ಭಾರತದಾದ್ಯಂತ ಇಷ್ಟೊಂದು ಬೆಂಕಿ ಅವಘಡಗಳು ಸಂಭವಿಸುತ್ತಿರುವುದಾದರೂ ಯಾಕೆ?

ಬೇಸಿಗೆ ಆರಂಭವಾಗುತ್ತಲೇ ಪರ್ವತರಾಜ್ಯಗಳ ಕಾಡು ಪ್ರದೇಶಗಳಲ್ಲಿ ಮತ್ತು ಅನೇಕ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೆಂಕಿ ಅವಘಡಗಳು ತೀವ್ರವಾಗಿ ಏರಿಕೆ ಕಂಡಿದೆ. ಉದಾಹರಣೆಗೆ, ಪರಿಸರ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಈ ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ ಸಂಭವಿಸಿದ ಬೆಂಕಿ ಅವಘಡಗಳ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ನಡೆದ ಬೆಂಕಿ ಅವಘಡಗಳ ಸಂಖ್ಯೆಯನ್ನೂ ಮೀರುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ದಿಲ್ಲಿಯ ಅಗ್ನಿಶಾಮಕ ದಳ ಎಪ್ರಿಲ್‌ನಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಪಟ್ಟ ಕರೆಯಲ್ಲಿ ಶೇ. 500 ಏರಿಕೆಯನ್ನು ಕಂಡಿದೆ. ಈ ಅವಘಡಗಳ ಪೈಕಿ ಎಪ್ರಿಲ್ 26ರಂದು ನ್ಯಾಶನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯನ್ನು ಧ್ವಂಸಗೊಳಿಸಿದ ಬೆಂಕಿ ಅವಘಡವೂ ಸೇರಿದೆ.
ಕಳೆದೊಂದು ವಾರದಿಂದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಅರಣ್ಯ ಪ್ರದೇಶದಲ್ಲಿ ಉರಿಯುತ್ತಿರುವ ಬೆಂಕಿ ಮತ್ತಷ್ಟು ತೀವ್ರತೆಯನ್ನು ಪಡೆದಿದೆ ಮತ್ತು ಇಂಥಹ ಘಟನೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲೂ ನಡೆದಿದೆ. ಉತ್ತರಖಂಡ ಪ್ರದೇಶದಲ್ಲಿ ಬೆಂಕಿ ಅವಘಡದಿಂದ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು ನೂರಾರು ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ವಾರದ ಆರಂಭದಲ್ಲಿ ಹಿಮಾಚಲಪ್ರದೇಶದಲ್ಲಿ ಸಂಭವಿಸಿದ ಅಗ್ನಿದುರಂತ ಯುನೆಸ್ಕೊ ಪಾರಂಪರಿಕ ತಾಣದ ಪಟ್ಟಿಯಲ್ಲಿ ಗುರುತಿಸಿದ್ದ ರೈಲ್ವೇ ಹಳಿಯನ್ನು ಆಹುತಿಪಡೆದುಕೊಂಡಿತ್ತು ಮತ್ತು ಬೆಂಕಿ ಶಾಲೆಯ ಪರಿಸರಕ್ಕೆ ಹಬ್ಬಿದ ಕಾರಣ ಕಸೌಲಿಯ ಬೋರ್ಡಿಂಗ್ ಶಾಲೆಯ ಮಕ್ಕಳನ್ನು ಸ್ಥಳಾಂತರಿಸಲಾಗಿತ್ತು.
ಕಳೆದ ಎರಡು ವಾರಗಳಲ್ಲಿ ಬಿಹಾರದ ಆರು ಗ್ರಾಮಗಳಲ್ಲಿ ಕಾಣಿಸಿಕೊಂಡ ಬೆಂಕಿ 66 ಜನರನ್ನು ಮತ್ತು 1200 ಪಶುಗಳನ್ನು ಬಲಿಪಡೆದುಕೊಂಡು 1000 ಮನೆಗಳನ್ನು ಧ್ವಂಸಗೊಳಿಸಿತ್ತು. ಘಟನೆಯ ಹಿನ್ನೆಲೆಯಲ್ಲಿ ಸರಕಾರ ಮುಂದೆ ಯಾವುದೇ ಬೆಂಕಿ ಅವಘಡ ಸಂಭವಿಸದಂತೆ ತಡೆಗಟ್ಟುವ ಕ್ರಮವಾಗಿ ಹಳ್ಳಿಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಅಡುಗೆ ಮಾಡುವುದನ್ನು ನಿಷೇಧಿಸಿತ್ತು.
