ಜಾತಿ ವ್ಯವಸ್ಥೆನಿರ್ಮೂಲನೆಗೆ ವೈಚಾರಿಕತೆ ಅಗತ್ಯ: ಕಾಗೋಡು ತಿಮ್ಮಪ್ಪ

ಸಾಗರ, ಮೇ 9: ಪ್ರಸ್ತುತ ಜಾತಿ ವ್ಯವಸ್ಥೆಯು ಮೇಲುಗೈ ಸಾಧಿಸುತ್ತಿದೆ. ಇದರಿಂದ ಜಾತಿ ವ್ಯವಸ್ಥೆ ನಿರ್ಮೂಲನೆಗೆ ವೈಚಾರಿಕತೆ ಅಗತ್ಯ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ಬಸವಣ್ಣ ಅವರ ಕಾಲದಲ್ಲಿ ಬಹುದೊಡ್ಡ ವೈಚಾರಿಕ ಕ್ರಾಂತಿಯಾಗಿದೆ. ಸಮಾನ ಸಮಾಜ ನಿರ್ಮಾಣದ ದೊಡ್ಡ ಕನಸನ್ನು ಬಸವಣ್ಣ ಅವರು ಕಂಡಿದ್ದರು. ಪ್ರಸ್ತುತ ಜಾತಿಯ ಸಂಕೋಲೆಯಲ್ಲಿ ಎಲ್ಲರೂ ಬಂಧಿಯಾಗಿದ್ದಾರೆ. ತಾನೂ ಜಾತಿ ವ್ಯವಸ್ಥೆಯ ಶೋಷಣೆಯನ್ನು ಅನುಭವಿಸಿದವನು. ಜಾತಿ ವ್ಯವಸ್ಥೆ ಎಂತಹ ಸಂಕೀರ್ಣ ಪರಿಸ್ಥಿತಿ ತಂದೊಡ್ಡುತ್ತದೆ ಎನ್ನುವುದು ತನಗೆ ಗೊತ್ತು. ಜಾತಿ ವ್ಯವಸ್ಥೆ ನಿರ್ಮೂಲನೆಯಾಗದೆ ಹೋದಲ್ಲಿ ಸಮಾಜದ ಪ್ರಗತಿ ಸಾಧ್ಯವಿಲ್ಲ ಎಂದರು. ಬಸವಣ್ಣ ಹಾಗೂ ಬುದ್ಧ ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದಾರೆ. ಬಸವಣ್ಣ ರಚಿಸಿದ ವಚನಗಳು ದಿಕ್ಕು ತಪ್ಪಿದ ಸಮಾಜಕ್ಕೆ ಮಾರ್ಗದರ್ಶನವಾಗಿದೆ. ಬಸವಣ್ಣನವರ ‘ಇವನಾರವ ಇವನಾರವ ಎನ್ನದಿರಿ-ಇವ ನಮ್ಮವ ಇವ ನಮ್ಮವ ಎಂದೆನ್ನಿ’ ಎಂಬ ವಚನದ ಸಾಲು ತನ್ನ ಕಿವಿಯಲ್ಲಿ ಈಗಲೂ ಮಾರ್ದನಿಸುತ್ತದೆ ಎಂದರು.
ದಾರ್ಶನಿಕರ ಜಯಂತಿ ಹೆಸರಿನಲ್ಲಿ ಫೊಟೋ ಇರಿಸಿ ಪೂಜೆ ಮಾಡಿದರೆ ಆದರ್ಶ ವಿನಿಮಯವಾಗುವುದಿಲ್ಲ. ಅವರ ಆಶಯವನ್ನು ಅರ್ಥ ಮಾಡಿಕೊಂಡು, ಅಳವಡಿಸಿಕೊಳ್ಳಬೇಕು. ಜಯಂತಿಗಳು ಕಾಟಾಚಾರಕ್ಕೆ ಆಚರಿಸುವಂತೆ ಆಗಬಾರದು ಎಂದು ತಿಳಿಸಿದರು.
ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಕೆ.ಎಂ.ಓಂಕಾರಪ್ಪ ಮಾತನಾಡಿ, ಜಯಂತಿ ಆಚರಣೆಗಳು ಆತ್ಮಾವಲೋಕನದ ಹಾಗೂ ಆದರ್ಶಗಳ ಪಾಲನೆಯ ಸಂಕಲ್ಪಕ್ಕೆ ಕಾರಣವಾಗಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆ ಬಸವಣ್ಣ ಅವರ ಕೊಡುಗೆ ಗಮನಾರ್ಹ ಎಂದರು. ನಗರಸಭಾಧ್ಯಕ್ಷ ಆರ್.ಗಣಾಧೀಶ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪವಿಭಾಗಾಕಾರಿ ಡಿ.ಎಂ.ಸತೀಶಕುಮಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಯು.ಸಿ.ಸಿದ್ದಲಿಂಗೇಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶ್ರೀನಾಥ್ ಉಪಸ್ಥಿತರಿದ್ದರು. ಸಹನಾ ಪ್ರಾರ್ಥಿಸಿ, ತಹಶೀಲ್ದಾರ್ ಎನ್. ಟಿ.ಧರ್ಮೋಜಿರಾವ್ ಸ್ವಾಗತಿಸಿ, ಬಸವರಾಜ ವಂದಿಸಿ, ವಿ.ಟಿ.ಸ್ವಾಮಿ ನಿರೂಪಿಸಿದರು.







