ಕಳವು ಆರೋಪಿಯ ಬಂಧನ: ಕಳವುಗೈದ ಸೊತ್ತುಗಳು ವಶಕ್ಕೆ

ಮಂಗಳೂರು, ಮೇ 9: ಕಳವು ಆರೋಪಿಯೋರ್ವನನ್ನು ಬಂಧಿಸಿರುವ ಉರ್ವ ಠಾಣಾ ಪೊಲೀಸರು ಆತನಿಂದ ಸುಮಾರು ಒಂದು ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕೊಂಚಾಡಿಯ ಮುದ್ದಾರ ಹೌಸ್ ರಸ್ತೆ ನಿವಾಸಿ ರಾಘವೇಂದ್ರ ಭಟ್ ಯಾನೆ ರಘು (28) ಎಂದು ಗುರುತಿಸಲಾಗಿದೆ.
ಉರ್ವ ಠಾಣಾ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಕೊಂಚಾಡಿ ಕಡೆಯಿಂದ ನಂಬರ್ ಇಲ್ಲದ ಬಜಾಜ್ ಪಲ್ಸರ್‌ನಲ್ಲಿ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಿದ್ದಾರೆ. ಈ ಸಂದರ್ಭಆತ ತನ್ನ ಹೆಸರು ರಾಘವೇಂದ್ರ ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ವಾಹನದ ದಾಖಲೆಗಳನ್ನು ಕೇಳಿದಾಗ ಆತ ತಡವರಿಸಿದ್ದು, ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ 15-20 ದಿನಗಳ ಹಿಂದೆ ನ್ಯಾಯಾಲಯದ ಪಾರ್ಕಿಂಗ್ ಸ್ಥಳದಿಂದ ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಬೈಕ್ ನ್ಯಾಯವಾದಿ ರವಿರಾಜ್ ಎಂಬವರಿಗೆ ಸೇರಿದ್ದು, ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯು ನಾಲ್ಕು ತಿಂಗಳ ಹಿಂದೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ ರಾಕ್ಸ್ ರಿಯಲ್ ಎಸ್ಟೇಟ್ ಕಚೇರಿಯಿಂದ ಸುಮಾರು 60,000 ರೂ. ವೌಲ್ಯದ ಇನ್ವರ್ಟರ್, ಬ್ಯಾಟರಿ ಮತ್ತು ಕಂಪ್ಯೂಟರ್‌ಗಳನ್ನು ಕೂಡ ಕಳವು ಮಾಡಿದ್ದಾನೆ.
ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯಿಂದ ವಶಪಡಿಸಿಕೊಂಡ ಒಟ್ಟು ಸೊತ್ತುಗಳ ವೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.