ಈ ಎಲ್ಲ ಬೆಂಕಿ ಅವಘಡಗಳಿಗೆ ಕಾರಣವಾದರೂ ಏನು?
ಬೆಂಕಿ ಉತ್ಪತ್ತಿಯಾಗಲು ಮೂರು ಮುಖ್ಯ ಮೂಲಗಳಾದ ಆಮ್ಲಜನಕ, ಇಂಧನ ಮತ್ತು ಶಾಖ ಈ ಮೂರು ಅಂಶಗಳು ಸೇರಿ ತಜ್ಞರು ಹೇಳುವ ಬೆಂಕಿ ತ್ರಿಕೋನವನ್ನು ರೂಪಿಸುತ್ತದೆ. ಮೊದಲ ಎರಡು ಅಂಶಗಳು ವರ್ಷಪೂರ್ತಿ ಲಭ್ಯವಾಗಿರುತ್ತದೆ. ಆದರೆ ಮೂರನೇ ಅಂಶ-ಶಾಖ-ಚಳಿಗಾಲಕ್ಕಿಂತಲೂ ಬೇಸಿಗೆಯ ಸಮಯದಲ್ಲಿ ಬೆಂಕಿ ದುರಂತಗಳು ಹೆಚ್ಚು ಸಂಭವಿಸಲು ಪ್ರಮುಖ ಕಾರಣವಾಗಿದೆ ಅದರಲ್ಲೂ ಸಾಮಾನ್ಯ ಬೇಸಿಗೆಗಿಂತ ಉಷ್ಣಹವೆಯ ಸಮಯದಲ್ಲಿ ಇಂಥಾ ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ.
ಇದಕ್ಕೆ ಸೇರ್ಪಡೆಯೆಂಬಂತೆ ದೇಶದ ಹಲವು ಕಡೆಗಳಲ್ಲಿ ಉಂಟಾಗಿರುವ ಬರಪರಿಸ್ಥಿತಿಯೂ ಸೇರಿ ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸಿದೆ. ಉದಾಹರಣೆಗೆ ಉತ್ತರಾಖಂಡದಲ್ಲಿ ಅಲ್ಲಲ್ಲಿ ಕನಿಷ್ಠ ನೂರು ಸಕ್ರಿಯ ಬೆಂಕಿಗಳಿರುವ ಜಾಗವಿದ್ದು ಕಳೆದ ಮಾನ್ಸೂನ್‌ನಿಂದ ಈವರೆಗೆ ಒಂದು ಹನಿ ಮಳೆ ಕೂಡಾ ಆಗಿಲ್ಲ ಮತ್ತು ಚಳಿಗಾಲದಲ್ಲಿ ಮಂಜು ಕೂಡಾ ಬಿದ್ದಿಲ್ಲ, ಅದರರ್ಥ ನೀರಿನ ಎಲ್ಲಾ ಮೂಲಗಳು ಬತ್ತಿ ಹೋಗಿವೆ. ‘‘ಮಳೆ ಕೊರತೆಯ ಜೊತೆಗೆ ಬೇಸಿಗೆಯಲ್ಲಿ ನೀರು ಆವಿಯಾಗುವುದು ಕೂಡಾ ಹೆಚ್ಚಾದಾಗ ಕಾಡಿನ ಮಣ್ಣು ತೇವಾಂಶವನ್ನು ಕಳೆದುಕೊಳ್ಳುತ್ತದೆ’’ ಎಂದು ಹೇಳುತ್ತಾರೆ ಗಾಂಧಿನಗರದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನೀರು ಮತ್ತು ವಾತಾವರಣ ಲ್ಯಾಬ್‌ನ ವಿಜ್ಞಾನಿ ವಿಮಲ್ ಮಿಶ್ರಾ.
