ಮ್ಯಾಡ್ರಿಡ್ ಓಪನ್: ಜೊಕೊವಿಕ್ ಚಾಂಪಿಯನ್

ಮ್ಯಾಡ್ರಿಡ್, ಮೇ 9: ಮ್ಯಾಡ್ರಿಡ್ ಓಪನ್ ಫೈನಲ್‌ನಲ್ಲಿ ಆ್ಯಂಡಿ ಮರ್ರೆ ಅವರನ್ನು ಮಣಿಸಿದ ನೊವಾಕ್ ಜೊಕೊವಿಕ್ 29ನೆ ಮಾಸ್ಟರ್ಸ್ ಟ್ರೋಫಿಯನ್ನು ಜಯಿಸಿ ದಾಖಲೆ ನಿರ್ಮಿಸಿದ್ದಾರೆ.
ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಕ್ ಬ್ರಿಟನ್‌ನ ಮರ್ರೆ ಅವರನ್ನು 6-2, 3-6, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಎರಡನೆ ಬಾರಿ ಮ್ಯಾಡ್ರಿಡ್ ಓಪನ್ ಕಿರೀಟವನ್ನು ಧರಿಸಿದರು. ಜೊಕೊವಿಕ್ ಈ ವರ್ಷ ಜಯಿಸಿದ ಐದನೆ ಟ್ರೋಫಿ ಇದಾಗಿದೆ.
ಜೊಕೊವಿಕ್ ಹಾಲಿ ಚಾಂಪಿಯನ್ ಮರ್ರೆ ವಿರುದ್ಧ ಆಡಿರುವ 13ನೆ ಪಂದ್ಯದಲ್ಲಿ 12ನೆ ಬಾರಿ ಸೋಲಿಸಿದ್ದಾರೆ. ಕ್ಲೇ-ಕೋರ್ಟ್ ಟೆನಿಸ್ ಟೂರ್ನಿಯಲ್ಲಿ ಮರ್ರೆ ವಿರುದ್ಧ ಆಡಿರುವ ಎಲ್ಲ ನಾಲ್ಕೂ ಪಂದ್ಯಗಳನ್ನು ಜಯಿಸಿರುವ ಜೊಕೊವಿಕ್ ಅವರು ಮರ್ರೆ ವಿರುದ್ಧ 23-9 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.
ಎಟಿಪಿ ರ್ಯಾಂಕಿಂಗ್: 2ನೆ ಸ್ಥಾನ ಕಳೆದುಕೊಂಡ ಮರ್ರೆ
ಪ್ಯಾರಿಸ್, ಮೇ 9: ಮ್ಯಾಡ್ರಿಡ್ ಮಾಸ್ಟರ್ಸ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಶರಣಾಗಿರುವ ಆ್ಯಂಡಿ ಮರ್ರೆ ಎಟಿಪಿ ರ್ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನಕ್ಕೆ ಕುಸಿದಿದ್ದಾರೆ. ಎರಡನೆ ಸ್ಥಾನವನ್ನು ರೋಜರ್ ಫೆಡರರ್‌ಗೆ ಬಿಟ್ಟುಕೊಟ್ಟಿದ್ದಾರೆ.
ಸ್ಪೇನ್‌ನಲ್ಲಿ ನಡೆದ ಮ್ಯಾಡ್ರಿಡ್ ಓಪನ್‌ನಲ್ಲಿ ಮರ್ರೆ ಉತ್ತಮವಾಗಿ ಆಡಿದ್ದರೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವಿಫಲರಾಗಿದ್ದರು. ಈ ವಾರದಲ್ಲಿ ನಡೆಯಲಿರುವ ಇಟಲಿ ಓಪನ್‌ಗಿಂತ ಮೊದಲು ರ್ಯಾಂಕಿಂಗ್‌ನಲ್ಲಿ ಹಿನ್ನಡೆ ಕಂಡಿದ್ದಾರೆ.
ಮ್ಯಾಡ್ರಿಡ್ ಓಪನ್ ಚಾಂಪಿಯನ್ ಜೊಕೊವಿಕ್ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮ್ಯಾಡ್ರಿಡ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದ ಆಸ್ಟ್ರೇಲಿಯದ ಯುವ ಆಟಗಾರ ನಿಕ್ ಕಿರ್ಗಿಯೊಸ್ ಅಗ್ರ-20ನೆ ಸ್ಥಾನಕ್ಕೆ ಮರಳಿದ್ದಾರೆ.
ಎಟಿಪಿ ಟಾಪ್-10:
1.ನೊವಾಕ್ ಜೊಕೊವಿಕ್(ಸರ್ಬಿಯ), 2. ರೋಜರ್ ಫೆಡರರ್(ಸ್ವಿಸ್), 3. ಆ್ಯಂಡಿ ಮರ್ರೆ(ಬ್ರಿಟನ್), 4. ಸ್ಟಾನ್ ವಾವ್ರಿಂಕ(ಸ್ವಿಸ್), 5.ರಫೆಲ್ ನಡಾಲ್(ಸ್ಪೇನ್), 6. ಕೀ ನಿಶಿಕೊರಿ(ಜಪಾನ್), 7. ವಿಲ್ಫ್ರೆಡ್ ಸೋಂಗ(ಫ್ರಾನ್ಸ್), 8. ಥಾಮಸ್ ಬೆರ್ಡಿಕ್(ಝೆಕ್), 9. ಡೇವಿಡ್ ಫೆರರ್(ಸ್ಪೇನ್), 10. ಮಿಲಾಸ್ ರಾವೊನಿಕ್(ಕೆನಡಾ).







