ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ: ಸಿದ್ದರಾಮಯ್ಯ

ಬೆಂಗಳೂರು, ಮೇ 9: ಜಾತಿ ವ್ಯವಸ್ಥೆ ನಿರ್ಮೂಲನೆಯಾಗುವ ಮೂಲಕ ಸಮ ಸಮಾಜ ನಿರ್ಮಾಣ ಆಗಬೇಕೆಂಬ ಕನಸು ಕಂಡಿದ್ದ ಬಸವಣ್ಣ, ಅದಕ್ಕಾಗಿ ಅವರು ಬದ್ಧತೆ ಯಿಂದ ಕೆಲಸ ಮಾಡಿದರು ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಶ್ಲಾಘಿಸಿದ್ದಾರೆ.
ಸೋಮವಾರ ಬಸವ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ಚಾಲುಕ್ಯ ವೃತ್ತದಲ್ಲಿನ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ತಾವು ಕೂಡ ಬಸವ ಜಯಂತಿ ದಿನದಂದೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ ಎಂದು ಸ್ಮರಿಸಿದರು.
ಹನ್ನೆರಡನೆ ಶತನಮಾನದಲ್ಲೆ ಅನಿಷ್ಟ ಜಾತಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಬಸವಣ್ಣನವರ ತತ್ವಾದರ್ಶಗಳು ಹಾಗೂ ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದ ಸಿದ್ಧರಾಮಯ್ಯ, ಬಸವಣ್ಣನವರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆಧುನಿಕ ಪ್ರಜಾಪ್ರಭುತ್ವದ ಕಲ್ಪನೆಯ ಅನುಭವ ಮಂಟಪವನ್ನು ಹನ್ನೆರಡನೆ ಶತಮಾನದಲ್ಲೆ ಸ್ಥಾಪಿಸುವ ಮೂಲಕ ಹೊಸ ಸಮಾಜದ ಸೃಷ್ಟಿಗೆ ಅವರು ಮಾದರಿ ಆಗಿದ್ದರು ಎಂದ ಸಿದ್ಧರಾಮಯ್ಯ, ಬಸವಣ್ಣ ಸೇರಿದಂತೆ ಶರಣರ ವಚನ ಸಾಹಿತ್ಯವನ್ನು ಮತ್ತಷ್ಟು ಪ್ರಚುರಪಡಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ಗೃಹ ಸಚಿವರ ಛಾಯಾಗ್ರಹಣ: ನಿಗದಿತ ಸಮಯಕ್ಕೆ ಇಲ್ಲಿನ ಚಾಲುಕ್ಯ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆ ಬಳಿಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಖಾಸಗಿ ಸುದ್ದಿವಾಹಿನಿಯ ಪ್ರತಿನಿಧಿಯೊಬ್ಬರಿಂದ ವಿಡಿಯೋ ಕ್ಯಾಮರಾವನ್ನು ಪಡೆದು ಕೆಲ ಕಾಲ ಸಮಾರಂಭದ ಛಾಯಾಗ್ರಹಣ ಮಾಡಿದ್ದು ಎಲ್ಲರ ಗಮನಸೆಳೆಯಿತು.
ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮೇಯರ್ ಮಂಜುನಾಥ ರೆಡ್ಡಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿ, ಸಂಸದ ಎಂ.ಚಂದ್ರಪ್ಪ, ಮೇಲ್ಮನೆ ಸದಸ್ಯ ವೀರಣ್ಣ ಮತ್ತೀಕಟ್ಟಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ವೀರಶೈವ ಮಹಾಸಭಾದ ಎನ್.ತಿಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.





