ಬಿಜೆಪಿಯಿಂದ ಪ್ರಧಾನಿ ಮೋದಿ ಪದವಿ ಪ್ರಮಾಣಪತ್ರ ಬಿಡುಗಡೆ

ಕೇಜ್ರಿ ಕ್ಷಮೆಯಾಚಿಸಲಿ: ಅಮಿತ್ ಶಾ
ಅದು ನಕಲಿ ಸರ್ಟಿಫಿಕೇಟ್: ಆಪ್
ಹೊಸದಿಲ್ಲಿ, ಮೇ 9: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಹತೆಯ ಬಗ್ಗೆ ಸುಳ್ಳು ಹೇಳುತ್ತಿದ್ದಾರೆಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಡೆ ರಹಿತ ಆರೋಪ ಮಾಡಿದ ಕೆಲವು ದಿನಗಳ ಬಳಿಕ, ಪ್ರಧಾನಿಯ ಕಾಲೇಜು ಪದವಿಯ ದಾಖಲೆಯನ್ನಿಂದು ಆಳುವ ಬಿಜೆಪಿ ಬಿಡುಗಡೆಗೊಳಿಸಿದೆ. ಕೇಜ್ರಿವಾಲ್‌ಗೆ ತಿರುಗೇಟು ನೀಡಲು ಅದು ನಾಯಕರಾದ ಅಮಿತ್ ಶಾ ಹಾಗೂ ಅರುಣ್ ಜೇಟ್ಲಿಯವರನ್ನು ಕಣಕ್ಕಿಳಿಸಿದೆ.
ಅರವಿಂದ್ ಕೇಜ್ರಿವಾಲ್ ಪ್ರಧಾನಿಯ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅವರು ಪ್ರಧಾನಿಯನ್ನು ಅವಮಾನಿಸಲು ಯತ್ನಿಸಿದ್ದಾರೆ. ಕೇಜ್ರಿವಾಲ್ ಕೇವಲ ಪ್ರಧಾನಿಯ ಬಳಿ ಮಾತ್ರವಲ್ಲದೆ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಮೋದಿಯವರ ಪದವಿ ಪ್ರಮಾಣ ಪತ್ರಗಳನ್ನು ಎತ್ತಿ ತೋರಿಸುತ್ತ ಆಗ್ರಹಿಸಿದರು.
ಇದು ಸಾರ್ವಜನಿಕ ಚರ್ಚೆಯ ಅತಿ ಕೆಳಗಿನ ಮಟ್ಟವಾಗಿದೆ. ನಕಲಿ ಪದವಿಗಳಿಗಾಗಿ ತನಿಖೆ ನಡೆದು ಪ್ರಕರಣ ದಾಖಲಿಸಲ್ಪಟ್ಟಿರುವ ನಾಯಕರಿರುವ ರಾಜಕೀಯ ಪಕ್ಷವೊಂದು ಇದನ್ನು ಮಾಡುತ್ತಿದೆಯೆಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದರು.
ಇದಾಗಿ ಕೇವಲ ಒಂದು ತಾಸಿನ ಬಳಿಕ ಪತ್ರಿಕಾಗೋಷ್ಠಿ ಕರೆದ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷವು, ‘ಆ ಪದವಿಗಳು ನಕಲಿ’ ಎಂದು ಘೋಷಿಸಿತ್ತು.
ಪ್ರಧಾನಿಯ ಪದವಿ ಹಾಗೂ ಅಂಕಪಟ್ಟಿಗಳ ಪ್ರತಿಗಳನ್ನು ಪತ್ರಕರ್ತರಿಗೆ ಹಂಚಿದ ಅಮಿತ್ಶಾ, ಇಂತಹ ಕೆಲವು ವಿಚಾರಗಳು ಸ್ಪಷ್ಟೀಕರಣ ಬಯಸುತ್ತವೆಯೆಂಬುದು ನಾಚಿಕೆಗೇಡಿನ ಸಂಗತಿ ಎಂದರು.
