ಯುಇಎಫ್‌ಎ ಅಧ್ಯಕ್ಷ ಸ್ಥಾನ ತ್ಯಜಿಸಿದ ಮೈಕಲ್ ಪ್ಲಾಟಿನಿ

ಲಾಸನ್ನೆ, ಮೇ 9: ಆರು ವರ್ಷಗಳ ಕಾಲ ಫುಟ್ಬಾಲ್ ಚಟುವಟಿಕೆಯಿಂದ ಫಿಫಾ ವಿಧಿಸಿರುವ ನಿಷೇಧದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಯುಇಎಫ್‌ಎ ಅಧ್ಯಕ್ಷ ಮೈಕಲ್ ಪ್ಲಾಟಿನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಆರು ವರ್ಷಗಳ ನಿಷೇಧ ವಿರುದ್ಧ ಪ್ಲಾಟಿನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸೋಮವಾರ ವಿಚಾರಣೆ ನಡೆಸಿದ ಕ್ರೀಡಾ ಪಂಚಾಯತಿ ನ್ಯಾಯಾಲಯ(ಸಿಎಎಸ್) ಪ್ಲಾಟಿನಿ ವಿರುದ್ಧ ನಿಷೇಧದ ಅವಧಿಯನ್ನು 6 ವರ್ಷದಿಂದ 4ಕ್ಕೆ ಇಳಿಸಿತು. ದಂಡವನ್ನು 80,000 ಸ್ವಿಸ್ ಫ್ರಾಂಕ್ಸ್‌ನಿಂದ 60,000 ಸ್ವಿಸ್ ಫ್ರಾಂಕ್ಸ್ಸ್‌ಗೆ ಕಡಿತಗೊಳಿಸಿತು. ಆದರೆ, ಪ್ಲಾಟಿನಿ ಬಯಕೆಯಂತೆ ನಿಷೇಧವನ್ನು ರದ್ದುಪಡಿಸಲು ನಿರಾಕರಿಸಿತು.
‘‘ಸಿಎಎಸ್ ನೀಡಿರುವ ಇಂದಿನ ತೀರ್ಪನ್ನು ಗಮನಿಸಿದ್ದು, ಇದು ನನಗಾದ ಅನ್ಯಾಯ ಎಂದು ಪರಿಗಣಿಸಿದ್ದೇನೆ. ನಾನು ಯುಇಎಫ್‌ಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಕಾನೂನು ಹೋರಾಟವನ್ನು ಮುಂದುವರಿಸಲಿದ್ದೇನೆ’’ ಎಂದು ಪ್ಲಾಟಿನಿ ಹೇಳಿದ್ದಾರೆ.
ಪ್ಲಾಟಿನಿ ಅಧ್ಯಕ್ಷ ಸ್ಥಾನಕ್ಕ ರಾಜೀನಾಮೆ ನೀಡಿರುವ ಕಾರಣ ಅವರು ಜೂ.10 ರಂದು ಫ್ರಾನ್ಸ್‌ನಲ್ಲಿ ಆರಂಭವಾಗಲಿರುವ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಅಧಿಕೃತವಾಗಿ ಭಾಗವಹಿಸುವುದಿಲ್ಲ. ಫಿಫಾ ಭ್ರಷ್ಟಾಚಾರ ಹಗರಣ ಬೆಳಕಿಗೆ ಬರುವ ತನಕ ಪ್ಲಾಟಿನಿ ಯುರೋ ಚಾಂಪಿಯನ್ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.