‘‘ತೇವಾಂಶದ ಕೊರತೆ ಅಡುಗೆ ಸ್ಟವ್ ಅಥವಾ ಇನ್ಯಾವುದೇ ಮಾನವ ಚಟುವಟಿಕೆಯಿಂದ ಆರಂಭವಾಗುವ ಬೆಂಕಿ ಸುತ್ತಮುತ್ತಲ ಪರಿಸರಕ್ಕೆ ಆವರಿಸಲು ನೆರವಾಗುತ್ತದೆ. ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ತನ್ನ ಕೃಷಿಭೂಮಿಯ ಅಥವಾ ಇತರ ಜಮೀನಿನ ಹುಲ್ಲನ್ನು ಸ್ವಚ್ಛಗೊಳಿಸಲು ಬಯಸಿದರೆ ನಿಯಂತ್ರಿತವಾಗಿ ಬೆಂಕಿ ಹಾಕಲು ಯೋಚಿಸುತ್ತಾನೆ’’ ಎಂದು ಹೇಳುತ್ತಾರೆ ಮಿಶ್ರಾ. ‘‘ಆದರೆ ಆ ಬೆಂಕಿ ಶುಷ್ಕ ವಾತಾವರಣದ ಪರಿಣಾಮ ಆತನ ನಿಯಂತ್ರಣ ಕಳೆದುಕೊಳ್ಳುತ್ತದೆ’’ ಎಂದವರು ಹೇಳುತ್ತಾರೆ.
‘‘ಆದರೆ ವಾತಾವರಣದ ಹವೆ ಮತ್ತು ಶುಷ್ಕ ವಾತಾವರಣ ಕೊಂಬೆಗಳು ಮತ್ತು ಹುಲ್ಲು ತನ್ನಷ್ಟಕ್ಕೇ ಉರಿಯುವಂತೆ ಮಾಡುವುದಿಲ್ಲ. ಈ ಹವೆಯಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿರುವುದು ಆಶ್ಚರ್ಯದ ವಿಷಯವೇನೂ ಅಲ್ಲ’’ ಎನ್ನುತ್ತಾರೆ ಉತ್ತರಾಖಂಡ ಅಗ್ನಿಶಾಮಕ ದಳದ ವರಿಷ್ಠಾಧಿಕಾರಿ ಜಿಸಿ ಪಂತ್. ‘‘ಆದರೆ ಒಂದು ಕಿಡಿಯ ಅಗತ್ಯವಿರುವುದಂತೂ ನಿಜ’’ ಎಂದವರು ಸೇರಿಸುತ್ತಾರೆ. ‘‘ಒಬ್ಬ ಅರಣ್ಯ ಪ್ರದೇಶದ ಸಮೀಪ ಸಿಗರೇಟ್ ಸೇದಿ ಅದನ್ನು ಆರಿಸದೆ ಪಕ್ಕದಲ್ಲಿ ಎಸೆದರೆ ಅದರ ಕಿಡಿ ಬೆಂಕಿ ಹುಟ್ಟಲು ಕಾರಣವಾಗಬಹುದು ಎಂದವರು ಹೇಳುತ್ತಾರೆ. ಅಥವಾ ಯಾರಾದರೂ ಬೆಂಕಿ ಪೊಟ್ಟಣದ ಜೊತೆ ಆಟವಾಡುತ್ತಲೂ ಹೀಗೆ ಮಾಡಬಹುದು. ಏನೇ ಆಗಿರಬಹುದು ಆದರೆ ನಷ್ಟ ಮಾತ್ರ ಎಕ್ರೆಗಟ್ಟಲೆಯಲ್ಲಿರುತ್ತದೆ’’ ಎಂದವರು ಹೇಳುತ್ತಾರೆ.
