ಪ್ರಧಾನಿ ಮೋದಿಯ ಬಿ.ಎ, ಎಂ.ಎ ಪದವಿಪ್ರಮಾಣಪತ್ರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಬಿಜೆಪಿ

ಹೊಸದಿಲ್ಲಿ, ಮೇ 9: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎಂ. ಎ. ಮತ್ತು ಬಿ.ಎ. ಪದವಿಯ ಪ್ರಮಾಣ ಪತ್ರವನ್ನು ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರದರ್ಶಿಸುವ ಮೂಲಕ ಪ್ರಧಾನಿಯ ಶೈ ಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನಿಸಿದ್ದ ದಿಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ತಿರುಗೇಟು ನೀಡಿದ್ದಾರೆ.
ಮೋದಿ ಅವರು ದಿಲ್ಲಿ ವಿವಿಯಿಂದ ಪದವಿ ಪಡೆದಿರುವ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಎಎಪಿ ಹೇಳಿಕೆ ನೀಡಿತ್ತು. ಪ್ರಧಾನಿ ಮೋದಿ ವಿರುದ್ಧ ಅನಗತ್ಯ ಆರೋಪ ಮಾಡಿರುವ ಮುಖ್ಯ ಮಂತ್ರಿ ಅರವಿಂದ್ ಕೇಜ್ರವಾಲ್ ಅವರು ಕ್ಷಮೆ ಯಾಚಿಸಬೇಕೆಂದು ಅಮಿತ್ ಷಾ ಮತ್ತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೋದಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಕೇಂದ್ರ ಸಚಿವ ಅರುಣ್ ಜೇಟ್ಲಿ " ಮೋದಿ 1975-77ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ದಿಲ್ಲಿ ವಿವಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದರು'' ಎಂದು ಹೇಳಿದ್ದಾರೆ
" ತುರ್ತು ಪರಿಸ್ಥಿತಿ ಬಳಿಕ ನಾನು ದಿಲ್ಲಿ ವಿವಿಯ ವಿದ್ಯಾರ್ಥಿ ಸಂಘದ ನಾಯಕನಾಗಿದ್ದೆ. ಈ ಕಾರಣದಿಂದಾಗಿ ಮೋದಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ದಿನಗಳು ಚೆನ್ನಾಗಿ ನೆನಪಿದೆ” ಎಂದು ಜೇಟ್ಲಿ ವಿವರಿಸಿದರು.





