ವರ್ಣಸಂಕರಗಳು ಹೆಚ್ಚು ನಡೆಯಲಿ: ದೇವನೂರ ಮಹದೇವ
ಮಂಡ್ಯ: ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಿತರ ಸಮಾವೇಶ

ಮಂಡ್ಯ, ಮೇ 9: ತಮ್ಮ ಮನೆಯ ಕುಡಿಯೊಂದು ಬೇರೆ ಜಾತಿಯ ಹುಡುಗನನ್ನು ಇಷ್ಟಪಟ್ಟ ಏಕೈಕ ಕಾರಣಕ್ಕೆ ಆಕೆಯನ್ನು ಕೊಲ್ಲುವುದು ಪೈಶಾಚಿಕ ಕೃತ್ಯವಾಗಿದೆ. ಇದಕ್ಕೆ ಕಾರಣ ಜಾತಿ ಪಿಶಾಚಿ ಮನಸ್ಸಿನ ಆಳದಲ್ಲಿ ಬೇರೂರಿರುವುದು. ಇದನ್ನು ಕೊತ್ತೊಗೆಯುವ ಕೆಲಸ ಆರಂಭವಾಗಬೇಕು ಎಂದು ಸಾಹಿತಿ ದೇವನೂರ ಮಹದೇವ ಕರೆ ನೀಡಿದ್ದಾರೆ.
ಬಸವ ಜಯಂತಿ ಅಂಗವಾಗಿ ನಗರದ ರೈತ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ವಿಶ್ವಮಾನವ ವಿಚಾರ ವೇದಿಕೆ ವತಿಯಿಂದ ಜಾತಿಮುಕ್ತ ಮನಸುಗಳ ಸಮ್ಮಿಲನ ಹೆಸರಿನಡಿ ಆಯೋಜಿಸಿದ್ದ ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ವಿವಾಹಿತರ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ವರ್ಣಸಂಕರ ಹೆಚ್ಚು ಅಗತ್ಯವಾಗಿದೆ. ಭಾರತದಲ್ಲಿ ವರ್ಣಸಂಕರವನ್ನು ತಡೆಗಟ್ಟಲು ಇರುವ ಕಾನೂನು ಕಟ್ಟಳೆಗಳು ಮತ್ಯಾವುದಕ್ಕೂ ಇಲ್ಲ. ಇದು ಭಾರತದಲ್ಲಿ ವರ್ಣಸಂಕರ ಅತೀ ಹೆಚ್ಚು ನಡೆದಿದೆ ಎಂದರ್ಥ. ಭಾರತೀಯರಿಗೆ ಹಲವು ಬಣ್ಣಗಳಿವೆ. ಇದು ಸಂಕರದಿಂದ ಆಗಿರುವುದು. ಇಂತಹ ವರ್ಣಸಂಕರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಅವರು ವಿಶ್ಲೇಷಿಸಿದರು.
ಪ್ರೀತಿಸುವುದಕ್ಕೆ ಹೆತ್ತ ಮಕ್ಕಳನ್ನೇ ಕೊಂದವರಿಗೆ ಮಾದರಿ ಭಗವದ್ಗೀತೆಯಲ್ಲಿದೆ. ಕೃಷ್ಣ ವರ್ಣಸಂಕರದ ಪಿತಾಮಹಾ. ಆದರೆ, ಭಗವದ್ಗೀತೆ ಇಂದು ವರ್ಣಸಂಕರಕ್ಕೆ ವಿರೋಧ ತಂದು ಭಾರತವನ್ನೇ ಚಿಂದಿ ಮಾಡುತ್ತಿದೆ. ಇದನ್ನು ಶ್ರೀ ಸಾಮಾನ್ಯರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಶಿವಮೊಗ್ಗದ ಮತ್ತೂರಿನಲ್ಲಿ ಸಂಕೇತಿ ಬ್ರಾಹ್ಮಣರು ನಡೆಸಿದರೆನ್ನಲಾದ ಸೋಮಯಾಗದಲ್ಲಿ ಕಣ್ಣೆದುರೇ ಮೇಕೆ ಬಲಿ ನಡೆಸಿ ಸೇವನೆ ಮಾಡಲಾಯಿತು. ಆದರೆ, ಪತ್ರಿಕೆಯ ಓದುಗರ ಪತ್ರ ವಿಭಾಗದಲ್ಲಿ ಅಲ್ಲಿ ಮೇಕೆ ಬಲಿ ನಡೆದೇ ಇಲ್ಲವೆಂದು ಬರೆದಿದ್ದಾರೆ. ಸತ್ಯವನ್ನು ಮರೆಮಾಚುವಂತಹ ಇಂತಹ ನಡೆಗಳಿಗೆ ತಡೆಯೊಡ್ಡಬೇಕು ಎಂದು ದೇವನೂರು ಸಲಹೆ ಮಾಡಿದರು.
