ಬೀಡಿ ಉದ್ಯಮಕ್ಕೆ ಕೊಡಲಿ ಏಟು ನೀಡಿದ ಕೋಟ್ಪಾ ಕಾಯ್ದೆ

ಕಳೆದ ಐದಾರು ದಶಕಗಳಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ಅವಕಾಶ ಒದಗಿಸಿದ್ದ ಬೀಡಿ ಉದ್ದಿಮೆಯು ಇದೀಗ ಸಂಕಷ್ಟದ ಹಾದಿ ಹಿಡಿದಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವು ಜಾರಿಗೆ ತಂದಿರುವ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2015 ಇದಕ್ಕೆ ಪ್ರಮುಖ ಕಾರಣವಾಗಿದೆ. 2016 ಎಪ್ರಿಲ್ ಒಂದರಿಂದ ಈ ಕಾಯ್ದೆಯನ್ನು ರಾಷ್ಟ್ರವ್ಯಾಪಿಯಾಗಿ ಕಡ್ಡಾಯ ಜಾರಿಗೆ ತರಲು ಕೇಂದ್ರ ಸರಕಾರವು ಕ್ರಮ ಕೈಗೊಂಡಿದೆ.
ಉತ್ತರ ಭಾರತದಲ್ಲಿ ಭಾರೀ ಬೇಡಿಕೆಯಿರುವ ತಂಬಾಕು ಉತ್ಪನ್ನಗಳಲ್ಲೊಂದಾದ ಬೀಡಿಯ ಉತ್ಪಾದನೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಕೇರಳಗಳ ಪಾಲು ಬಲು ದೊಡ್ಡದಿದೆ. ಈ ಉದ್ದಿಮೆಯು ಉತ್ಪಾದನೆ, ಎಲೆ, ತಂಬಾಕು ಬೆಳೆಯುವ ರೈತರು ಬೀಡಿ ಮಾರಾಟಗಾರರು, ನೌಕರರು, ಮಧ್ಯವರ್ತಿಗಳು ಸೇರಿದಂತೆ ಮೂರು ಕೋಟಿಗೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿದೆ. ಈ ಕಾರಣದಿಂದಾಗಿ ದೇಶದ ಆರ್ಥಿಕ ಕ್ಷೇತ್ರಕ್ಕೆ ಬೀಡಿ ಉದ್ದಿಮೆಯು ನೀಡಿದ ಕೊಡುಗೆ ಕಡಿಮೆಯೇನಲ್ಲ.
ಲಕ್ಷಾಂತರ ಬಡ ಕುಟುಂಬಗಳು ಬೀಡಿ ಸುತ್ತುವ ಕಾಯಕದಲ್ಲಿ ತೊಡಗಿಸಿಕೊಂಡಿವೆ. ಅವರಿಗೆಲ್ಲ ಈ ಉದ್ದಿಮೆಯು ತಕ್ಕಮಟ್ಟಿಗಾದರೂ ಜೀವನ ಸಾಗಿಸಲು ದಾರಿಮಾಡಿಕೊಟ್ಟಂತಾಗಿದೆ.
ಇದೊಂದು ಅಸಂಘಟಿತ ವಲಯದ ಉದ್ದಿಮೆಯಾಗಿರುವುದರಿಂದ ಮತ್ತು ಈ ಉದ್ದಿಮೆಯಲ್ಲಿ ದುಡಿಯುತ್ತಿರುವ ಬಹು ಪಾಲು ಕಾರ್ಮಿಕರು ಕಾರ್ಮಿಕ ಸಂಘಟನೆಗಳಿಂದ ದೂರ ಉಳಿದಿರುವ ಕಾರಣಕ್ಕೆ ಇದೊಂದು ಶೋಷಣೆಗೆ ಎಡೆಮಾಡಿಕೊಟ್ಟಿರುವ ಕೈಗಾರಿಕೆಯಾಗಿದೆಯೆಂದರೆ ತಪ್ಪಾಗದು. ಹಾಗಿದ್ದರೂ ಉದ್ಯೋಗವೇ ಇಲ್ಲದ ನಾಡಿನಲ್ಲಿ ಈ ಉದ್ದಿಮೆಯು ಬಡವರ ಜೀವನಕ್ಕೆ ಉಸಿರು ನೀಡಿದಂತಾಗಿದೆ.
ಈ ಕೈಗಾರಿಕೆಯಲ್ಲಿ ಕೇಂದ್ರೀಯ ಮಟ್ಟದ ಕಾನೂನು ರಚನೆ ಮಾಡುವಲ್ಲಿ ಸಿಪಿಐಎಂನ ಜನಪ್ರಿಯ ನೇತಾರರಾಗಿದ್ದ ದಿವಂಗತ ಎ.ಕೆ. ಗೋಪಾಲನ್‌ರವರ ಪಾತ್ರ ಮಹತ್ತರದ್ದಾಗಿದೆ. ಬೀಡಿ - ಸಿಗಾರ್ ಆ್ಯಕ್ಟ್ -1966 ಇದರ ನಿಬಂಧನೆಗಳು ಹೆಚ್ಚಾಗಿ ಕಾರ್ಮಿಕ ಪರವಾಗಿರುವಲ್ಲಿ ಸಂಗಾತಿ ಎ.ಕೆ. ಗೋಪಾಲನ್‌ರವರಲ್ಲಿ ಹುದುಗಿದ್ದ ಕಾರ್ಮಿಕ ಪರವಾದ ಹಿತಚಿಂತನೆಯು ಹೆಚ್ಚು ಕೆಲಸ ಮಾಡಿದೆ.
ಈ ಕಾರ್ಮಿಕರಿಗೆ ಕನಿಷ್ಠ ಕೂಲಿ, ಬೋನಸ್, ರಜಾ ಸಂಬಳ, ಹಬ್ಬದ ರಜಾ ಸಂಬಳ, ಹೆರಿಗೆ ಭತ್ತೆ, ಈ ಎಲ್ಲವನ್ನೂ ಒಳಗೊಂಡಿದ್ದ ಈ ಕಾಯ್ದೆಯು ಕಾರ್ಮಿಕರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಅದಕ್ಕಾಗಿ ಹೋರಾಡಲು ಬಲವನ್ನು ನೀಡಿದಂತಾಗಿದೆ. ನಂತರದ ದಿನಗಳಲ್ಲಿ ತುಟ್ಟಿಭತ್ತೆ, ಭವಿಷ್ಯನಿಧಿ, ಕ್ಷೇಮ ನಿಧಿ ಸೌಲಭ್ಯಗಳನ್ನು ಸರಕಾರದೆದುರು ಹೋರಾಟ ನಡೆಸಿ ಪಡೆಯುವಂತಾಯಿತು.
ಬೀಡಿ ಉತ್ಪಾದಿಸುವ ಯಾವುದೇ ರಾಜ್ಯಗಳಲ್ಲಿನ ಮಾಲಕರು ತಾವಾಗಿಯೇ ಈ ಕಾಯ್ದೆಯನ್ನು ಜಾರಿಗೊಳಿಸಿದ ಚರಿತ್ರೆಯಿಲ್ಲ.
ಕೇರಳದಲ್ಲಿ ದಿವಂಗತ ಇ.ಎಂ.ಎಸ್. ನೇತೃತ್ವದ ಎಡರಂಗ ಸರಕಾರವು ಬೀಡಿ ಕಾರ್ಮಿಕರಿಗೆ ಕಾನೂನು ಸವಲತ್ತುಗಳನ್ನು ಜಾರಿಗೊಳಿಸುವಂತೆ ಮಾಲಕರಲ್ಲಿ ತಾಕೀತು ಮಾಡಿದಾಗಲೇ ಅಲ್ಲಿಂದ ಕಾಲ್ಕಿತ್ತ ಹೆಸರಾಂತ ಬೀಡಿ ಕಂಪೆನಿಯೊಂದು ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದು ನೆಲೆವೂರಿತು.
ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ ನಾಲ್ಕು ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಇಲ್ಲಿಂದ ಹತ್ತಿರದ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡ್, ನೀಲೇಶ್ವರ ಮುಂತಾದೆಡೆಗಳಿಗೆ ಮಧ್ಯವರ್ತಿಗಳ ಮೂಲಕ ಕಚ್ಚಾ ವಸ್ತುಗಳನ್ನು ಸಾಗಿಸಿ ಬೀಡಿ ಉತ್ಪಾದಿಸುವ ಪ್ರಯತ್ನಕ್ಕೆ ಮಾಲಕರು ಕೈ ಹಾಕಿದರು. ಒಂದೊಮ್ಮೆ ಮಲಬಾರ್ ಪ್ರದೇಶದಿಂದ ಕಾಲ್ಕಿತ್ತ ಬೀಡಿ ಸಂಸ್ಥೆಯೂ ಸೇರಿದಂತೆ ಹಲವು ಬೀಡಿ ಕಂಪೆನಿಗಳು ಕೇರಳದ ಕಡೆಗೆ ಮುಖ ಮಾಡತೊಡಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಹಲವಾರು ಪ್ರಬಲವಾದ ಹೋರಾಟಗಳನ್ನು ನಡೆಸಿದ ಚರಿತ್ರೆಯಿದೆ. ಮೇಲೆ ತಿಳಿಸಲಾದ ಪ್ರತಿಯೊಂದು ಸವಲತ್ತುಗಳನ್ನು ಕೂಡಾ ಹೋರಾಟಗಳ ಮೂಲಕವೇ ಜಾರಿಗೆ ಬರುವಂತೆ ಮಾಡಿದ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಾರ್ಮಿಕರಿಗಿದೆ.
ಈ ಸವಲತ್ತುಗಳು ಬರೀ ದ.ಕ. ಜಿಲ್ಲೆಗೆ ಸೀಮಿತಗೊಳ್ಳದೆ ಕರ್ನಾಟಕ ರಾಜ್ಯಾದ್ಯಂತವಿರುವ ಬೀಡಿ ಕಾರ್ಮಿಕರಿಗೆ ಅನ್ವಯಗೊಂಡಿದೆ. ಇದರ ಲಾಭವು ಕರ್ನಾಟಕದಲ್ಲಿನ ಕಂಪೆನಿಗಳ ಬೀಡಿ ತಯಾರಿಸುವ ಕಾಸರಗೋಡು, ಕಣ್ಣೂರು ಜಿಲ್ಲೆಯ ಕಾರ್ಮಿಕರಿಗೂ ಸಿಗುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದವರು ಕೋಮು ರಾಜಕೀಯವನ್ನು ಬೆಳೆಸುವ ಮೂಲಕ ಕಾರ್ಮಿಕರ ಹೋರಾಟದ ಹರಿತವನ್ನೇ ಕಡಿಮೆಗೊಳ್ಳುವಂತೆ ಮಾಡಿದ್ದಾರೆ. ಇದರಿಂದಾಗಿ ಮಾಲಕವರ್ಗಕ್ಕೆ ಭಾರೀ ಲಾಭ ಮಾಡಿಕೊಟ್ಟಂತಾಗಿದೆ.
ಕಳೆದ ಐದು ವರ್ಷಗಳಲ್ಲಿ ಬೀಡಿ ಕಾರ್ಮಿಕರ ಕೂಲಿ ಪರಿಷ್ಕರಣೆಯಾ ಗಲಿಲ್ಲ. ಏಳೆಂಟು ವರ್ಷಗಳಿಂದೀಚೆಗೆ ಕಾನೂನಿನನ್ವಯ ಎಪ್ರಿಲ್ ಒಂದನೇ ತಾರೀಕಿನಿಂದ ಕೊಡಬೇಕಾಗುತ್ತಿದ್ದ ಏರಿದ ತುಟ್ಟಿಭತ್ತೆ ಹಣವನ್ನು ಸ್ಥಗಿತಗೊಳಿಸುವ ಪ್ರಯತ್ನವನ್ನು ಮಾಲಕ ವರ್ಗ ಮಾಡುತ್ತಲೇ ಬಂದಿದೆ.
