ಸಿದ್ದರಾಮಯ್ಯರಿಂದ ರಾಜ್ಯಪಾಲರ ಭೇಟಿ ಸಾಧ್ಯತೆ
ಲೋಕಾಯುಕ್ತರ ನೇಮಕ
ಬೆಂಗಳೂರು, ಮೇ 9: ನೂತನ ಲೋಕಾಯುಕ್ತ ಹುದ್ದೆಗೆ ಸರಕಾರ ಶಿಫಾರಸು ಮಾಡಿದ್ದ ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ನಾಯಕ್ ಅವರ ಮೇಲಿನ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲು ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ಒಂದು ವಾರದ ಹಿಂದೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಲೋಕಾಯುಕ್ತ ಹುದ್ದೆಗೆ ಸರಕಾರ ಶಿಫಾರಸ್ಸು ಮಾಡಿರುವ ಕುರಿತು ಸ್ಪಷ್ಟನೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು. ಆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಿಎಂ ಸಿದ್ಧರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಲಿದ್ದಾರೆಂದು ಗೊತ್ತಾಗಿದೆ.
ಈ ಕುರಿತು ಈಗಾಗಲೇ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ರಾಜ್ಯಪಾಲರಿಗೆ ಪತ್ರ ಬರೆಯಲಿದ್ದಾರೆ. ಅಲ್ಲದೆ, ರಾಜ್ಯಪಾಲರನ್ನು ಸಿಎಂ ಖುದ್ದು ಭೇಟಿ ಮಾಡಿ, ನ್ಯಾ.ಎಸ್.ಆರ್.ನಾಯಕ್ ಅವರ ಮೇಲಿನ ಆರೋಪಗಳ ಬಗ್ಗೆ ವಿವರಣೆ ನೀಡಲಿದ್ದಾರೆ.
ನ್ಯಾ.ನಾಯಕ್ ಅವರ ಕಳಂಕ ರಹಿತರಾಗಿ ಸೇವೆ ಸಲ್ಲಿಸಿದ್ದು, ಅವರ ಮೇಲೆ ದುರುದ್ದೇಶದಿಂದ ಕೆಲ ಆರೋಪಗಳನ್ನು ಮಾಡಲಾಗಿದೆ. ಆದುದರಿಂದ ಅವರನ್ನೇ ಲೋಕಾಯುಕ್ತ ಹುದ್ದೆಗೆ ನಿಯೋಜನೆ ಸಂಬಂಧ ಪುನರ್ ಪರಿಶೀಲಿಸುವಂತೆಯೂ ಸಿಎಂ ಕೋರಲಿದ್ದಾರೆಂದು ತಿಳಿದು ಬಂದಿದೆ.





