ಈ ತಿಂಗಳಾಂತ್ಯದೊಳಗೆ ಸಂಪುಟ ಪುನಾರಚನೆ

ಹೊಸಬರಿಗೆ ಅವಕಾಶ: ಸಿಎಂ ಸಿದ್ದರಾಮಯ್ಯ
ಮೈಸೂರು, ಮೇ 9: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗಿತ ಪಡಿಸಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ತಿಳಿಸಿರುವ ಅವರು, ಕೆಲವರನ್ನು ಕೈಬಿಟ್ಟು, ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಪ್ರಕಟಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸಂಪುಟ ಪುನಾರಚನೆ ಎಂದರೆ ಸಂಪೂರ್ಣ ಬದಲಾವಣೆ ಅಲ್ಲ. ಕೆಲವರನ್ನು ಕೈಬಿಟ್ಟು, ಮತ್ತೆ ಕೆಲವರನ್ನು ಸೇರ್ಪಡೆ ಮಾಡಿಕೊಳ್ಳುವುದಷ್ಟೇ ಎಂದು ನುಡಿದರು. ರಾಜ್ಯದ ಎಲ್ಲ ಕಡೆ ಮಳೆಯಾಗಲಿ ಎಂದು ಕಾಯುತ್ತಿದ್ದೇವೆ. ಅಲ್ಲಲ್ಲಿ ಮಳೆ ಆರಂಭಗೊಂಡ ಶುಭ ಸೂಚನೆಯೂ ದೊರಕಿದೆ. ಈ ತಿಂಗಳ ಅಂತ್ಯದಲ್ಲಿ ಸಂಪುಟ ಪುನಾರಚನೆ ಮಾಡಲಾಗುವುದು. ಪುನಾರಚನೆ ಎಂದರೆ ಇರುವವರನ್ನೆಲ್ಲಾ ಬದಲಾವಣೆ ಮಾಡುವುದಲ್ಲ. ಕೆಲವರನ್ನು ಮಾತ್ರ ಕೈಬಿಡಲಾಗುತ್ತದೆ. ಆದರೆ, ಮಂತ್ರಿಗಳನ್ನು ಕೈಬಿಡುವುದಕ್ಕೆ ಯಾವುದೇ ಮಾನದಂಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಮೂರು ವರ್ಷಗಳ ಆಡಳಿತ ಸಂಪೂರ್ಣ ತೃಪ್ತಿ ತಂದಿದೆ. ಕಾರಣ ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇವೆ. ನಮ್ಮ ಮೇಲೆ ಯಾವುದೇ ಹಗರಣ ಇಲ್ಲ, ಯಾವ ಆರೋಪಗಳೂ ಇಲ್ಲ. ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪಗಳನ್ನು ಮಾಡಿವೆ ಅಷ್ಟೇ. ಸರಕಾರ ಸಂಪೂರ್ಣ ವಿಶ್ವಾಸಭರಿತವಾಗಿ ಕೆಲಸ ಮಾಡಿದೆ ಎಂದು ನುಡಿದರು.