2015ರಲ್ಲಂತೂ ಎಪ್ರಿಲ್ ತಿಂಗಳಲ್ಲಿ ಏರಿಕೆಯಾದ ರೂ.12.75 ತುಟ್ಟಿಭತ್ತೆ ಮಜೂರಿಯಲ್ಲಿ ಸೇರಿಸದೆ ಬಾಕಿಯಿರಿಸಿದ್ದಾರೆ. ವಿಪರ್ಯಾಸವೆಂದರೆ ತುಟ್ಟಿಭತ್ಯೆ ಕಾನೂನು ಪ್ರಸಕ್ತ ಜಾರಿಯಲ್ಲಿದ್ದರೂ ಕೂಡಾ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರವು ಒಂದು ವರ್ಷದ ಮಟ್ಟಿಗೆ ರಿಯಾಯಿತಿ ನೀಡಿ ರಾಜ್ಯದ ಮಾಲಕರಿಗೆ ಸುಮಾರು 225 ಕೋಟಿ ರೂಪಾಯಿ ಲಾಭ ಮಾಡಿಕೊಟ್ಟಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಸಾವಿರ ಬೀಡಿ ಸುತ್ತಿದರೆ ರೂ.250 ಮಜೂರಿ ಲಭ್ಯವಿದೆ.
ಕರ್ನಾಟಕದಲ್ಲಿ ಈ ವರ್ಷದ ಎಪ್ರಿಲ್ ತಿಂಗಳ ಒಂದನೇ ತಾರೀಕಿನಿಂದ ರೂ.9.96ರಷ್ಟು ತುಟ್ಟಿಭತ್ಯೆ ಏರಿಕೆಯಾಗಿದೆ. ಕಳೆದೊಂದು ವರ್ಷದ ಮಟ್ಟಿಗೆ ಇಲ್ಲಿನ ಕಾಂಗ್ರೆಸ್ ಸರಕಾರವು ರಿಯಾಯಿತಿ ನೀಡಿದ್ದ ರೂ.12.75 ತುಟ್ಟಿಭತ್ತೆಯನ್ನು ಈ ವರ್ಷಕ್ಕೆ ಸೇರಿಸಿ ಕೊಡುವುದಾದಲ್ಲಿ ಇದೀಗ ಒಂದು ಸಾವಿರ ಬೀಡಿ ಸುತ್ತಿದರೆ ರೂ.173.46 ಪೈಸೆಯಷ್ಟಾಗಲಿದೆ. (ಒಂದು ವರ್ಷದ ಮಟ್ಟಿಗೆ ತುಟ್ಟಿಭತ್ತೆ ಹಣವನ್ನು ತಡೆಹಿಡಿಯಲು ಆದೇಶಿಸಿದ ಸರಕಾರದ ನಿಲುವನ್ನು ಪ್ರಶ್ನಿಸಿ ಸಿಐಟಿಯು ಸಂಘಟನೆಯು ರಾಜ್ಯ ಉಚ್ಚ ನ್ಯಾಯಾಲಯಾದಲ್ಲಿ ದಾವೆಯೊಂದನ್ನು ದಾಖಲಿಸಿದೆ. ಆದರೂ ತಮಿಳ್ನಾಡು, ಆಂಧ್ರ ರಾಜ್ಯಗಳಲ್ಲಿನ ಬೀಡಿಯ ಮಜೂರಿಗೆ ಹೋಲಿಸಿದರೆ ಕರ್ನಾಟಕದ ಮಜೂರಿ ಇನ್ನೂ ಕಡಿಮೆಯಿದೆ. ಮಾಲಕರು ಅದರಲ್ಲೂ ಕಡಿಮೆ ಮಾಡಿ ರೂ.160.71ನ್ನು ಮಾತ್ರ ಕಳೆದ ತಿಂಗಳಿಂದ ಕೊಡುತ್ತಿದ್ದಾರೆ.
ಬೀಡಿ ಕಾರ್ಮಿಕರ ಹೋರಾಟದ ಶಕ್ತಿ ಕೇಂದ್ರವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದವರು ಮಹಿಳೆಯರನ್ನು ಧಾರ್ಮಿಕ ವಿಚಾರದಲ್ಲಿ ಬಳಸಿಕೊಂಡು ಅವರ ಹೋರಾಟದ ಹರಿತವನ್ನು ಕಡಿಮೆಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ಕೆಲಸ ನಡೆದಿದೆ.
