ಮೈಸೂರಿನ ಇಬ್ಬರು ಸಾವು: 5ಮಂದಿಗೆ ಗಾಯ
ಮಡಿಕೇರಿಯ ಕೆದಕಲ್ ಸಮೀಪ ವಾಹನ ಪಲ್ಟಿ

ಮಡಿಕೇರಿ, ಮೇ 10: ಚಾಲಕನ ನಿಯಂತ್ರಣ ತಪ್ಪಿದ ಜಿಪ್ಸಿಯೊಂದು ಪಲ್ಟಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಯುವಕ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ಮಡಿಕೇರಿ ಸಮೀಪ ಕೆದಕಲ್ ಎಂಬಲ್ಲಿ ನಡೆದಿದೆ.
ಮೈಸೂರಿನ ಸಿಸ್ಕೊ ಇನ್ಫೋಟೆಕ್ ಸಂಸ್ಥೆಯ ಉದ್ಯೋಗಿ ಚೈತ್ರಾ (25) ಹಾಗೂ ಸದನ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸದನ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಈತ ಸೇರಿದಂತೆ ತೀವ್ರವಾಗಿ ಗಾಯಗೊಂಡಿದ್ದ ಐದು ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಸದನ್ ಚಿಕಿತ್ಸೆ ಫಲಕಾರಿಯಾಗದೇ ಮೃಪಟ್ಟಿದ್ದಾರೆ.
ಎಲ್ಲರಿಗೂ ತಲೆಗೆ ಬಲವಾದ ಪೆಟ್ಟಾಗಿದೆ. ಆದರೆ ಚಾಲಕ ಜೀವಿತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಮಿಥುನ್, ನಂದಿನಿ, ರೇಣುಕಾ ಹಾಗೂ ವಿನಯ್ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜಾಲಿ ಮೂಡ್‌ನಲ್ಲಿದ್ದವರಿಗೆ ಕಾದಿತ್ತು ಆಘಾತ: ಏಳು ಮಂದಿ ಸ್ನೇಹಿತರ ತಂಡ ಮಂಗಳವಾರ ಬೆಳಗ್ಗೆ 7 ಗಂಟೆಗೆ ಮೈಸೂರಿನ ರಾಮಸ್ವಾಮಿ ಸರ್ಕಲ್‌ನಿಂದ ಕೊಡಗಿನ ತಲಕಾವೇರಿಗೆ ಪ್ರಯಾಣ ಬೆಳೆಸಿದ್ದಾರೆ.
ತೆರೆದ ಜಿಪ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವತಿಯರು ಸೇರಿದಂತೆ 7 ಮಂದಿ ಜಾಲಿ ಮೂಡ್‌ನಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೇಕೇ ಹಾಕುತ್ತಾ ಸಾಗುತ್ತಿದ್ದ ಸ್ನೇಹಿತರ ಜಿಪ್ಸಿ ಸುಂಟಿಕೊಪ್ಪದ ಬಳಿ ಬಸ್‌ವೊಂದಕ್ಕೆ ಸ್ವಲ್ಪ ತಾಗಿದ್ದು, ನಿಲ್ಲಿಸದೆ ಬಂದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡಂತೆ ಅತಿ ವೇಗವಾಗಿ ಬರುತ್ತಿದ್ದ ಜಿಪ್ಸಿಯನ್ನು ಕೆಲವರು ಹಿಂಬಾಲಿಸಿದ್ದಾರೆ. ಕೆದಕಲ್ ಬಳಿಯ ತಿರುವಿನಲ್ಲಿ ಬಲವಾಗಿ ಬ್ರೇಕ್ ಹಾಕಿದ ಕಾರಣ ಅತಿವೇಗದಲ್ಲಿದ್ದ ಜಿಪ್ಸಿ ನೆಲಕ್ಕುರುಳಿದೆ. ಈ ಸಂದರ್ಭ ವಾಹನದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಚೈತ್ರಾ ಎಂಬವರ ತಲೆ ರಸ್ತೆಗೆ ಬಡಿದಿದೆ.







