‘ದೇಶದ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ತಿಳಿಯುವಂತಾಗಲಿ: ಜಯಚಂದ್ರಶೇಖರ್ ಸ್ವಾಮಿ

ಕಡೂರು, ಮೇ 9: ಭಾರತ ದೇಶದ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ತಿಳಿಯಬೇಕಿದೆ. ನಮ್ಮ ಪೂರ್ವಿಕರು ಸಂಸ್ಕಾರವಂತರಾಗಿ ಧಾರ್ಮಿಕತೆಯಿಂದ ನಡೆದುಕೊಳ್ಳುತ್ತಿದ್ದರು ಎಂದು ಅರಸೀಕೆರೆ ತಾಲೂಕಿನ ಕೋಳಗುಂದ ಮಠದ ಶ್ರೀ ಜಯಚಂದ್ರಶೇಖರ್ ಸ್ವಾಮಿ ತಿಳಿಸಿದ್ದಾರೆ.
ಅವರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿಯವರ ದೇವಾಲಯದ ಜೀರ್ಣೋದ್ಧಾರ ಹಾಗೂ ಮೂಲ ವಿಗ್ರಹ ಮತ್ತು ಚರಮೂರ್ತಿ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಾ, ಜಗತ್ತಿನ ಇತಿಹಾಸದಲ್ಲಿ ಗುರುಸ್ಥಾನವನ್ನು ನೀಡುವುದು ಭಾರತದ ಇತಿಹಾಸದಲ್ಲಿ ಮಾತ್ರ ಇದೆ. ಈ ನಾಡಿನಲ್ಲಿ ಅನೇಕ ಸಂತರು, ಮಹಾಪುರುಷರು ಹುಟ್ಟಿ ಹೋಗಿದ್ದಾರೆ. ಧಾರ್ಮಿಕವಾಗಿ ಇತಿಹಾಸ ಇರುವ ಪುಣ್ಯಭೂಮಿ ಇದಾಗಿದೆ ಎಂದು ತಿಳಿಸಿದರು.
ಈಗಿನ ಪೀಳಿಗೆ ಎತ್ತ ಸಾಗುತ್ತಿದೆ ಎಂದು ತಿಳಿಯಬೇಕಿದೆ. ಈ ಪೀಳಿಗೆ ದಾರಿ ತಪ್ಪಲು ಹಿರಿಯರು ಹಾಗೂ ಮಠಾಧೀಶ್ವರರು ಕಾರಣ. ಇವರುಗಳಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಈ ಪ್ರವೃತ್ತಿ ಬೆಳೆದು ಬಂದಿದೆ. ಮಕ್ಕಳ ಎದುರೇ ಕೆಟ್ಟ ಚಟಗಳನ್ನು ಮಾಡುತ್ತಿದ್ದು, ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಹಿರಿಯರು ಕೆಟ್ಟ ಚಟ ಬಿಡುವುದರ ಮೂಲಕ ಯುವಕರನ್ನು ಸರಿ ದಾರಿಗೆ ತರಬೇಕಿದೆ. ಇತ್ತೀಚಿನ ದಿನಗಳಲ್ಲಿ ದೇವಾಲಯಗಳ ವೈಭವೀಕರಣವಾಗುತ್ತಿದೆ ಎಂದು ನುಡಿದರು.
ದೇವಾಲಯಗಳು ಹವ್ಯಾಸಗಳ ತಾಣವಾಗುತ್ತಿವೆ. ದೇವಾಲಯಗಳ ನಿರ್ಮಾಣ ಮಾತ್ರ ಸಾಲದು. ಇದರಿಂದ ಧಾರ್ಮಿಕವಾಗಿ ನಂಬಿಕೆ-ಭಯ ಇರಬೇಕಿದೆ. ದೇವಾಲಯಗಳಿಂದ ಒಳ್ಳೆಯ ಫಲಗಳು ದೊರೆಯಬೇಕಿದೆ. ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಜೀವನ ಸಾರ್ಥಕತೆ ಪಡೆದುಕೊಳ್ಳಲು ಧಾರ್ಮಿಕತೆ-ಸಂಸ್ಕೃತಿ ಬೇಕಿದೆ. ತಾಯಂದಿರು ಸಂಸ್ಕೃತಿ ಮತ್ತು ಧಾರ್ಮಿಕತೆಯನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು. ಮಾರಗೊಂಡನಹಳ್ಳಿ ವಿರಕ್ತ ಮಠದ ಶ್ರೀ ಡಾ. ಬಸವಲಿಂಗ ಸ್ವಾಮಿ ಮಾತನಾಡಿ, ಬಸವಣ್ಣನವರನ್ನು ಗೋವಿನೊಂದಿಗೆ ಹೋಲಿಕೆ ಸರಿಯಲ್ಲ. ಅವರು ಇಡೀ ಜಗತ್ತಿನಲ್ಲಿ ಮೇಲು-ಕೀಳು ಎಂಬ ಭಾವನೆ ಹೋಗಲಾಡಿಸಲು ಪ್ರಯತ್ನಿಸಿದ ಮಹಾನುಭವರು. ಬಸವಣ್ಣನವರು ಲಿಂಗಬೇಧ ತೋರದೆ ಎಲ್ಲರಿಗೂ ಸಮಾನತೆ ನೀಡಿದವರು ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್, ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಟಿ.ಡಿ. ಸತ್ಯನ್, ಜಿಪಂ ಸದಸ್ಯ ವಿಜಯ್ ಕುಮಾರ್, ತಾಪಂ ಸದಸ್ಯ ಶಶಿಕುಮಾರ್, ವಿ. ರುದ್ರೇಗೌಡರು, ಶಿವಶಂಕರ್, ಕೆ.ವಿ.ಹರ್ಷ ಉಪಸ್ಥಿತರಿದ್ದರು.







