ಬಾಕಿಯಿರುವ ಪ್ರಕರಣಗಳ ಇತ್ಯರ್ಥಕ್ಕೆ 70,000ಕ್ಕೂ ಅಧಿಕ ನ್ಯಾಯಾಧೀಶರು ಅಗತ್ಯ: ಸಿಜೆಐ ಠಾಕೂರ್
ಕಟಕ್,ಮೇ 8: ದೇಶದಲ್ಲಿ ನ್ಯಾಯಾಧೀಶರ ಕೊರತೆಯ ಬಗ್ಗೆ ತನ್ನ ತೀವ್ರ ಕಳವಳವನ್ನು ರವಿವಾರ ಮತ್ತೊಮ್ಮೆ ವ್ಯಕ್ತಪಡಿಸಿದ ಭಾರತದ ಶ್ರೇಷ್ಠ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು,ನ್ಯಾಯವನ್ನು ಪಡೆದುಕೊಳ್ಳುವುದು ಮೂಲಭೂತ ಹಕ್ಕು ಆಗಿದೆ ಮತ್ತು ಸರಕಾರಗಳು ಜನರಿಗೆ ಅದನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದರು.
ಇತ್ತೀಚಿಗೆ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ನ್ಯಾಯಾಧೀಶರ ಕೊರತೆ ಕುರಿತಂತೆ ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದ್ದ ನ್ಯಾ.ಠಾಕೂರ್ ಇಲ್ಲಿ ಉಚ್ಚ ನಾಯಾಲಯದ ಸಂಚಾರಿ ಪೀಠದ ಶತಾಬ್ದಿ ಆಚರಣೆ ಸಂದರ್ಭ ಕಾನೂನು ತಜ್ಞರ ಸಮಾವೇಶವನ್ನುದ್ದೇಶಿಸಿ ಮಾತನಾಡುವಾಗ ಮತ್ತೊಮ್ಮೆ ವಿಷಯವನ್ನು ಪ್ರಸ್ತಾಪಿಸಿದರು.
ನ್ಯಾಯಾಧೀಶರ ನೇಮಕಗಳು ತ್ವರಿತವಾಗಿ ನಡೆಯಬೇಕೆಂದು ನಾವು (ನ್ಯಾಯಾಂಗ) ಹಾರೈಸುತ್ತಲೇ ಇದ್ದೇವೆ, ಆದರೆ ಆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ವ್ಯವಸ್ಥೆಯು ಮಾತ್ರ ತುಂಬ ನಿಧಾನವಾಗಿದೆ ಎಂದ ಅವರು, ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕದ ಸುಮಾರು 170 ಪ್ರಸ್ತಾವನೆಗಳು ಸರಕಾರದ ಬಳಿ ಬಾಕಿಯಾಗಿವೆ ಎಂದು ಬೆಟ್ಟು ಮಾಡಿದರು. ನ್ಯಾಯಾಧೀಶರ ಕೊರತೆಯು ಈ ದೇಶದಲ್ಲಿ ನ್ಯಾಯಾಂಗವು ಎದುರಿಸುತ್ತಿರುವ ಬೃಹತ್ ಸವಾಲು ಆಗಿದೆ. ದೇಶದ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ 900ಕ್ಕೂ ಅಧಿಕ ನ್ಯಾಯಾಧೀಶರ ಹುದ್ದೆಗಳಿದ್ದು, ಈ ಪೈಕಿ 450ಕ್ಕೂ ಅಧಿಕ ಹುದ್ದೆಗಳನ್ನು ತಕ್ಷಣವೇ ತುಂಬಬೇಕಾದ ಅಗತ್ಯವಿದೆ ಎಂದರು.
ನ್ಯಾಯಾಧೀಶರು ಮತ್ತು ಜನರ ನಡುವಿನ ಕಳಪೆ ಅನುಪಾತವನ್ನು ಪ್ರಸ್ತಾಪಿಸಿದ ಅವರು,1987ರಲ್ಲಿ ಆಗ ಬಾಕಿಯಿದ್ದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು 44,000 ನ್ಯಾಯಾಧೀಶರ ಅಗತ್ಯವಿದೆ ಎಂದು ಕಾನೂನು ಆಯೋಗವು ಹೇಳಿತ್ತು. ಆದರೂ ಇಂದು ದೇಶದಲ್ಲಿರುವ ನ್ಯಾಯಾಧೀಶರ ಸಂಖ್ಯೆ 18,000 ಮಾತ್ರ ಎಂದು ಹೇಳಿದರು.







