12ನೆ ಶತಮಾನ ಕ್ರಾಂತಿಕಾರಿ ಕಾಲ: ಸಾಹಿತಿ ವಿಷ್ಣು ನಾಯ್ಕ

ಅಂಕೋಲಾ, ಮೇ 9: 12ನೆ ಶತಮಾನ ಬಸವಣ್ಣವರ ಸಾಮಾಜಿಕ ಕ್ರಾಂತಿಯ ಕಾಲ ಎಂದು ಕರೆಯಲ್ಪಟ್ಟಿತ್ತು. ಅವರು ತಮ್ಮ ವಿಚಾರಪೂರಿತ ಕಾಯಕ ತತ್ವವನ್ನು ವಿಶೇಷವಾದ ರೀತಿಯಲ್ಲಿ ಪ್ರತಿಪಾದಿಸಿದವರಲ್ಲದೆ, ಶಿವ ಶರಣ ಶರಣೆಯರೊಡಗೂಡಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದರು ಎಂದು ಸಾಹಿತಿ ವಿಷ್ಣು ನಾಯ್ಕ ಹೇಳಿದ್ದಾರೆ.ಅವರು ಸೋಮವಾರ ಅಂಕೋಲಾ ತಾಲೂಕು ಆಡಳಿತದ ಆಶ್ರಯದಲ್ಲಿ ತಹಶೀಲ್ದಾರ್‌ರವರ ಕಚೇರಿಯಲ್ಲಿ ನಡೆದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇವರು ಜಗತ್ವಾಪಿ. ಆತ ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂದು 850 ವರ್ಷಗಳ ಹಿಂದೆ ಸಾರಿದವರು ಬಸವಣ್ಣನವರು ಎಂದರು. ಬಳಿಕ ಬಸವಣ್ಣರವರ ಕುರಿತು ಕವನ ವಾಚಿಸಿದರು. ತಹಶೀಲ್ದಾರ್ ವಿ.ಜಿ. ಲಾಂಜೇಕರ ಅವರು ಮಾತನಾಡಿ, ಬಸವಣ್ಣರವರ ತತ್ವಗಳನ್ನು ಎಲ್ಲರೂ ಪಾಲಿಸೋಣ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪುರಸಭೆ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ ಅವರು ಮಾತನಾಡಿ 12ನೆ ಶತಮಾನದಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಕ್ಷೇತ್ರಗಳಲ್ಲ್ಲಿ ಕ್ರಾಂತಿ ಮಾಡಿದ ಯುಗಪುರುಷ, ಜಗಜ್ಯೋತಿ, ಭಕ್ತಿಭಂಡಾರಿ ಬಸವಣ್ಣನ ನವರು ಇಂದಿಗೂ ಪ್ರಾತಃಸ್ಮರಣೀರಾಗಿದ್ದಾರೆ. ಆದರೆ ಮುಂದಿನ ವರ್ಷದಿಂದ ಎಲ್ಲಾ ಇಲಾಖೆಗಳ ಸಿಬ್ಬಂದಿ ಬಸವಣ್ಣನವರ ಜಯಂತಿ ಕಾರ್ಯ ಕ್ರಮದಲ್ಲಿಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಅವರ ತತ್ವ ಸಿದ್ದಾಂತಗಳನ್ನು ಎಲ್ಲೆಡೆ ಹರಡಬೇಕಿದೆ ಎಂದರು.
ಶತ-ಶತಮಾನಗಳಿಂದ ಸಮಾಜಕ್ಕೆ ಅಂಟಿಕೊಂಡು ಬಂದಿದ್ದ ಅಸ್ಪಶ್ಯತೆಯ ವಿರುದ್ಧ ಪ್ರಥಮವಾಗಿ ಬಂಡಾಯ ಹೂಡಿದವರು ಬಸವಣ್ಣನವರು. 12ನೆ ಶತಮಾನದಲ್ಲಿ ಕಾಯಕವೇ ಕೈಲಾಸ ಎಂದು ಸಾರಿದ ಮಹಾನ್ ಚೇತನ ಬಸವಣ್ಣನವರ ಚವನಗಳು ಇಂದಿಗೂ ಸ್ಮರೀಣಯವಾಗಿದೆ ಎಂದು ಕನ್ನಡ ಚಂದ್ರಮ ಉತ್ತರ ಕನ್ನಡದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಹೇಳಿದರು.
ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಎನ್.ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಲ್.ಎಲ್. ರಾಠೋಡ್, ಶಿರಸ್ತೆದಾರ್ ಎನ್.ಬಿ.ಗುನಗಾ, ಕಂದಾಯ ನಿರೀಕ್ಷಕರಾದ ಸುರೇಶ ಹರಿಕಂತ್ರ, ಅಮರ ನಾಯ್ಕ, ಆಹಾರ ನಿರೀಕ್ಷ ಗೀರಿಶ ಬಾನವಾಳಿಕರ, ಉಪ-ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಅರಣ್ಯ ರಕ್ಷಕ ಮೋಹನ ನಾಯ್ಕ, ಪುರಸಭೆ ಸಂಘಟನಾಧಿಕಾರಿ ಡಿ.ಎಲ್.ರಾಠೋಡ್ ಮತ್ತಿತರರು ಉಪಸ್ಥಿತರಿದ್ದರು.







