಮದ ನಟರಾಜ್ ಬಾರ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬಾಬು ದೇವಾಡಿಗ (62) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಲಕ್ಷ್ಮಣ್ ಹಾಗೂ ಸಹಸವಾರ ಪ್ರವೀಣ್ ಎಂಬವರು ಗಾಯಗೊಂಡಿದ್ದಾರೆ. ಶನಿವಾರ ಸಂಜೆ 7 ಗಂಟೆಗೆ ಕುಂದಾಪುರ ಕಡೆಯಿಂದ ಕುಂಭಾಶಿ ಕಡೆಗೆ ಹೋಗುತ್ತಿದ್ದ ಬೈಕ್ ಬಾಬು ದೇವಾಡಿಗರಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ರಾತ್ರಿ 8 ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಕಳವು
ಮಣಿಪಾಲ, ಮೇ 8: ಅಲೆವೂರು ರಸ್ತೆಯ ವಾಟರ್ ಟ್ಯಾಂಕ್ ಬಳಿಯಲ್ಲಿರುವ ‘ಮೊಬೈಲ್ ರೆನ್’ ಅಂಗಡಿಗೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು ಮೊಬೈಲ್ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ತಲ್ಲೂರು ಉಪ್ಪಿನಕುದ್ರುವಿನ ಸತೀಶ್ ಶ್ರೀಯಾನ್ ಎಂಬವರ ಅಂಗಡಿಯ ಹಿಂಬದಿಯ ತಗಡು ಛಾವಣಿಯನ್ನು ಎತ್ತಿ ಒಳನುಗ್ಗಿದ ಕಳ್ಳರು 15 ಮೊಬೈಲ್‌ಗಳನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 53,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಕಳವು
ಮಣಿಪಾಲ, ಮೇ 8: ಪರ್ಕಳ ಗಾಂಧಿ ಮೈದಾನ ಬಳಿಯ ನಿವಾಸಿ ಯೋಗೀಶ್ ಎಸ್. ತಮ್ಮ ಮನೆಯ ಬಳಿ ಮೇ 5ರಂದು ರಾತ್ರಿ ವೇಳೆ ನಿಲ್ಲಿಸಿದ್ದ ಕೆಎ 20 ಎಂ 6618ನೆ ನಂಬರಿನ ಮಾರುತಿ 800 ಕಾರು ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರೀಕ್ಷಣಾ ಜಾಮೀನು ಕೋರಿ
ಹೈಕೋರ್ಟ್‌ಗೆ ನರೇಶ್ ಶೆಣೈ ಅರ್ಜಿ
ಮಂಗಳೂರು, ಮೇ 8: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ನಮೋ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಬಾಳಿಗಾರ ಹತ್ಯೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ನರೇಶ್ ಶೆಣೈಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದು, ಈ ಹಿನ್ನೆಲೆಯಲ್ಲಿ ನರೇಶ್ ಈ ಹಿಂದೆ ಮಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ನ್ಯಾಯಾಲಯ ನರೇಶ್ ಶೆಣೈಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ನರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಕಾರು ಢಿಕ್ಕಿ: ಬೈಕ್ ಸಹ ಸವಾರ ಗಂಭೀರ
ಕಾರ್ಕಳ, ಮೇ 8 : ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ, ಅಯ್ಯಪ್ಪನಗರ ನಿವಾಸಿ ಗೋವಿಂದ (18) ಗಾಯಗೊಂಡ ಘಟನೆ ಕಾಬೆಟ್ಟು ಶಾಲೆ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ-ನಗದು ಕಳವು
ಕುಂದಾಪುರ, ಮೇ 8: ಕರ್ಕುಂಜೆ ಗ್ರಾಮದ ಹೆರ್ಜಾಡಿ ಎಂಬಲ್ಲಿ ಶನಿವಾರ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ನಗ-ನಗದು ಕಳವುಗೈದಿದ್ದಾರೆ.
ಹೆರ್ಜಾಡಿಯ ರಾಮ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಗೋದ್ರೆಜ್ ಕಪಾಟುಗಳನ್ನು ಒಡೆದು, ಅದರಲ್ಲಿದ್ದ 5 ಚಿನ್ನದ ಉಂಗುರ, 1 ಜೊತೆ ಚಿನ್ನದ ಕಿವಿ ಓಲೆ, ಚಿನ್ನದ ತಾಳಿ ಸೇರಿದಂತೆ 30 ಗ್ರಾಂ ತೂಕದ 45,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 90,000 ರೂ. ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