ಬಲಾಢ್ಯನಾದ ಶಿವಾಜಿ ಗೆದ್ದು ಬಂದಾಗ ಆತನನ್ನು ಪಟ್ಟಕ್ಕೆ ಏರಿಸಲು ಶೂದ್ರ ಎಂಬ ಕಾರಣಕ್ಕೆ ಬಿಡುವುದಿಲ್ಲ. ಆಗ ಪುರೋಹಿತನೊಬ್ಬ ಬಂದು ಹಿರಣ್ಯಗರ್ಭದಲ್ಲಿ ಕೂರಿಸಿ ಮಂತ್ರ ಹೇಳಿ ರಾಜನನ್ನಾಗಿ ಮಾಡುತ್ತಾನೆ. ಆದರೆ, ಆ ಪುರೋಹಿತನನ್ನು ಇತತರು ರೇಗಿಸಿ ಕೆಟ್ಟ ಪದಗಳಿಂದ ಬೈಯುತ್ತಾರೆ. ಪೈಶಾಚಿಕ ಕಾಲವಾದ ಗುಪ್ತರ ಯುಗವನ್ನು ಸುವರ್ಣ ಯುಗ ಎನ್ನುತ್ತೇವೆ. ಇದಕ್ಕೆ ಏನು ಹೇಳಬೇಕು ಎಂದು ಅವರು ವಿಷಾದಿಸಿದರು.
ಸ್ವೀಡನ್‌ನಲ್ಲಿ ವಿಷಯಾಧಾರಿತವಾಗಿ ಹೋರಾಡುತ್ತಾರೆ. ನಮ್ಮ ಸಿದ್ದಿ ಜನಾಂಗದಲ್ಲಿ ಹಿಂದು ಮುಸ್ಲಿಂ, ಹೊಲೆಯ, ಆದಿವಾಸಿ ಇತರರೆಲ್ಲಾ ಒಟ್ಟಿಗೆ ಒಂದೇ ಕುಟುಂಬದಲ್ಲಿ ವಾಸಿಸುತ್ತಾರೆ. ಅವರು ಧರ್ಮವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆಯೇ ಹೊರತು ಅದರಿಂದ ಯಾವುದೇ ತೊಂದರೆ ಅವರಿಗಿಲ್ಲ. ಅವರಿಗೆ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಿಲ್ಲ ಎಂದು ದೇವನೂರು ಪ್ರಶ್ನಿಸಿದರು.
ಸಮಾವೇಶ ಉದ್ಘಾಟಿಸಿದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಹುಟ್ಟುವಾಗ ಇಂತಹದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಆಕಿಕೊಂಡಿರುವುದಿಲ್ಲ. ಹುಟ್ಟು ಆಕಸ್ಮಿಕ. ಹಾಗಾಗಿ ಹುಟ್ಟಿನ ಮೂಲಕ ಅಳೆಯುವ ಜಾತಿವಿನಾಶ ನಮ್ಮ ಗುರಿಯಾಗಲಿ ಎಂದು ಕರೆ ನೀಡಿದರು. ಸಂವಿಧಾನ ಗಂಡು ಹೆಣ್ಣಿನ ನಡುವೆ ಸಮಾನತೆ ಕೊಟ್ಟಿದೆ. ಎಲ್ಲರಿಗೂ ಆಯ್ಕೆಯ ಸ್ವಾತಂತ್ರ್ಯ ನೀಡಿದೆ. ಇದನ್ನು ಮೂಲಭೂತ ಸ್ವಾತಂತ್ರ್ಯ ಎಂದು ಗುರುತಿಸಲಾಗಿದೆ. ಇಂತಹ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವಂತಹ ಬೆಳವಣಿಗೆಗಳನ್ನು ಕೊನೆಗೊಳಿಸುವ ಪ್ರಯತ್ನ ಮಾಡಬೇಕು ಎಂದವರು ತಿಳಿಸಿದರು.
ಚಿಂತಕ ಪ್ರೊ.ಎಚ್.ಎಲ್.ಕೇಶವಮೂರ್ತಿ, ರೈತನಾಯಕಿ ಸುನಂದ ಜಯರಾಂ, ಮೈಸೂರಿನ ಮಾನವ ಮಂಟಪದ ಉಗ್ರನರಸಿಂಹೇಗೌಡ, ಭಾರತೀಯ ಬೌದ್ಧ ಸಭಾದ ಶಿವರಾಜ್, ವಕೀಲ ಬಿ.ಟಿ.ವಿಶ್ವನಾಥ್, ಕರ್ನಾಟಕ ಜನಶಕ್ತಿಯ ಡಾ.ಎಚ್.ವಿ.ವಾಸು, ಮಲ್ಲಿಗೆ, ರೈತಸಂಘದ ಮುದ್ದೇಗೌಡ ಮೊದಲಾದವರು ಉಪಸ್ಥಿತರಿದ್ದರು.







