ಎಸ್‌ಟಿಸಿ ಪ್ರಕರಣ ಸುಖಾಂತ್ಯ: 13 ವರ್ಷಗಳ ಬಳಿಕ ಮನೆಗೆ ಮರಳಿದ ಇಬ್ಬರು ಮಂಗಳೂರಿಗರು
ಐಎಫ್‌ಎಫ್ ಮತ್ತು ದಾನಿಗಳ ನಿರಂತರ ಶ್ರಮದ ಫಲಶ್ರುತಿ

ಮಂಗಳೂರು, ಮೇ 9: ಸುಧೀರ್ಘ 13 ವರ್ಷಗಳಿಂದ ಸೌದಿ ಅರೇಬಿಯಾದ ಜಿದ್ದಾ ಜೈಲಿನಲ್ಲಿದ್ದ ಮಂಗಳೂರು ಮೂಲದ ಅನಿವಾಸಿ ಭಾರತೀಯರಿಬ್ಬರು ಬಿಡುಗೊಂಡು ರವಿವಾರ ತಾಯ್ನಾಡಿಗೆ ಮರಳಿದ್ದಾರೆ.
ಉಳ್ಳಾಲದ ಫೈರೋಝ್ ಮತ್ತು ಬಜ್ಪೆಯ ರಿಯಾಝ್ ಎಂಬವರು ತಾಯ್ನೆಡಿಗೆ ಮರಳಿ ತಮ್ಮ ಕುಟುಂಬದವರನ್ನು ಸೇರಿಕೊಂಡಿದ್ದಾರೆ. ಇಂಡಿಯಾ ಫ್ರೆಟರ್ನಿಟಿ ಫೋರಂ (ಐಎಫ್‌ಎಫ್) ಹಾಗೂ ದಾನಿಗಳ ಸಹಕಾರದಿಂದ ಇವರು ಬಿಡುಗಡೆಗೊಂಡಿದ್ದಾರೆ.
ಘಟನೆಯ ಹಿನ್ನೆಲೆ
2003ರಲ್ಲಿ ನಡೆದಿದ್ದ ಎನ್ನಲಾದ ಹುಂಡಿ ಕರೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸೌದಿ ಅರೇಬಿಯಾದ ಟೆಲಿಕಾಂ ಕಂಪೆನಿಯು ಒಟ್ಟು 8 ಮಂದಿ ಮಂಗಳೂರಿಗರನ್ನು ಬಂಧಿಸಿತ್ತು. ಅಲ್ಲದೆ, ಭಾರೀ ಪ್ರಮಾಣದ ದಂಡವನ್ನು ವಿಧಿಸಿತ್ತು. ಬಂಧಿತರ ಪೈಕಿ ಅಯ್ಯೂಬ್ ಕಣ್ಣೂರು ಎಂಬಾತನನ್ನು ಈ ಮೊದಲೇ ಬಿಡುಗಡೆಗೊಳಿಸಲಾಗಿತ್ತು. ಇತರ ಮೂವರನ್ನು ಅವರ ಕುಟುಂಬದವರೇ ಮಧ್ಯಪ್ರವೇಶಿಸಿ ದಂಡ ಪಾವತಿಸಿ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಐಎಫ್‌ಎಫ್‌ನ ಸಹಕಾರದಿಂದ ಇಬ್ಬರು ಬಿಡುಗಡೆಗೊಳ್ಳುವ ಮೂಲಕ ಪ್ರಕರಣದಲ್ಲಿ ಒಟ್ಟು 6 ಮಂದಿ ಬಿಡುಗಡೆಗೊಂಡಂತಾಗಿದೆ. ಉಳಿದಿಬ್ಬರಾದ ಬಂದರ್‌ನ ಅಬ್ದುಲ್ ನಾಸಿರ್ ಶರೀಫ್ ಕಣ್ಣೂರು ಎಂಬವರು ಶೀಘ್ರದಲ್ಲೇ ಬಿಡುಗಡೆಗೊಳ್ಳುವ ನಿರೀಕ್ಷೆಯನ್ನು ಐಎಫ್‌ಎಫ್ ವ್ಯಕ್ತಪಡಿಸಿದೆ.
ನಾಸಿರ್ ವಾರದೊಳಗೆ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದ್ದು, ಶರೀಫ್ ಬಿಡುಗಡೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಂಡಿಯಾ ಫ್ರೆಟರ್ನಿಟಿ ಪೋರಂ ತಿಳಿಸಿದೆ.
ಕಳೆದ 6 ವರ್ಷಗಳಿಂದ ಪ್ರಕರಣದ ಇತ್ಯರ್ಥಕ್ಕಾಗಿ ನಿರಂತರ ಶ್ರಮಿಸಿದ ಐಎಫ್‌ಎಫ್‌ನ ಕಾರ್ಯಕರ್ತರು, ದಾನಿಗಳು ಮತ್ತು ಹಿತೈಷಿಗಳನ್ನು ಐಎಫ್‌ಎಫ್ ಕೃತಜ್ಞತೆ ಸಲ್ಲಿಸಿದೆ.





