ಬಂಟ್ವಾಳ: ವಿವಾಹಿತ ಯುವಕ ನಾಪತ್ತೆ
ಬಂಟ್ವಾಳ, ಮೇ 10: ಸಜಿಪಮೂಡ ಗ್ರಾಮದ ವ್ಯಕ್ತಿಯೊಬ್ಬರು ಹದಿನೈದು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ. ಇಲ್ಲಿನ ಕೋಲ್ಸ ಸಾರ್ಟ್ ಮನೆ ನಿವಾಸಿ ಸುಧಾಕರ(25) ನಾಪತ್ತೆಯಾದವರಾಗಿದ್ದು, ಅವರ ಪತ್ನಿ ಯಶೋಧಾ ಪೊಲೀಸರಿಗೆ ದೂರು ನೀಡಿದವರು.
ಮಿತ್ತಮಜಲು ಎಂಬಲ್ಲಿರುವ ಗಿರಿ ಅಲ್ಯೂಮಿನಿಯಂನಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ ನಾಲ್ಕು ವರ್ಷದ ಹಿಂದೆ ಯಶೋಧಾರನ್ನು ವಿವಾಹವಾಗಿದ್ದು, ಒಂದೂವರೆ ವರ್ಷದ ಹೆಣ್ಣುಮಗುವಿದೆ. ಸುಧಾಕರ ಮದುವೆ ಸಂದರ್ಭ ಹಾಗೂ ಬಳಿಕ ಸಾಲಮಾಡಿದ್ದು, ಚಿನ್ನಾಭರಣಗಳನ್ನು ಅಡವಿಟ್ಟು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು.
ಎ.24ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೆಲಸ ನಿರ್ವಹಿಸುವ ಅಂಗಡಿಗೆ ತೆರಳಿ ವಿಚಾರಿಸಿದಾಗ ಎ.26ರಂದು ಬೆಳಗ್ಗೆ ಅಂಗಡಿಯಿಂದ ತೆರಳಿದ್ದಾರೆಂದು ತಿಳಿಸಿದ್ದಾರೆ. ಆ ಬಳಿಕ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ದೂರು ನೀಡುತ್ತಿರುವುದಾಗಿ ಪತ್ನಿ ಯಶೋಧಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.