ರಾಜ್ಯದ ಆರು ಲಕ್ಷ ಹಾಗೂ ನೆರೆಯ ಕೇರಳದ ಗಡಿಭಾಗದಲ್ಲಿನ ಅರುವತ್ತು ಸಾವಿರಕ್ಕೂ ಅಧಿಕ ಕಾರ್ಮಿಕರು ತಮ್ಮ ಸವಲತ್ತುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೇಂದ್ರದ ಎನ್.ಡಿ.ಎ. ಸರಕಾರವು ಕಳೆದ ವರ್ಷದಿಂದ ಒಂದೇ ವಿದ್ಯಾರ್ಥಿವೇತನ ಎಂಬ ನಿಯಮ ಜಾರಿ ಮಾಡಿರುವುದರ ಪರಿಣಾಮವಾಗಿ ಬೇರೆ ವಿದ್ಯಾರ್ಥಿವೇತನ ಪಡೆಯುತ್ತಿದ್ದ ಬೀಡಿ ಕಾರ್ಮಿಕರ ಮಕ್ಕಳಿಗೆ ಬೀಡಿಯ ಸ್ಕಾಲರ್‌ಶಿಪ್ ಪಡೆಯಲು ಸಾಧ್ಯವಿಲ್ಲದಂತಾಗಿದೆ.
ಕಾರ್ಮಿಕರ ಪಿ.ಎಫ್. ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ನೆಪದಲ್ಲಿ 58 ವರ್ಷಕ್ಕೆ ಮೊದಲು ಸೇವೆಯಿಂದ ನಿವೃತ್ತಿ ಹೊಂದುವವರಿಗೆ ಮಾಲಕರ ಪಾಲು ಕೊಡುವಂತಿಲ್ಲವೆಂದು 2016 ಫೆಬ್ರವರಿ 16ರಲ್ಲಿ ಹೊರಡಿಸಿದ ಆದೇಶವನ್ನು ಇತ್ತೀಚೆಗೆ ಕರ್ನಾಟಕ ರಾಜ್ಯದ ಗಾರ್ಮೆಂಟ್ ನೌಕರರು ನಡೆಸಿದ ತೀವ್ರ ತರದ ಹೋರಾಟದ ಹಿನ್ನೆಲೆಯಲ್ಲಿ ಹಿಂಪಡೆದ ಕೇಂದ್ರ ಸರಕಾರವು ಇದೀಗ ಪಿ.ಎಫ್.ನ ಬಡ್ಡಿದರವನ್ನು ಕಡಿತಗೊಳಿಸಿದೆ.
2000ನೇ ಇಸವಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಲ್ಲಿ ಧೂಮಪಾನ ನಿಷೇಧ ಜಾರಿಗೊಳಿಸಲು ಆದೇಶಿಸಿತ್ತು. 2002ರಲ್ಲಿ ಅಂದಿನ ಕೇಂದ್ರದ ಕಾಂಗ್ರೆಸ್ ಸರಕಾರವು ಈ ಆದೇಶದನ್ವಯ ಧೂಮಪಾನ ನಿಷೇಧ ಕಾಯ್ದೆಯನ್ನು ಮಂಡನೆಗೊಳಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ದೇಶದ ಬೀಡಿ ಕಾರ್ಮಿಕರ ಪ್ರಬಲ ಹೋರಾಟದ ಪರಿಣಾಮವಾಗಿ ಆ ಕಾಯಿದೆಯನ್ನು ಜಾರಿಗೊಳಿಸಲು ಹಿಂದೇಟು ಹಾಕಿತ್ತು.
