ಸಾಮಾಜಿಕ ಸಾಮರಸ್ಯ ಮೂಡಿಸಲು ಶ್ರೀಮಠ ದಿಟ್ಟಹೆಜ್ಜೆ: ಮುರುಘಾ ಶ್ರೀ
ಸರ್ವಧರ್ಮ ಸಹಪಂಕ್ತಿ ಭೋಜನ

ಚಿತ್ರದುರ್ಗ, ಮೇ 9: ಶೋಷಿತ ಸಮುದಾಯದ ಮೇಲೆ ಎಲ್ಲೆ ದೌರ್ಜನ್ಯ, ದಬ್ಬಾಳಿಕೆ ನಡೆದರೂ ಅಲ್ಲಿಗೆ ಹೋಗಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ಮೂಲಕ ಸಮಾಜದಲ್ಲಿ ಭಾವೈಕ್ಯತೆ, ಸಾಮರಸ್ಯ ಮೂಡಿಸಲು ಶ್ರೀಮಠದ ದಿಟ್ಟಹೆಜ್ಜೆಯನ್ನಿಟ್ಟಿದೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
ಸೋಮವಾರ ಬಸವ ಜಯಂತಿ ಪ್ರಯುಕ್ತ ಮುರುಘಾಮಠದಲ್ಲಿ ನಡೆದ ಶೋಷಿತ ಮತ್ತು ಸರ್ವಧರ್ಮ ಜನಾಂಗದ ಸಹಪಂಕ್ತಿ ಭೋಜನದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾನು ಪಕ್ಷಭೇದ, ಜಾತಿಭೇದ, ಧರ್ಮಭೇದ ಮರೆತು ಹಲವಾರು ಕಡೆ ಸಹಪಂಕ್ತಿ ಭೋಜನ ಮಾಡಿದ್ದೇನೆ ಎಂದರು.
ಮೈಸೂರಿನ ಹತ್ತಿರವಿರುವ ಗಿರಿಜನರ ಕೇರಿಗಳಲ್ಲಿ ಪ್ರಸಾದ ಸ್ವೀಕರಿಸಿದ್ದೇನೆ. ಮಠದಲ್ಲಿ ಪ್ರತಿನಿತ್ಯವು ಎಲ್ಲ ಜನಾಂಗ, ಸರ್ವಧರ್ಮದವರು ಪ್ರಸಾದ ಸ್ವೀಕರಿಸುತ್ತಾರೆ. 950 ವರ್ಷಗಳ ಹಿಂದೆಯೂ ಬಸವಣ್ಣನವರು ಕುಲ ಹದಿನೆಂಟು ಜಾತಿಗಳನ್ನು ಒಟ್ಟಿಗೆ ಸೇರಿಸಿ ಇಂತಹ ವ್ಯವಸ್ಥೆ ಮಾಡಿದ್ದರು. ಅದನ್ನೇ ನಾವು ಇಂದು ಮುಂದುವರಿಸಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಸರ್ವಧರ್ಮ ಸಹಪಂಕ್ತಿ ಭೋಜನ ಕಾರ್ಯ ಕ್ರಮ ಶ್ರೀಮಠದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಸಂದರ್ಭ ಎಂದ ಅವರು, ಶ್ರೀಮಠವು ಅನೇಕ ವಿಧವಾದ ಸಮಾಜಮುಖಿ ಪ್ರಯೋಗಗಳನ್ನು ಮಾಡುತ್ತಿದೆ. ಸೂರ್ಯಗ್ರಹಣ, ಚಂದ್ರಗ್ರಹಣ ಸಂದರ್ಭದಲ್ಲಿ ಮಕ್ಕಳೊಂದಿಗೆ ಉಪಹಾರ ಸೇವಿಸಿದ್ದೇವೆ. ಸ್ಮಶಾನದಲ್ಲಿಯೂ ಸರ್ವಧರ್ಮೀಯರೊಂದಿಗೆ ಚಿಂತನ ಕಾರ್ಯಕ್ರಮ ನಡೆಸಿದ್ದೇವೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮುರುಘಾ ಶರಣರು ಎಲ್ಲರಿಗೂ ಪ್ರಸಾದ ಬಡಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ರೆ.ಫಾದರ್ ರಾಜು, ಇಸ್ಲಾಂ ಧರ್ಮದ ತಾಜ್‌ಪೀರ್, ಅನ್ವರ್‌ಸಾಬ್. ಮುರುಘರಾಜೇಂದ್ರ ಒಡೆಯರ್, ಬಿ. ಕಾಂತ ರಾಜ್, ತಿಪ್ಪೇಸ್ವಾಮಿ, ರಾಜಗಿರಿ, ದೇವಿಕುಮಾರಿ, ಡಾ. ಮಲ್ಲಿಕಾರ್ಜುನಪ್ಪ, ಪ್ರೊ.ಈ.ಚಿತ್ರಶೇಖರ್ ಸೇರಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.