1975-77ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪರೀಕ್ಷೆ ಬರೆಯುವುದಕ್ಕಾಗಿ ಮೋದಿ ದಿಲ್ಲಿಗೆ ಬರುತ್ತಿದ್ದ ನೆನಪುಗಳನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿ ಜೇಟ್ಲಿ ಹಂಚಿಕೊಂಡರು. ತುರ್ತು ಪರಿಸ್ಥಿತಿಯ ಸ್ವಲ್ಪವೇ ಬಳಿಕ ತಾನು ದಿಲ್ಲಿ ವಿವಿಯ ವಿದ್ಯಾರ್ಥಿ ಸಂಘದ ನಾಯಕನಾಗಿದ್ದುದರಿಂದ ತನಗಿದು ತಿಳಿದಿದೆಯೆಂದು ಅವರು ಹೇಳಿದರು.

ಮೋದಿಯವರ ಈ ಪದವಿಗಳು ನಕಲಿಯೆಂದು ಎಎಪಿ ಪ್ರಾಮಾಣಿಕವಾಗಿ ಹೇಳುತ್ತಿದೆ. ಅಂಕ ಪಟ್ಟಿಯಲ್ಲಿ ನರೇಂದ್ರ ಕುಮಾರ್ ದಾಮೋದರ್ ದಾಸ್ ಮೋದಿ ಎಂಬ ಹೆಸರಿದೆ. ಆದರೆ, ಪದವಿಯಲ್ಲಿ ಅದು ನರೇಂದ್ರ ದಾಮೋದರ್ ದಾಸ್ ಮೋದಿ ಎಂದಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 1977 ಎಂದಿದ್ದರೆ ಪದವಿಯನ್ನು 1978ರಲ್ಲಿ ಪ್ರದಾನಿಸಲಾಗಿದೆ. ಇದು ಹೇಗೆ ಸಾಧ್ಯವೆಂದು ಎಎಪಿ ನಾಯಕ ಆಶುತೋಷ್ ಪ್ರಶ್ನಿಸಿದರು.
1978ರಲ್ಲಿ ವಿಶ್ವವಿದ್ಯಾನಿಲಯದಿಂದ ‘ನರೇಂದ್ರ ದಾಮೋದರ್ ಮೋದಿ’ ಎಂಬ ಯಾವನೇ ವಿದ್ಯಾರ್ಥಿ ತೇರ್ಗಡೆಯಾಗಿ ಹೋಗಿಲ್ಲ. ರಾಜಸ್ಥಾನದ ಅಲ್ವಾರ್‌ನ ‘ನರೇಂದ್ರ ಮಹಾವೀರ ಮೋದಿ’ ಎಂಬವರು ಆ ವರ್ಷ ಪದವಿ ಪಡೆದಿದ್ದರೆಂಬುದು ಎಎಪಿಯ ಕ್ಲಿಷ್ಟ ಅಂಶವಾಗಿದೆ. ಕಳೆದ ತಿಂಗಳು ಕೇಜ್ರಿವಾಲ್ ಪ್ರಧಾನಿಯ ಶೈಕ್ಷಣಿಕ ವಿವರ ಆರೋಪದ ನೀಡುವಂತೆ ಆಗ್ರಹಿಸಿದಾಗ ಅದನ್ನೊದಗಿಸುವಂತೆ ಕೇಂದ್ರೀಯ ಮಾಹಿತಿ ಆಯೋಗವು ದಿಲ್ಲಿ ಹಾಗೂ ಗುಜರಾತ್ ವಿವಿಗಳಿಗೆ ಆದೇಶ ನೀಡಿತ್ತು. ಮೋದಿ ಬಾಹ್ಯ ವಿದ್ಯಾರ್ಥಿಯಾಗಿ ಎಂಎ ಪೂರೈಸಿದ್ದು, ಶೇ.62.3 ಅಂಕಗಳಿಸಿದ್ದಾರೆಂದು ಗುಜರಾತ್ ವಿವಿ ತಿಳಿಸಿದೆ. ಆದರೆ, ದಿಲ್ಲಿ ವಿವಿ ಈವರೆಗೆ ಯಾವುದೇ ವಿವರ ನೀಡಿಲ್ಲ.







