ಭಾರತದಲ್ಲಿ ಸಹಕಾರಿ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ: ರತ್ನಾಕರ ಕುಡುಪು

ಉಳ್ಳಾಲ, ಮೇ 9: ಭಾರತದಲ್ಲಿ ನೂರಾರು ವರ್ಷಗಳ ಹಿಂದಿನಿಂದಲೂ ಪ್ರತಿಯೊಬ್ಬರೂ ಪರಸ್ಪರ ಸಹಕಾರಿ ಮನೋಭಾವನೆ ಹೊಂದಿದ್ದು, ಅದುವೇ ಸಹಕಾರಿ ಸಂಘವಾಗಿ ಬೆಳೆದಿದೆ ಎಂದು ಜಾಗೃತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ವ್ಯವಸ್ಥಾಪಕ ಯು.ರತ್ನಾಕರ ಕುಡುಪು ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಒಳಪೇಟೆಯಲ್ಲಿ ಸೋಮವಾರ ತೀಯಾ ಸೇವಾ ಸಹಕಾರ ಸಂಘ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಳ್ಳಾಲ ಶ್ರೀ ಚೀರಂಭ ಭಗವತೀ ತೀಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಮತ್ತು ಸಹಕಾರಿ ಸಂಘಗಳ ತಾಣವಾಗಿದೆ. ನಮ್ಮ ಮಹಿಳೆಯರು ಹಿಂದಿನಿಂದಲೂ ಉಳಿಕೆ ಭಾವನೆ ಹೊಂದಿದ್ದು ಆ ಕಾರಣದಿಂದಲೇ ಜಿಲ್ಲೆಯಲ್ಲಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳು ಬೆಳೆಯಲು ಕಾರಣ. ತೀಯಾ ಸೇವಾ ಸಹಕಾರಿ ಸಂಘದದಿಂದಾಗಿ ಸಮಾಜ ಭಾಂದವರಲ್ಲಿ ಹೊಸ ಶಕ್ತಿ, ಹುಮ್ಮಸ್ಸು ಬಂದಿದೆ ಎಂದರು.
ರಾಜಕೀಯವಾಗಿ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡರೂ ಸಮಾಜದ ವಿಷಯ ಬಂದಾಗ ಪರಸ್ಪರ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.
ಸಂಘದ ಅಧ್ಯಕ್ಷ ರವೀಂದ್ರ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಶ್ರೀ ಚೀರುಂಭ ಭವಗತೀ ಕ್ಷೇತ್ರದ ಆಚಾರ ಪಟ್ಟವರು, ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ ಉಚ್ಚಿಲ್, ತೀಯಾ ಗ್ರಾಮಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ದಾಮೋದರ ಉಳ್ಳಾಲ್, ಸುರೇಶ್ ಭಟ್ನಗರ, ರಾಘವ ಆರ್.ಉಚ್ಚಿಲ್, ರಾಜಗೋಪಾಲ್ ಜಪ್ಪು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಸಂಘದ ಉಪಾಧ್ಯಕ್ಷ ಯು.ಮಾಧವ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಪ್ರಕಾಶ್ ಎಂ.ಉಳ್ಳಾಲ್ ಸ್ವಾಗತಿಸಿದರು. ನಿರ್ದೇಶಕ ದಿನೇಶ್ ಕುಂಪಲ ಪ್ರಾಸ್ತಾವಿಕವಾಗಿ ಮಾತನಾಡಿದರು.