ಆದರೆ ಮೋದಿ ಸರಕಾರವು ಇದೇ ಕಾಯ್ದೆಯನ್ನು ಬೇರೆ ರೂಪದಲ್ಲಿ ತಂದು ತಂಬಾಕು ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಪ್ರಯತ್ನದಲ್ಲಿದೆ. ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2015ನ್ನು ಈ ವರ್ಷದ ಎಪ್ರಿಲ್ ತಿಂಗಳಿಂದ ಕಡ್ಡಾಯ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಕಾಯ್ದೆಯಂತೆ ಮಾರಾಟದ ಬೀಡಿಯ ಲೇಬಲ್ ಮೇಲೆ ಶೇ. 85ರಷ್ಟು ತಂಬಾಕು ಸೇವನೆಯು ಅಪಾಯಕಾರಿ ಎಂಬ ಸಂದೇಶವನ್ನು ನೀಡುವ ಚಿತ್ರವನ್ನು ಮುದ್ರಿಸಬೇಕು ಮತ್ತು ಬೀಡಿ ಉತ್ಪಾದಿಸಿದ ದಿನಾಂಕವನ್ನು ನಮೂದಿಸಬೇಕಾಗಿದೆ. ಈ ಉತ್ಪಾದನೆಗಳಿಗೆ ಜಾಹೀರಾತು ನೀಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುವಂತಿಲ್ಲ ಮತ್ತು ಸೇದುವಂತಿಲ್ಲ. ಅಂತವರಿಗೆ ದಂಡ ವಿಧಿಸುವುದು ಮತ್ತು ಜೈಲುಶಿಕ್ಷೆ ನೀಡುವುದಾಗಿದೆ.
ನಾಸಿಕ್‌ನಲ್ಲಿ ಕಳೆದ ತಿಂಗಳಲ್ಲೇ ಮಾರಾಟಕ್ಕೆ ಹೋದ ಲಕ್ಷಾಂತರ ಬೀಡಿಗಳ ಬಂಡಲ್‌ಗಳನ್ನೇ ವಶಪಡಿಸಿಕೊಂಡು ಮಾಲಕರ ಮೇಲೆ ಕೇಸು ದಾಖಲಿಸಿದ್ದಾರೆ. ಇವೆಲ್ಲವೂ ಮಾಲಕರ ಗೌರವದ ಬದುಕಿಗೆ ಚ್ಯುತಿ ತರುವಂತಾಗಿದೆ. ಇಂತಹ ಸಂದರ್ಭದಲ್ಲಿ ಮಾಲಕರು ತಮ್ಮ ಬಂಡವಾಳವನ್ನು ಬೇರೆ ಉದ್ದಿಮೆಗಳಲ್ಲಿ ತೊಡಗಿಸಿಕೊಂಡರೂ ಆಶ್ಚರ್ಯವಿಲ್ಲ. ಆದರೆ ಬೇರೆ ಯಾವುದೇ ಕುಶಲಗಾರಿಕೆ ತಿಳಿಯದ ಬಡ ಬೀಡಿ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುವವರಿಲ್ಲವಾಗಿದೆ.
ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ರಾಷ್ಟ್ರಗಳು ಅದರಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಬದಲೀ ವ್ಯವಸ್ಥೆಯನ್ನು ಅಥವಾ ಪರಿಹಾರವನ್ನೊದಗಿಸಬೇಕೆಂಬುದಾಗಿ ವಿಶ್ವಸಂಸ್ಥೆಯು ಆದೇಶಿಸಿದೆ. ಆದರೆ ಮೋದಿ ಸರಕಾರವು ಈ ಕಾರ್ಮಿಕರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಕಾರವೆತ್ತಲಿಲ್ಲ.
ದೇಶದಲ್ಲಿ ಆಹಾರ ಉತ್ಪನ್ನಗಳ ಮತ್ತು ಮಾರಾಟಗಳಲ್ಲಿನ ನಡುವೆ ಅನುಸರಿಸುವ ಸರಕಾರದ ತಪ್ಪು ನೀತಿಯಿಂದಾಗಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಪರ್ಯಾಯ ವ್ಯವಸ್ಥೆ ಕಲ್ಪಿಸದೆಯಿದ್ದಲ್ಲಿ ಬೀಡಿ ಕಾರ್ಮಿಕರು ಕೂಡಾ ಆತ್ಮಹತ್ಯೆ ದಾರಿ ಹಿಡಿದರೆ ಆಶ್ಚರ್ಯವಿಲ್ಲ.