‘‘ಗಾಳಿಯು ಬೆಂಕಿ ಹರಡಲು ಅಗತ್ಯವಿರುವ ಆಮ್ಲಜನಕವನ್ನು ಪೂರೈಸುವ ಮೂಲಕ ತನ್ನ ಕೆಲಸ ಮಾಡುತ್ತದೆ. ಅದೇ ರೀತಿಯಲ್ಲಿ ಕಳೆದ ತಿಂಗಳು ಬಿಹಾರದ ಔರಂಗಾಬಾದ್ ಜಿಲ್ಲೆಯ ಹರಿನಗರ ಗ್ರಾಮದಲ್ಲಿ ಹನ್ನೆರಡು ಮಂದಿಯನ್ನು ಬಲಿಪಡೆದುಕೊಂಡು ಅನೇಕ ಗುಡಿಸಲುಗಳನ್ನು ಭಸ್ಮ ಮಾಡಿದ ಬೆಂಕಿ ಹರಡಿತ್ತು. ಒಂದು ಮನೆಯ ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ವೇಗವಾಗಿ ಇತರ ಸಮೀಪದ ಮನೆಗಳಿಗೂ ಹರಡಿತು. ಆದರೆ ಮೃತರಿಗೆ ಮಾತ್ರ ಅಷ್ಟು ವೇಗವಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುಡಿಸಲುಗಳನ್ನು ಮಣ್ಣಿನಿಂದ ನಿರ್ಮಿಸಲಾಗಿದ್ದರೂ ಹುಲ್ಲಿನಿಂದ ಮುಚ್ಚಲಾಗಿತ್ತು’’ ಎಂದು ಬಿಹಾರ ಅಗ್ನಿಶಾಮಕದಳದ ಕಮಾಂಡೆಂಟ್ ಆಗಿರುವ ಉಪೇಂದ್ರ ಸಿಂಗ್ ಹೇಳುತ್ತಾರೆ. ಇದು ಹವೆಯಲ್ಲಿ ತೇವಾಂಶ ಇಲ್ಲದಿದ್ದಾಗ ಬೇಗನೆ ಬೆಂಕಿ ಹಿಡಿದುಕೊಳ್ಳುತ್ತದೆ ಎಂದವರು ಹೇಳುತ್ತಾರೆ. ‘‘ಬಿಹಾರ ಸರಕಾರ ದಿನದ ಅವಧಿಯಲ್ಲಿ ಅಡುಗೆ ಮಾಡದಂತೆ ನಿಷೇಧ ಹೇರಲು ಕಾರಣ ಉಷ್ಣಹವೆ’’ ಎಂದವರು ಸೇರಿಸುತ್ತಾರೆ. ಇದನ್ನು ಜನರ ಮತ್ತು ಅವರ ಸುತ್ತಮುತ್ತ ಇರುವವರ ಒಳಿತಿಗಾಗಿ ಮಾಡಲಾಗಿದೆ ಯಾಕೆಂದರೆ ಬೇಸಿಗೆಯಲ್ಲಿ ಈಗಾಗಲೇ ಏರಿರುವ ತಾಪಮಾನದ ಪರಿಣಾಮವಾಗಿ ಬೆಂಕಿ ಬೇಗನೆ ಹರಡುತ್ತದೆ ಎಂದವರು ಹೇಳುತ್ತಾರೆ.
ಇನ್ನು ನಗರ ಪ್ರದೇಶಗಳಲ್ಲಿ ಶಾರ್ಟ್ ಸರ್ಕ್ಯೂಟ್‌ಗಳೇ ಬೆಂಕಿ ಆಕಸ್ಮಿಕಗಳಿಗೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ದಿಲ್ಲಿಯಲ್ಲಿ ಅಗ್ನಿಶಾಮಕ ಇಲಾಖೆಯು ಎಪ್ರಿಲ್‌ನಲ್ಲಿ 970 ತುರ್ತು ಕರೆಗಳನ್ನು ಸ್ವೀಕರಿಸಿತ್ತು ಕಳೆದ ವರ್ಷ ಈ ಸಮಯದಲ್ಲಿ 164 ಕರೆಗಳನ್ನು ದಾಖಲಿಸಲಾಗಿತ್ತು. ನ್ಯಾಶನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಕಾಣಿಸಿದ ಬೆಂಕಿಯ ಹೊರತಾಗಿ ಪೀತಾಂಪುರದಲ್ಲಿರುವ ವಾಣಿಜ್ಯ ಕೇಂದ್ರವಾದ ಜಾರಿ ನಿರ್ದೇಶನಾಲಯದ ಮುಖ್ಯಕಚೇರಿ ಮತ್ತು ಒಂದು ಗುಜರಿ ಸಂಗ್ರಹಣಾ ಗೋದಾಮಿನಲ್ಲೂ ಬೆಂಕಿ ಅವಘಡದ ವರದಿಗಳು ಬಂದಿದ್ದವು. ಈ ಅವಘಡಗಳಿಗೆ ಕಾರಣವನ್ನು ಇನ್ನಷ್ಟೇ ತಿಳಿಯಬೇಕಿದೆ. ಪಂತ್ ಪ್ರಕಾರ, ‘‘ನಗರಗಳಲ್ಲಿ ಹೊರಗಡೆ ಬಿಸಿಲಿನ ತಾಪ ತೀವ್ರವಾದಾಗ ವಾತಾನುಕೂಲ ಸಾಧನಗಳ ಬಳಕೆಯು ತೀವ್ರವಾಗಿ ಏರಿಕೆಯಾಗುತ್ತದೆ. ಇದು ವಿದ್ಯುತ್ ತಂತಿಗಳ ಮೇಲೆ ಒತ್ತಡ ಹೇರುತ್ತದೆ. ಕೆಲವೊಂದು ತಂತಿಗಳು ಈ ಒತ್ತಡವನ್ನು ಹೇರುವ ಸಾಮರ್ಥ್ಯ ಹೊಂದಿರುವುದಿಲ್ಲ ಹಾಗಾಗಿ ಟ್ರಿಪ್ ಆಗುತ್ತವೆ. ಇದರಿಂದ ಕಿಡಿ ಹೊತ್ತಿಕೊಂಡು ಬೆಂಕಿ ಉಂಟಾಗುತ್ತದೆ.’’ ‘‘ಮನೆ ಮತ್ತು ಕಚೇರಿಗಳಲ್ಲಿ ಬಳಸುವ ವೈರ್‌ಗಳ ಗುಣಮಟ್ಟ ಕೂಡಾ ಅವಘಡಗಳಿಗೆ ಕಾರಣವಾಗಿದೆ’’ ಎಂದು ಹೇಳುತ್ತಾರೆ ಪಂತ್. ‘‘ಕೆಲವು ತಂತಿಗಳನ್ನು ಪೋಲಿಮರ್‌ನಿಂದ ನಿರ್ಮಿಸಲಾಗಿದ್ದು ಇವುಗಳು ನಿರಂತರ ಬಿಸಿ ಶಾಖವನ್ನು ತಾಳಲಾರದೆ ಕರಗುತ್ತವೆ ಮತ್ತು ಇದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತದೆ’’ ಎನ್ನುತ್ತಾರವರು. ನಗರ ಪ್ರದೇಶಗಳಲ್ಲಿ ಮನೆಗಳು, ಕಚೇರಿ ಮತ್ತು ಕಾರ್ಖಾನೆಗಳಲ್ಲಿ ದಹನಶೀಲ ವಸ್ತುಗಳಾದ ಪೇಪರ್, ಬಟ್ಟೆ ಇತ್ಯಾದಿ ಇರುವುದರಿಂದ ಬೆಂಕಿ ವೇಗವಾಗಿ ಹರಡುತ್ತದೆ. ‘‘ಜನರು ಸಾಕಷ್ಟು ಅಗತ್ಯವಿರದ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ ಮತ್ತು ಇವುಗಳು ಬಹಳಷ್ಟು ಬಾರಿ ದಹನಶೀಲ ವಸ್ತುಗಳಾಗಿರುತ್ತವೆ’’ ಎಂದು ಹೇಳುತ್ತಾರೆ ಮೈಸೂರಿನ ರಾಷ್ಟ್ರೀಯ ಇಂಜಿನಿಯರಿಂಗ್ ಸಂಸ್ಥೆಯ ಕಟ್ಟಡ ಬೆಂಕಿ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಎನ್. ನರೇಶ್. ‘‘ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದಾಗ ಬೆಂಕಿ ಬೇಗನೆ ಹರಡುತ್ತವೆ ಯಾಕೆಂದರೆ ಅಲ್ಲಿರುವ ವಸ್ತುಗಳಲ್ಲಿ ತೇವಾಂಶ ಇರುವುದಿಲ್ಲ. ಅವುಗಳು ಸಂಪೂರ್ಣವಾಗಿ ಒಣಗಿದ್ದು ಯಾವುದೇ ಇಂಧನಕ್ಕೆ ಕಡಿಮೆಯಿಲ್ಲ’’ ಎಂದವರು ಹೇಳುತ್ತಾರೆ.







