ಕೊಡಗು ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ

ಮಡಿಕೇರಿ, ಮೇ 10: ಕೊಡಗು ಜಿಲ್ಲಾ ಆಹಾರ ಇಲಾಖೆಯ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಜಾಗೃತಾ ಸಮಿತಿಯ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳು ಸರಕಾರದ ಆದೇಶದಂತೆ ನಡೆಯಬೇಕು, ಜೊತೆಗೆ ಜಿಲ್ಲೆಯ ಪಡಿತರ ವ್ಯವಸ್ಥೆ ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆ ಎಲ್ಲ ಹಾಲಿ ಸದಸ್ಯರು ಹಾಗೂ ಅಧಿಕಾರೇತರ ಸದಸ್ಯರು ಆಗಿಂದಾಗ್ಗೆ ಪರಿಶೀಲಿಸಿ ಸಲಹೆ, ಮಾರ್ಗದರ್ಶನ ನೀಡಬೇಕು ಎಂದು ಸಚಿವರು ಹೇಳಿದರು. ಪಡಿತರ ವಿತರಣೆ ಬಗ್ಗೆ ತಿಂಗಳಿಗೆ ಒಮ್ಮೆ ಉಪ ನಿರ್ದೇಶಕರ ಕಚೇರಿಯಲ್ಲಿ ಸಭೆ ಸೇರಿ ಚರ್ಚಿಸುವುದು ಮತ್ತು ದೂರುಗಳೇನಾದರೂ ಇದ್ದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು. ಪ್ರತಿಯೊಬ್ಬ ಪಡಿತರ ಚೀಟಿದಾರರು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ನೀಡಬೇಕಾಗಿದೆ. ಈ ಕಾರ್ಯಕ್ರಮ ಮುಗಿಯುವವರೆಗೆ ಹೊಸದಾಗಿ ಯಾವುದೇ ಪಡಿತರ ಚೀಟಿಗಳನ್ನು ನೀಡುವುದನ್ನು ಸ್ಥಗಿತಗೊಳಿಸಲು ಹಾಗೂ ಅನಂತರ ಹೊಸದಾಗಿ ಪಡಿತರ ಚೀಟಿ ಕೋರಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಸಿ ವಿಲೇವಾರಿಗೊಳಿಸುವಂತೆ ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಸೀಮೆಎಣ್ಣೆ ಪ್ರಮಾಣ ಜಾಸ್ತಿ ಮಾಡಬೇಕು, ಅರ್ಹ ಅರ್ಜಿದಾರರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು, ಸಂಚಾರಿ ವಾಹನಗಳಲ್ಲಿ ಪಡಿತರ ವಿತರಣಾ ವ್ಯವಸ್ಥೆಯಿಂದ ಕೆಲವು ಕಡೆ ತಡವಾಗಿ ಬರುವ ಕಾರ್ಡ್‌ದಾರರಿಗೆ ಪಡಿತರ ಸಿಗದೆ ತೊಂದರೆಯಾಗುವುದರಿಂದ ಅಂತಹ ಕಡೆ ಖಾಯಂ ನ್ಯಾಯಬೆಲೆ ಅಂಗಡಿ ತೆರೆಯಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರೇತರ ಸದಸ್ಯರು ಸಚಿವರಲ್ಲಿ ಮನವಿ ಮಾಡಿದರು. ಸೀಮೆ ಎಣ್ಣೆ ಸಂಬಂಧ 5 ಲೀ. ನಿಂದ 4 ಲೀ.ಗೆ ಇಳಿಸಲಾಗಿದೆ. ಇನ್ನು ನ್ಯಾಯಬೆಲೆ ಅಂಗಡಿ ಬಗ್ಗೆ ಸಹಕಾರಿ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ಮುಂದೆ ಬಂದರೆ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಚಿವರು ಉಪ ನಿರ್ದೇಶಕರಿಗೆ ಆದೇಶ ನೀಡಿದರು.
ಪಡಿತರ ಧಾನ್ಯಗಳು ಸಗಟು ಮಳಿಗೆಗೆ ದಾಸ್ತಾನು ಬಂದಾಗ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಡೆಲಿವರಿ ನೀಡುವ ಸಂದರ್ಭದಲ್ಲಿ ಅಧಿಕಾರೇತರ ಸದಸ್ಯರ ಮೊಬೈಲ್‌ಗಳಿಗೆ ಎಸ್‌ಎಂಎಸ್ ಕಳುಹಿಸುವಂತೆ ಸಚಿವರು ತಿಳಿಸಿದರು.
ಸಭೆಯಲ್ಲಿ ಮೀರ್ ಅನೀಸ್ ಅಹ್ಮದ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವರ್ತಿಕಾ ಕಟಿಯಾರ್, ಅಧಿಕಾರೇತರ ಸದಸ್ಯರಾದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪುಟ್ಟಲಕ್ಷ್ಮೀ, ವಿ.ಪಿ ಸುರೇಶ್, ಮರ್ವಿನ್ ಲೋಬೋ, ನವೀನ್, ಆಹಾರ ಇಲಾಖಾ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ಹಾಜರಿದ್ದರು.







