2ನೆ ಮಗು ಬೇಡ ಎನ್ನುವ ಚೀನಾದ ಉದ್ಯೋಗಸ್ತ ಮಹಿಳೆಯರು

ಬೀಜಿಂಗ್, ಮೇ 9: ಚೀನಾದ ಜನಸಂಖ್ಯೆ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ, ದಂಪತಿಯೊಂದು ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡುವ ಅಲ್ಲಿನ ಸರಕಾರದ ಇತ್ತೀಚಿನ ನೀತಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ 60 ಶೇಕಡ ಕೆಲಸ ಮಾಡುವ ತಾಯಂದಿರು ಎರಡನೆ ಮಗುವನ್ನು ಹೊಂದಲು ಮುಂದೆ ಬರುತ್ತಿಲ್ಲ.
ಅದೇ ವೇಳೆ, ಈವರೆಗೆ ಮಕ್ಕಳನ್ನೇ ಹೆರದ 29.39 ಶೇಕಡ ಮಹಿಳೆಯರ ಪೈಕಿ 20.48 ಶೇಕಡ ಮಂದಿ ತಮಗೆ ಮಕ್ಕಳೇ ಬೇಡ ಎಂದು ಹೇಳಿದ್ದಾರೆ ಎಂದು ಚೀನಾದ ಉದ್ಯೋಗ ನೇಮಕಾತಿ ಸೈಟ್ ಝಾವೊಪಿನ್.ಕಾಮ್ ‘ತಾಯಂದಿರ ದಿನಾಚರಣೆ’ಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ. ಈ ವಿಷಯವನ್ನು ಸರಕಾರಿ ಒಡೆತನದ ‘ಚೈನಾ ಡೇಲಿ’ ವರದಿ ಮಾಡಿದೆ.
ಒಟ್ಟು 14,290 ಮಹಿಳೆಯರನ್ನು ವೆಬ್‌ಸೈಟ್ ತನ್ನ ಸಮೀಕ್ಷೆಗಾಗಿ ಸಂದರ್ಶನ ಮಾಡಿತ್ತು. ಕೆಲಸ ಮತ್ತು ಜೀವನದ ಆಯ್ಕೆಗಳ ಬಗ್ಗೆ ಅವರನ್ನು ಪ್ರಶ್ನಿಸಿತ್ತು.
ಮಕ್ಕಳನ್ನು ಯಾಕೆ ಹೊಂದಲು ಇಷ್ಟಪಡುವುದಿಲ್ಲ ಎಂಬ ಪ್ರಶ್ನೆಗೆ, ಮಕ್ಕಳನ್ನು ಬೆಳೆಸುವ ಖರ್ಚನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬುದಾಗಿ 56 ಶೇಕಡಕ್ಕೂ ಅಧಿಕ ಮಂದಿ ಉತ್ತರಿಸಿದ್ದಾರೆ.
ಎರಡನೆ ಕಾರಣವೆಂದರೆ, ಮಕ್ಕಳ ಪಾಲನೆಗೆ ಬೇಕಾದ ಸಮಯ, ಶಕ್ತಿ ಮತ್ತು ಏಕಾಗ್ರತೆಯ ಕೊರತೆ.
ತಾಯಂದಿರಾಗುವುದಕ್ಕಾಗಿ ಕೆಲಸವನ್ನು ಬಿಡಲು ತಾವು ಸಿದ್ಧರಿಲ್ಲ ಎಂದು 70 ಶೇಕಡಕ್ಕಿಂತಲೂ ಅಧಿಕ ಮಹಿಳೆಯರು ಹೇಳುತ್ತಾರೆ.







