ಜೈಶ್ ನಂಟು ಹೊಂದಿದ್ದಾರೆಂಬ ಶಂಕೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 10 ಮಂದಿಯ ಬಿಡುಗಡೆ

ನವದೆಹಲಿ :ನಿಷೇಧಿತ ಸಂಘಟನೆ ಜೈಶ್-ಇ-ಮೊಹಮ್ಮದ್ ಬೆಂಬಲಿಗರೆಂದು ಶಂಕಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ 10 ಮಂದಿಯ ವಿರುದ್ಧ ಅವರ ಆರೋಪ ಸಾಬೀತು ಪಡಿಸಲು ಸಾಕಷ್ಟು ಸಾಕ್ಷ್ಯಗಳಿರದ ಕಾರಣ ಬಿಡುಗಡೆಗೊಳಿಸಲಾಗಿದೆ.
ನಾಲ್ಕು ಮಂದಿಯನ್ನುಶನಿವಾರ ಅವರಿಗೆ ಸಾಕಷ್ಟು ಕೌನ್ಸೆಲಿಂಗ್ ನಡೆಸಿದ ಬಳಿಕ ಬಿಡುಗಡೆಗೊಳಿಸಲಾಗಿದ್ದರೆ ಉಳಿದಆರು ಮಂದಿಯನ್ನು ಸೋಮವಾರ ಅವರು ಸರಿಯಾದ ಹಾದಿಯಲ್ಲಿ ನಡೆಯುತ್ತಾರೆಂದು ಅವರ ಹೆತ್ತವರಿಂದ ಲಿಖಿತ ಹೇಳಿಕೆ ಬರೆಸಿಕೊಂಡ ನಂತರ ಬಿಡುಗಡೆಗೊಳಿಸಲಾಗಿದೆ.
ಮೇ3ರ ತಡರಾತ್ರಿ ಹಲವು ದಾಳಿಗಳನ್ನು ನಡೆಸಿದ ದೆಹಲಿ ಪೊಲೀಸರ ಉಗ್ರವಾದ ನಿಗ್ರಹ ವಿಶೇಷ ಘಟಕ 13 ಮಂದಿಯನ್ನು ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿತ್ತು. ಅವರಲ್ಲಿ ಮೂರು ಮಂದಿ ಸಾಜಿದ್, ಸಮೀರ್ ಅಹಮದ್ ಹಾಗ ಶಕೀರ್ ಅನ್ಸಾರಿಯನ್ನು ಬಂಧಿಸಲಾಗಿದ್ದರೆ ಉಳಿದ ಹತ್ತು ಮಂದಿಯನ್ನು ವಿಚಾರಣೆಗೆಂದು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಬಿಡುಗಡೆಯಾದ ಯುವಕರು ವಿಚಾರಣೆಗೆ ಕರೆದಾಗೆಲ್ಲಾ ಹಾಜರಾಗಬೇಕಾಗುವುದು ಎಂದೂ ಹೇಳಲಾಗಿದೆಯಲ್ಲದೆ ಅವರ ಪೋಷಕರು ಅವರು ಸರಿಯಾದ ಹಾದಿಯಲ್ಲಿ ನಡೆಯುವಂತೆ ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದ್ದಾರೆಂದು ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಅರವಿಂದ್ ದೀಪ್ ಹೇಳಿದ್ದಾರೆ.





