ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಣೆ
ಬೆಂಗಳೂರು, ಮೇ 9: ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜಾಮೀನು ನೀಡಿದ್ದ ಕೆಳ ಹಂತದ ನ್ಯಾಯಾಲಯದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಾಮೀನು ಆದೇಶ ರದ್ದುಪಡಿಸಿದೆ. ಅಲ್ಲದೆ, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವ ಅಪರೂಪದ ಆದೇಶವೊಂದನ್ನು ಹೊರಡಿಸಿದೆ. ಅತ್ಯಾಚಾರವೇ ಬಹುದೊಡ್ಡ ಅಪರಾಧ. ಅದರಲ್ಲೂ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಎಸಗುವುದು ಬಹುದೊಡ್ಡ ಅಪರಾಧ. ಇಂತಹ ಕೃತ್ಯಎಸಗಿದವರಿಗೆ ಶಿಕ್ಷೆಯ ಅವಧಿ ಮಗಿಯುವ ಮುನ್ನ ಜಾಮೀನು ನೀಡುವುದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ.
ಅಸಹಾಯಕ ಯುವತಿಯನ್ನು ನಂಬಿಸಿ, ನಂತರ ಆಕೆಯ ಮೇಲೆ ಮೃಗದ ರೀತಿ ಎರಗಿ ಅತ್ಯಾಚಾರ ಮಾಡಿರುವುದಕ್ಕೆ ಆರೋಪಿ ಕನಿಷ್ಠ ಏಳು ವರ್ಷ ಕಾಲ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಲ್ಲಿಯವರೆಗೂ ಜಾಮೀನು ನೀಡುವುದು ಒಳಿತಲ್ಲ. ಆದರೆ. ಆರು ತಿಂಗಳು ಕಾಲ ಜೈಲುವಾಸ ಅನುಭವಿಸಿದವನಿಗೆ ಜಾಮೀನು ನೀಡಿರುವುದು ಸರಿಯಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ಆರೋಪಿಗೆ ಕೆಳ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಿ. ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಪ್ರಕರಣದ ಹಿನ್ನೆಲೆ
ಪ್ರವೀಣ ಎಂಬಾತ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಅಪ್ರಾಪ್ತಳನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಅತ್ಯಾಚಾರ ಎಸಗಿದ್ದ. ಈ ಕುರಿತು 2014ರ ಮಾರ್ಚ್ 4ರಂದು ಎನ್.ಆರ್. ಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪ್ರವೀಣನನ್ನು 2014ರ ಜುಲೈ 6 ರಂದು ಬಂಧಿಸಿದ್ದರು. ಚಿಕ್ಕಮಗಳೂರಿನ ವಿಶೇಷ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ಮಧ್ಯೆಯೇ, ಆರೋಪಿ 2014 ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ಜಾಮೀನು ಕೋರಿ ಚಿಕ್ಕಮಗಳೂರಿನ ಅಧೀನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಮೊದಲಿಗೆ ಆರೋಪಿಯ ಅರ್ಜಿಗಳನ್ನು ವಜಾಗೊಳಿಸಿ ಜಾಮೀನು ನಿರಾಕರಿಸಿದ್ದ ನ್ಯಾಯಾಲಯ, ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಬಳಿಕ ಜಾಮೀನು ನೀಡಿತ್ತು.
ಇದರಿಂದ ಪ್ರವೀಣ್‌ಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಎನ್.ಆರ್.ಪುರ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎ.ವಿ.ಚಂದ್ರಶೇಖರ್ ಅವರಿದ್ದ ನ್ಯಾಯಪೀಠ, 14ನೆ ಜನವರಿ 2016ರಂದು ಈ ಸಂಬಂಧ ತೀರ್ಪು ಪ್ರಕಟಿಸಿತು. ಅತ್ಯಾಚಾರವೆಸಗಿದ್ದರೂ ಆರೋಪಿಯು ಆರೇ ತಿಂಗಳಲ್ಲಿ ಜೈಲಿನಿಂದ ಹೊರಗಡೆ ಬಂದಿರುವುದಕ್ಕೆ ಮತ್ತು ಅದಕ್ಕೆ ಅವಕಾಶ ನೀಡಿದ ಅಧೀನ ನ್ಯಾಯಾಲಯದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿತು.





