ಮುಂಡ್ಕೂರು ರಾಜಮುಗುಳಿಯಲ್ಲಿ ಪುರಾತನ ಕಾಲದ ವಸ್ತುಗಳು ಪತ್ತೆ
ಶಿವಸಾನ್ನಿಧ್ಯದ ಶಂಕೆ; ಗ್ರಾಮಸ್ಥರಲ್ಲಿ ಕೌತುಕ

ರ್ಕಳ, ಮೇ 9: ಮುಂಡ್ಕೂರು ರಾಜಮುಗುಳಿ ಕಾಡಿನಲ್ಲಿ ಅತೀ ಪುರಾತನವೆನ್ನಲಾದ ಶಿವಲಿಂಗ ರೂಪದ ಶಿಲೆ ಹಾಗೂ ಎರಡು ಚಪ್ಪಡಿ ರೂಪದ ಸೂರ್ಯ ಚಂದ್ರರ ಚಿತ್ರವುಳ್ಳ ಕಲ್ಲುಗಳು ಬೆಳಕಿಗೆ ಬಂದಿದ್ದು ಹಿಂದಿನ ಜೈನ ಕಾಲದ ಕ್ಷೇತ್ರವೆಂಬ ಬಗ್ಗೆ ಚರ್ಚೆ ನಡೆದಿದೆ.
ಮುಂಡ್ಕೂರು ಗ್ರಾಮದ ರಾಜಮುಗುಳಿ ಎಂಬಲ್ಲಿ ಈ ಹಿಂದಿನಿಂದಲೂ ಇದ್ದ ಈ ಕಲ್ಲುಗಳ ಬಗ್ಗೆ ಈ ಭಾಗದ ಸುಮಾರು ನೂರಕ್ಕೂ ಹೆಚ್ಚು ಮನೆಯ ಜನರು ಯಭೀತರಾಗಿದ್ದರು. ವಿವಿಧೆಡೆ ಜ್ಯೋತಿಷ್ಯರಲ್ಲಿ ಪ್ರಶ್ನಿಸಲಾಗಿ ಈ ಜಾಗದಲ್ಲಿ ಹಿಂದೆ ಶಿವಾರಾಧನೆ ನಡೆಯುತ್ತಿತ್ತು,ಕೂಡಲೇ ಪಾಳುಬಿದ್ದ ಈ ಕ್ಷೇತ್ರವನ್ನು ಜೀರ್ಣೋದ್ದಾರಗೊಳಿಸಬೇಕು,ಇಲ್ಲದ್ದಿದ್ದಲ್ಲಿ ತೊಂದರೆಯಾಗಲಿದೆಯೆಂದು ತಿಳಿದು ಬಂದಿತ್ತು.
ಶನಿವಾರ ಈ ಪರಿಸರದ ಜನ ಮುಂಡ್ಕೂರು ನಡಿಗುತ್ತು ರಾಜಗೋಪಾಲ ಶೆಟ್ಟಿ ನೇತೃತ್ವದಲ್ಲಿ ಸೇರಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯರ ಮೂಲಕ ಪ್ರಾರ್ಥಿಸಿ ಸ್ಥಳದಲ್ಲಿಯೇ ಪ್ರಶ್ನೆ ಇಟ್ಟು ಸಂಶಯ ನಿವಾರಿಸಲು ನಿರ್ಧರಿಸಿದರು. ಈ ಬಗ್ಗೆ ಮೇ 15 ರಂದು ರಾಜಗೋಪಾಲ ಶೆಟ್ಟಿ ಮನೆಯಲ್ಲಿ ಬೆಳಗ್ಗೆ 9ಕ್ಕೆ ಸಭೆ ಸೇರಿ ಗಣ್ಯರ ಜತೆ ಚರ್ಚಿಸಿ ಕ್ಷೇತ್ರ ಜೀರ್ಣೋದ್ಧಾರದ ಬಗ್ಗೆ ಸಮಿತಿ ರಚಿಸುವುದಾಗಿ ತಿಳಿಸಲಾಯಿತು.
