ಭಾರತದ ಕೋಚ್ ಹುದ್ದೆಗೆ ವೆಟೋರಿ ಹೆಸರು ಸೂಚಿಸಿದ ಕೊಹ್ಲಿ

ವಿಶಾಖಪಟ್ಟಣ, ಮೇ 9: ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಬಿಗ್‌ಬಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ನ್ಯೂಝಿಲೆಂಡ್‌ನ ಮಾಜಿ ಎಡಗೈ ಸ್ಪಿನ್ನರ್ ಡೇನಿಯಲ್ ವೆಟೋರಿ ಭಾರತೀಯ ಕೋಚ್ ಹುದ್ದೆಯ ರೇಸ್‌ನಲ್ಲಿದ್ದಾರೆ.
ಡಿಸೆಂಬರ್ 2014ರಲ್ಲಿ ಎಂ.ಎಸ್. ಧೋನಿಯಿಂದ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡಿದ್ದ ಭಾರತ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಷ್ಠಿತ ಕೋಚ್ ಹುದ್ದೆಗೆ ವೆಟೋರಿ ಅವರನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಬಿಸಿಸಿಐ ನ್ಯೂಝಿಲೆಂಡ್ ಮಾಜಿ ಆಟಗಾರನನ್ನು ಕೋಚ್ ಹುದ್ದೆಗೆ ಪರಿಗಣಿಸುವ ಬಗ್ಗೆ ದೃಢ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಭಾರತ ಜೂ.16, 2016-ಮಾರ್ಚ್ 2017ರ ನಡುವೆ 18 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ರಾಷ್ಟ್ರೀಯ ಕೋಚ್ ಹುದ್ದೆಯ ಆಯ್ಕೆ ಶೀಘ್ರವೇ ನಡೆಯುವ ಸಾಧ್ಯತೆಯಿದೆ.
ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ನ್ಯೂಝಿಲೆಂಡ್ ತಂಡ ಆಸ್ಟ್ರೇಲಿಯದ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಸೋತ ನಂತರ ವೆಟೋರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. 37ರ ಹರೆಯದ ವೆಟೋರಿ ಎಪ್ರಿಲ್ 2015ರಲ್ಲಿ ಮೊದಲ ಬಾರಿ ಬ್ರಿಸ್ಬೇನ್ ಹೀಟ್ಸ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದರು. 2014ರಿಂದ ಬೆಂಗಳೂರು ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೆಟೋರಿ ಬ್ರಿಸ್ಬೇನ್ ತಂಡದಲ್ಲಿ ಸ್ಟುವರ್ಟ್ ಲಾ ಉತ್ತರಾಧಿಕಾರಿ ಆಗಿ ಮೂರು ವರ್ಷ ಅವಧಿಗೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಒಂದು ವೇಳೆ ಕೊಹ್ಲಿ ಸಲಹೆಯ ಮೇರೆಗೆ ವೆಟೋರಿ ಭಾರತದ ಕೋಚ್ ಆಗಿ ಆಯ್ಕೆಯಾದರೆ, ಬ್ರಿಸ್ಬೇನ್ ತಂಡವನ್ನು ತ್ಯಜಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಉದ್ಬವಿಸುತ್ತದೆ.
ಭಾರತದ ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ಬಿಸಿಸಿಐ ಈ ಮೊದಲು ಮಾಜಿ ನಾಯಕ ರಾಹುಲ್ ದ್ರಾವಿಡ್‌ರನ್ನು ಕೇಳಿಕೊಂಡಿತ್ತು. ಆದರೆ, ಅವರು ತಕ್ಷಣವೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದರು.