ದೇವಳ ಹಾಗೂ ಶಾಲೆಯ ಹೆಸರಲ್ಲಿ ಪಹಣಿ ಪತ್ರ:
ಈ ಪಾಳು ಬಿದ್ದ ಕ್ಷೇತ್ರದ ಪಹಣಿ ಪತ್ರ ಸರ್ವೆ ನಂ.4.64 ರಲ್ಲಿ ಮಂಗೇಶ ಮಹಾರುದ್ರ ದೇವರು ಹಾಗೂ ಮುಂಡ್ಕೂರು ಎಜುಕೇಶನ್ ಎಂಡ್ ವೆಲ್ಫೇರ್ ಸೊಸೈಟಿಯ ಹೆಸರಲ್ಲಿದ್ದು 1.10 ಎಕರೆ ಜಮೀನು ಇದೆ. ಮಹಾರುದ್ರ ದೇವರ ಹೆಸರಲ್ಲಿ ಪಹಣಿ ಪತ್ರ ಇರುವುದರಿಂದ ಈ ಜಾಗದಲ್ಲಿ ಶಿವಾಲಯವಿತ್ತೆಂದು ನಂಬಲಾಗಿದೆ. ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಹೆಸರೂ ಪಹಣಿ ಪತ್ರದಲ್ಲಿರುವುದರಿಂದ ಈ ಬಗ್ಗೆ ಇನ್ನಷ್ಟು ಚರ್ಚೆ ನಡೆದಿದೆ. ರಾಜಮುಗುಳಿಯ ಎತ್ತರದ ಪ್ರದೇಶದಲ್ಲಿ ಈ ದೇವಳದ ಕುರುಹುಗಳಿದ್ದು ಪ್ರಶ್ನೆಯಲ್ಲಿ ತಿಳಿಸಿದಂತೆ ಈ ಜಾಗದ ದೃಷ್ಟಿ ಮುಂಡ್ಕೂರು ಹೊರತಾಗಿ ಬೋಳ,ಬಳ್ಕುಂಜೆ ಮತ್ತಿನ್ನಿತರ ಪ್ರದೇಶಗಳಿಗೂ ಇವೆಯೆಂದು ಜನರಾಡುತ್ತಿದ್ದರು. ಇಲ್ಲಿ ಬಾಳಿಕೆ ಮನೆಯ ಕರಿಯ ಶೆಟ್ಟಿಯವರ ತಂದೆ ಸಂಕ್ರಮಣ ಪೂಜೆ ನಡೆಸುತ್ತಿದ್ದರು. ಹಾಗೂ ವಿಠಲ ಎಂಬವರು ನಿರಂತರ ಭಜನೆ ಮಾಡುತ್ತಿದ್ದರೆಂಬ ಅಂತೆ ಕಂತೆಗಳ ಸುದ್ದಿಯೂ ಹರಡಿತ್ತು.
ಇಲ್ಲಿ ಕೋಳಿ ಬಲಿಯೂ ನಡೆಯುತ್ತಿದೆ....!:
ಇಲ್ಲಿನ ಜನರಿಗೆ ವಿವಿಧ ತಾಪತ್ರಯಗಳು ಕಂಡು ಬಂದು ಪ್ರಾಣ ಹಾನಿ,ಜಾನುವಾರು ಮೃತ್ಯುಗಳು ನಡೆದಾಗ ಪರಿಹಾರಕ್ಕಾಗಿ ಈ ಸಾನಿಧ್ಯಕ್ಕೆ ದೂರದಲ್ಲಿ ಕೋಳಿ ಬಲಿ ನಡೆಸಿ ತೃಪ್ತರಾಗುತ್ತಿದ್ದರು. ಇದೀಗ ಈ ಭಾಗದ ಪ್ರತಿಯೊಂದು ಮನೆಗಳಲ್ಲಿಯೂ ಪ್ರಶ್ನೆಗಳು ನಡೆದಾಗ ಈ ಕ್ಷೇತ್ರದ ಬಗ್ಗೆಯೇ ಕಂಡು ಬಂದು ದೋಷವಿದೆಯೆನ್ನಲಾಗುತ್ತಿತ್ತು. ಇದೀಗ ನೂರಾರು ಮನೆಗಳ ಜನ ಭಯಭೀತರಾಗಿ ಒಂದಾಗಿ ಸೇರಿ ಪರಿಹಾರದ ಜತೆ ಕಂಡು ಬಂದ ಕಲ್ಲುಗಳ ಬಗ್ಗೆ, ಶಿವಾಲಯದ ಅಸ್ತಿತ್ವದ ಬಗ್ಗೆ ವಿಮರ್ಶೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮೂಲಕ ಸುಮಾರು 600-700 ವರ್ಷಗಳ ಹಳೆಯದಾದ ಕ್ಷೇತ್ರವೊಂದು ಬೆಳಕಿಗೆ ಬರುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.







